ಆಪ್ತ ಮಿತ್ರ ಸಹಾಯವಾಣಿ ಮೂಲಕ ರೋಗಿಗಳಿಗೆ ಮಾರ್ಗದರ್ಶನ: ಸಚಿವ ಡಾ.ಕೆ.ಸುಧಾಕರ್

Update: 2021-04-28 15:20 GMT

ಬೆಂಗಳೂರು, ಎ.28: ಆಪ್ತಮಿತ್ರ ಸಹಾಯವಾಣಿಯ ಮೂಲಕ ಎಲ್ಲ ಕೋವಿಡ್ ರೋಗಿಗಳಿಗೆ ಕರೆ ಮಾಡಿ ಸೂಕ್ತ ಮಾರ್ಗದರ್ಶನ ನೀಡಲು ಸಿದ್ಧತೆ ನಡೆದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಸಿಟಿವ್ ಆದ ರೋಗಿಗಳಿಗೆ 3-4 ಗಂಟೆಗಳೊಳಗೆ ಆಪ್ತಮಿತ್ರದ ಮೂಲಕ ಕರೆ ಮಾಡಲಾಗುವುದು. ವೈದ್ಯಕೀಯ ಹಿನ್ನೆಲೆ ಇರುವ ತಜ್ಞರು, ಪದವೀಧರರು ಕರೆ ಮಾಡಿ ಮಾರ್ಗದರ್ಶನ ನೀಡುತ್ತಾರೆ ಎಂದರು.

ರೋಗ ಲಕ್ಷಣ ಇರುವವರಿಗೆ ಇತರೆ ಸಹ-ಅಸ್ವಸ್ಥತೆ, ದೇಹಸ್ಥಿತಿ ಮೊದಲಾದವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ನಂತರ ಅವರಿಗೆ ಮನೆ ಆರೈಕೆ, ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆ ಸೇರಿಸುವ ಬಗ್ಗೆ ನಿರ್ಧರಿಸಲಾಗುತ್ತದೆ. ಕೆಲವರು ಫೋನ್‍ಗೆ ಸಿಗುವುದಿಲ್ಲ. ಅವರನ್ನು ಪ್ರತ್ಯೇಕವಾಗಿ ಸಂಪರ್ಕಕ್ಕೆ ಸಿಗದವರು ಎಂದು ಗುರುತಿಸಿ, ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಬಳಿಕ ಪೊಲೀಸರು ಸಂಪರ್ಕ ಪತ್ತೆ ಮಾಡುತ್ತಾರೆ. ಬೆಂಗಳೂರಿನ ಪ್ರತಿ ವಲಯದಲ್ಲಿ ಸಹಾಯವಾಣಿ ಸಿಬ್ಬಂದಿ ಇದ್ದು, ಅವರು ಮಾಹಿತಿ ಪಡೆಯುತ್ತಾರೆ ಎಂದು ಅವರು ವಿವರಿಸಿದರು.

ಸಹಾಯವಾಣಿ ಮೂಲಕ ಪ್ರತಿಯೊಬ್ಬ ಸೋಂಕಿತ ವ್ಯಕ್ತಿಗೂ ತ್ವರಿತವಾಗಿ ಮತ್ತು ಸಮರ್ಪಕವಾಗಿ ಮಾರ್ಗದರ್ಶನ ನೀಡಲು 6-8 ಸಾವಿರ ಸಿಬ್ಬಂದಿ ಬೇಕಾಗುತ್ತದೆ. ಇದಕ್ಕೆ ಖಾಸಗಿ ಕಂಪನಿಗಳ ಸಹಕಾರ ಪಡೆಯಲು ಯತ್ನಿಸಲಾಗಿದೆ. 8-10 ನಿಮಿಷ ರೋಗಿಯ ಜೊತೆ ಸಮಾಲೋಚಿಸುವಂತಾಗಬೇಕು. ಇಂತಹ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಇಡೀ ದೇಶದಲ್ಲಿ ಎಂಟು ಕಂಪನಿಗಳು ರೆಮ್‍ಡೆಸಿವಿರ್ ತಯಾರಿಸುತ್ತವೆ. ಕೇಂದ್ರ ಸರಕಾರ 1.22 ಲಕ್ಷ ವೈಲ್‍ಗಳನ್ನು ಹಂಚಿಕೆ ಮಾಡಿದೆ. ರಾಜ್ಯದಲ್ಲಿ 3 ಲಕ್ಷ ಕೊರೋನ ರೋಗಿಗಳಿದ್ದಾರೆ. ಕೆಲ ಸೋಂಕಿತರು ಮನೆಯಲ್ಲೇ ಯಾವುದೇ ವೈದ್ಯಕೀಯ ಮಾರ್ಗದರ್ಶನ ಇಲ್ಲದೆ ರೆಮ್‍ಡೆಸಿವಿರ್ ಪಡೆಯುವುದು ಗೊತ್ತಾಗಿದೆ ಎಂದು ಸುಧಾಕರ್ ಹೇಳಿದರು.

