ವ್ಯಾಪಕ ಟೀಕೆ ಬಳಿಕ ತನ್ನ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ಸಚಿವ ಉಮೇಶ್ ಕತ್ತಿ

Update: 2021-04-28 14:45 GMT

ಬೆಂಗಳೂರು, ಎ. 28: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪಡಿತರ ಕಾರ್ಡ್ ಗಳಿಗೆ ನೀಡುತ್ತಿರುವ ಅಕ್ಕಿಯನ್ನು ಕಡಿತ ಮಾಡಿರುವುದು ಏಕೆ?' ಎಂದು ಪ್ರಶ್ನಿಸಿದ ರೈತರೊಬ್ಬರಿಗೆ 'ನೀವು ಸಾಯೋದೆ ಒಳ್ಳೆಯದು' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಆ ಬಳಿಕ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತನ್ನ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿದ್ದ ಆಹಾರ ಸಚಿವ ಉಮೇಶ್ ಕತ್ತಿ, ಪ್ರತಿಪಕ್ಷಗಳು ಮತ್ತು ಸಾರ್ವಜನಿಕರ ವಿರೋಧ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ಉಮೇಶ್ ಕತ್ತಿ ಹೇಳಿಕೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

'ಮಾನಸಿಕ ವಿಕೃತಿ': 'ಕೊರೋನ ಸಂಕಷ್ಟದಲ್ಲಿ ಹಸಿವಿನಿಂದ ಬಳಲುವ ಜನರ ನೆರವಿಗೆ ಬರಬೇಕಾದ ಆಹಾರ ಸಚಿವರೇ ದರ್ಪದ ಉತ್ತರ ನೀಡಿ ಮಾನಸಿಕ ವಿಕೃತಿ ಮೆರೆದಿದ್ದಾರೆ. ರಾಜ್ಯ ಸರಕಾರ ಪಡಿತರ ಅಕ್ಕಿ ಕಡಿತಗೊಳಿಸಿದನ್ನು ಸಚಿವರಿಗೆ ಕರೆ ಮಾಡಿ ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಸಾಯೋದು ಒಳ್ಳೆಯದು ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿರುವುದು ಅತ್ಯಂತ ಅಮಾನವೀಯ. ಇದನ್ನು ತೀವ್ರವಾಗಿ ಖಂಡಿಸುವೆ. ಜನಸಾಮಾನ್ಯರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದ ಇಂತಹ ಸಚಿವರನ್ನು ಸಂಪುಟದಿಂದ ಕಿತ್ತೊಗೆಯುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಅಣಕು ಶವಯಾತ್ರೆ

ಸಚಿವ ಉಮೇಶ್ ಕತ್ತಿ ಅವರ ಹೇಳಿಕೆ ಖಂಡಿಸಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಆವರಣದಲ್ಲಿ ಬುಧವಾರ ಸಂಜೆ ಅಣಕು ಶವಯಾತ್ರೆ ಹಾಗೂ ಅಣಕು ಅಂತ್ಯಸಂಸ್ಕಾರವನ್ನು ಮಾಡಲಾಯಿತು.

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಯುವ ಮುಖಂಡರಾದ ನಲಪಾಡ್, ಮನೋಹರ್, ಸಲೀಂ ಮತ್ತಿತರರು ಪಾಲ್ಗೊಂಡರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ತಮ್ಮ ಬೇಜವಾಬ್ದಾರಿ ಹೇಳಿಕೆಗೆ ಕೇವಲ ಕ್ಷಮಾಪಣೆ ಕೇಳಿದರೆ ಸಾಕಾಗುವುದಿಲ್ಲ. ಅವರು ಅಕ್ಕಿ ಕಡಿತವನ್ನು ಪ್ರಶ್ನಿಸಿದ ವ್ಯಕ್ತಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಈ ಸರಕಾರಕ್ಕೆ ಮಾನ-ಮಾರ್ಯಾದೆ ಇದ್ದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಉಮೇಶ್ ಕತ್ತಿ ಅವರು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಈ ಸರ್ಕಾರಕ್ಕೆ ಜನತೆಯನ್ನು ಸಾವಿನ ಮನೆಗೆ ಕಳಿಸುವ ಧಾವಂತವಿದೆ. ಇವರ ಆಸಕ್ತಿ ಜನತೆಯನ್ನು ಉಳಿಸುವುದಲ್ಲ, ಕಳಿಸುವುದು. ಈ ಸರ್ಕಾರಕ್ಕೆ ಸಂವೇದನೆಯ ಲವಲೇಶವೂ ಇಲ್ಲ. ಮಂತ್ರಿಗಳದ್ದಂತೂ ಕಠೋರ ಹೃದಯ. ಯಡಿಯೂರಪ್ಪ ಅವರೇ, ಬಡವರ ಹಸಿವನ್ನು ಹಂಗಿಸಿ ಸಾಯಲು ಹೇಳಿದ ಸಚಿವ ಉಮೇಶ್ ಕತ್ತಿಯವರ ರಾಜೀನಾಮೆ ಪಡೆದು, ಆತ್ಮಹತ್ಯಾ ಪ್ರಚೋದನೆಯ ಕೇಸ್ ದಾಖಲಿಸಿ.

-ಕಾಂಗ್ರೆಸ್ (ಟ್ವೀಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News