ಮೊದಲ ದಿನದ ಕೊರೋನ ಕರ್ಫ್ಯೂ: ರಾಜ್ಯದಲ್ಲಿ ಜನಜೀವನ ಸಂಪೂರ್ಣ ಸ್ತಬ್ಧ
ಬೆಂಗಳೂರು, ಎ. 28: ರಾಜ್ಯದಲ್ಲಿ ದಿನೇ ದಿನೇ ಏರುಗತಿಯಲ್ಲಿರುವ ಕೊರೋನ ಸೋಂಕಿನ ಅಬ್ಬರ, ಸಾವಿನ ಪ್ರಕರಣಗಳು ಜನ ಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದ್ದರೆ, ಸರಕಾರ ಜಾರಿಗೊಳಿಸಿರುವ ಕೊರೋನ ಕರ್ಫ್ಯೂ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ.
ಈ ನಡುವೆ ಸೋಂಕಿನ ಭೀತಿಯಿಂದ ತಪ್ಪಿಸಿಕೊಳ್ಳಲು ಕರ್ಫ್ಯೂ ಜಾರಿಯಿಂದ ಉದ್ಯೋಗವಿಲ್ಲದ ದೊಡ್ಡಸಂಖ್ಯೆಯ ವಲಸೆ ಕಾರ್ಮಿಕರು ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳನ್ನು ತೊರೆಯಲು ಸಾರಿಗೆ ವ್ಯವಸ್ಥೆ ಇಲ್ಲದೆ ಬಸ್ ನಿಲ್ದಾಣಗಳಲ್ಲಿ ಅನ್ನ-ನೀರಿಲ್ಲದೆ ಕಂಗಾಲಾದ ದೃಶ್ಯ ಎಲ್ಲೆಡೆ ಕಂಡುಬಂತು.
ಬೆಳಗ್ಗೆ ಹಾಲು, ತರಕಾರಿ, ದಿನಸಿ ಸಹಿತ ಅಗತ್ಯ ವಸ್ತುಗಳ ಖರೀದಿಗೆ ಕೊರೋನ ಕರ್ಫ್ಯೂವಿನಿಂದ ವಿನಾಯಿತಿ ನೀಡಲಾಗಿತ್ತು. ಆ ಬಳಿಕ ಬೀದಿ ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರನ್ನು `ಹೋಗಿ..ಹೋಗಿ ಇಲ್ಲಿಂದ' ಎಂದು ಪೊಲೀಸರು ಲಾಠಿ ಬೀಸುತ್ತಿದ್ದು, ಜನರ ಆಕ್ರೋಶಕ್ಕೂ ಕಾರಣವಾಗಿತ್ತು. `ಕೊರೋನದಿಂದ ಜೀವ ಉಳಿಸಿಕೊಂಡರೂ, ಸರಕಾರ ಹೇರಿರುವ ಕರ್ಫ್ಯೂ ನಮ್ಮನ್ನು ಹಸಿವಿನಿಂದ ಸಾಯಿಸುವುದಿಲ್ಲ ಎಂಬುದಕ್ಕೆ ಏನು ಖಾತ್ರಿ' ಎಂದು ಬೀದಿ ವ್ಯಾಪಾರಿಗಳ ಪ್ರಶ್ನೆಯಾಗಿದೆ.
ಜನಜೀವನ ಸ್ತಬ್ಧ: ಕೊರೋನ ಸೋಂಕಿನ ಎರಡನೆ ಅಲೆ ನಿಯಂತ್ರಣಕ್ಕೆ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು, ಕರಾವಳಿಯ ದಕ್ಷಿಣ ಕನ್ನಡ, ಕಲ್ಯಾಣ ಕರ್ನಾಟಕದ ಕಲಬುರಗಿ, ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಸರಕಾರ ಹೇರಿದ್ದ ಕೊರೋನ ಕರ್ಫ್ಯೂ ಹಿನ್ನೆಲೆಯಲ್ಲಿ ಆಸ್ಪತ್ರೆ, ಔಷಾಧಾಲಯ ಸೇರಿದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳ ಸಂಪೂರ್ಣ ಬಂದ್ ಆಗಿದ್ದವು. ಜನಜೀವನ ಅಕ್ಷರಶಃ ಸ್ತಬ್ಧವಾಗಿದ್ದು, ಇಡೀ ರಾಜ್ಯದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಖರೀದಿಗೆ ಮುಗಿಬಿದ್ದ ಜನತೆ: ಹಾಲು, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 6 ರಿಂದ 10 ಗಂಟೆಯ ವರೆಗೆ ಕರ್ಫ್ಯೂವಿನಿಂದ ವಿನಾಯಿತಿ ನೀಡಲಾಗಿತ್ತು. ಆದರೆ, ಬೆಳ್ಳಂಬೆಳಗ್ಗೆಯೇ ಅಂಗಡಿ-ಮುಂಗಟ್ಟುಗಳನ್ನು ತೆರೆಯುತ್ತಿದ್ದಂತೆ ಸಾರ್ವಜನಿಕರು ಮುಗಿಬಿದ್ದು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದುದ್ದು ಕಂಡುಬಂತು. ಬಹುತೇಕ ಮಾರುಕಟ್ಟೆಗಳಲ್ಲಿ ಜನತೆ ಮಾಸ್ಕ್, ಅಂತರ ಮರೆತು ತಮ್ಮ ವಸ್ತುಗಳ ಮಾರಾಟ ಮತ್ತು ಖರೀದಿಯಲ್ಲಿ ತೊಡಗಿದ್ದು ನಡೆಯಿತು. ಬೆಳಗ್ಗೆ 10 ಗಂಟೆಯ ಬಳಿಕ ಎಲ್ಲ ರೀತಿಯ ವ್ಯಾಪಾರ ವಹಿವಾಟು ಸ್ತಬ್ಧವಾಗಿತ್ತು.
ಬೀದಿಗಿಳಿದ ಪೊಲೀಸರು: ಸಾರಿಗೆ ಬಸ್ ಸೇರಿದಂತೆ ಯಾವುದೇ ವಾಹನ ಸಂಚಾರ ಇಲ್ಲದೆ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ. ತುರ್ತು ವಾಹನ ಹಾಗೂ ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು. ಪ್ರಮುಖ ರಸ್ತೆಗಳು ಸೇರಿದಂತೆ ಜನವಸತಿ ಪ್ರದೇಶಗಳಲ್ಲಿಯೂ ಜನರ ಓಡಾಟಕ್ಕೆ ನಿರ್ಬಂಧ ಹೇರಿದ್ದರಿಂದ ಜನ ಸಂಚಾರ ಬಹಳ ವಿರಳವಾಗಿತ್ತು. ರಾಜ್ಯದ ಬಹುತೇಕ ರಸ್ತೆಗಳಲ್ಲಿ ಬೀದಿಗಿಳಿದ ಪೊಲೀಸರು ಪ್ರತಿಯೊಂದು ವಾಹನಗಳನ್ನು ಪರಿಶೀಲನೆ ನಡೆಸಿ, ಅಗತ್ಯ ಸೇವೆಗಳ ವಾಹನಗಳಿಗಷ್ಟೇ ಅವಕಾಶ ನೀಡುತ್ತಿದ್ದರು. ಅಲ್ಲದೆ, ಅನಗತ್ಯ ಸಂಚಾರ ಮಾಡುವವರ ವಾಹನಗಳನ್ನು ಸೀಝ್ ಮಾಡಿಕೊಳ್ಳುತ್ತಿದುದು ಕಂಡುಬಂತು.
ಕೆಲಸಕ್ಕೆ ಬಾರದ ವಿನಾಯಿತಿ: ಉತ್ಪಾದನಾ ವಲಯ, ನಿರ್ಮಾಣ ಕ್ಷೇತ್ರ ಮತ್ತು ಕೃಷಿ ಚಟುವಟಿಕೆಗಳಿಗೆ ಕರ್ಫ್ಯೂವಿನಿಂದ ವಿನಾಯಿತಿ ನೀಡಲಾಗಿತ್ತಾದರೂ, ಬಸ್, ಆಟೋರಿಕ್ಷಾ ಸೇರಿದಂತೆ ಸಾರಿಗೆ ಸಂಚಾರವಿಲ್ಲದೆ ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳಲು ಸಾಧ್ಯವಾಗದೆ ಪರದಾಟ ನಡೆಸಿದರು. ಅಲ್ಲದೆ, ನಿರ್ಮಾಣ ಚಟುವಟಿಕೆಗಳಿಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಮಾತ್ರವೇ ಅವಕಾಶ ಕಲ್ಪಿಸಿದ್ದರಿಂದ ಮರಳು, ಜಲ್ಲಿ, ಕಬ್ಬಿಣ, ಸಿಮೆಂಟ್ ಸಹಿತ ಇನ್ನಿತರ ಸಾಮಗ್ರಿಗಳು ಸಿಗದೆ ತೊಂದರೆ ಅನುಭವಿಸಬೇಕಾಯಿತು.
ಪಾಸ್ ಗೊಂದಲ: ಕೋವಿಡ್ ಸಂಕಷ್ಟದಲ್ಲಿ ಅಗತ್ಯ ಸೇವೆಗಳು ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿಗಳು, ಸಣ್ಣ ವ್ಯಾಪಾರಸ್ಥರು, ಕೃಷಿ ಉತ್ಪನ್ನ ಮರುಕಟ್ಟೆ ವ್ಯಾಪಾರಸ್ಥರು ಸೇರಿದಂತೆ ಆಸ್ಪತ್ರೆಗೆ ತೆರಳುವ ಸಾರ್ವಜನಿಕರು ಪಾಸ್‍ಗಳಿಗಾಗಿ ಪೊಲೀಸ್ ಠಾಣೆಗಳಿಗೆ ಎಡತಾಕಿದ್ದು ನಡೆಯಿತು. ಆ ಬಳಿಕ ಖುದ್ದು ರಾಜ್ಯ ಪೊಲೀಸ್ ನಿರ್ದೇಶಕರು ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರು, `ಲಾಕ್‍ಡೌನ್ ಅವಧಿಯಲ್ಲಿ ಬೆಂಗಳೂರು ನಗರದ ಪೊಲೀಸ್ ವತಿಯಿಂದ ಯಾವುದೇ ರೀತಿಯ ಪಾಸ್‍ಗಳನ್ನು ವಿತರಣೆ ಮಾಡುತ್ತಿಲ್ಲ. ಸರಕಾರದ ಆದೇಶದಲ್ಲಿ ವಿನಾಯಿತಿ ನೀಡಿರುವ ಎಲ್ಲ ಸೇವೆಗಳಲ್ಲಿ ಕಾರ್ಯ ನಿರ್ವಹಿಸುವವರು ತಮ್ಮ ಸ್ಥಳಗಳಿಗೆ ಗುರುತಿನ ಚೀಟಿ ಅಥವಾ ಸಮರ್ಥನೀಯ ದಾಖಲೆಗಳನ್ನು ಹಾಜರುಪಡಿಸಿ ಪ್ರಯಾಣಿಸಬಹುದು' ಎಂದು ಸ್ಪಷ್ಟನೆ ನೀಡಿದರು.