ಮನೆಯಲ್ಲಿ ದಾಸ್ತಾನು, ವೈದ್ಯರಿಂದ ಬರೆಸಿಕೊಂಡು ಔಷಧಿ ಪಡೆಯುವುದು ಮೊದಲಾದ ಚಟುವಟಿಕೆ ಮಾಡಬಾರದು. ವೈದ್ಯರು ಕೂಡ ಈ ರೀತಿ ಔಷಧಿ ಬರೆದುಕೊಡಬಾರದು. ಅಗತ್ಯ ಇರುವವರಿಗೆ ಮಾತ್ರ ನೀಡಬೇಕು ಎಂದು ಅವರು ಎಚ್ಚರಿಕೆ ನೀಡಿದರು.

ಜ್ಯುಬಿಲೆಂಟ್ ಕಂಪನಿಗೆ ಔಷಧಿ ಪೂರೈಸಲು ಸೂಚಿಸಿದರೂ ಒಂದೂ ಔಷಧಿ ನೀಡಿಲ್ಲ. ಈ ಕಂಪನಿ ವಿರುದ್ಧ ಬಿಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಹೆಚ್ಚುವರಿಯಾಗಿ 1.80 ಲಕ್ಷ ಔಷಧಿಯನ್ನು ಆರ್ಡರ್ ಮಾಡಲಾಗಿದೆ. ಕೇಂದ್ರ ಸರಕಾರ ರಾಜ್ಯಕ್ಕೆ 800 ಟನ್ ಆಕ್ಸಿಜನ್ ಹಂಚಿಕೆ ಮಾಡಿದೆ. ಅಗತ್ಯ ಇರುವ ಆಸ್ಪತ್ರೆಗೆ ಅರ್ಧ ನೀಡದೆ ಪೂರ್ಣವಾಗಿ ಆಕ್ಸಿಜನ್ ನೀಡಬೇಕು ಎಂದು ಸೂಚಿಸಲಾಗಿದೆ. ಹಾಸಿಗೆ ನೀಡದ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಶಿಶು, ತಾಯಿ ಆಸ್ಪತ್ರೆಗಳನ್ನು ಕೋವಿಡ್‍ಗೆ ಬಳಸುತ್ತಿಲ್ಲ. ಆದರೆ ಇಂತಹ ಖಾಸಗಿ ಆಸ್ಪತ್ರೆಗಳು ಕೊರೋನ ಸೋಂಕಿರುವ ಗರ್ಭಿಣಿಯರು ಬಂದರೆ ದಾಖಲಿಸಿಕೊಳ್ಳಬೇಕು. ವಾಣಿ ವಿಲಾಸದಲ್ಲಿ ಈ ರೀತಿ ದಾಖಲಿಸಿಕೊಳ್ಳಲಾಗುತ್ತಿದೆ. ಅಂತಹ ಶೇ.50 ರಷ್ಟು ರೋಗಿಗಳಿಗೆ ಅವಕಾಶ ನೀಡಬೇಕು. ದಾಖಲು ನಿರಾಕರಿಸುವಂತಿಲ್ಲವೆಂದು ಸೂಚಿಸಲಾಗಿದೆ ಎಂದು ಸುಧಾಕರ್ ತಿಳಿಸಿದರು.

ನಿವೃತ್ತ ವೈದ್ಯರು, ಯುವವೈದ್ಯರು ಮನೆಯಲ್ಲೇ ಕುಳಿತು ಆನ್ ಲೈನ್‍ನಲ್ಲಿ ರೋಗಿಗಳಿಗೆ ಸಲಹೆ ನೀಡಲು ಕೋರಲಾಗಿದೆ. ಸ್ವಯಂಪೇರಿತರಾಗಿ ಕೋವಿಡ್ ನಿಯಂತ್ರಣ ಕಾರ್ಯ ಬರಬಹುದು. ಇದಕ್ಕಾಗಿ ಪ್ರತ್ಯೇಕ ಪೋರ್ಟಲ್ ರೂಪಿಸಲಿದ್ದು, ಅಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದಕ್ಕೆ ಪ್ರತ್ಯೇಕ ಸರ್ಟಿಫಿಕೇಟ್ ನೀಡುವ ಚಿಂತನೆ ಇದೆ ಎಂದು ಅವರು ಹೇಳಿದರು.

ಆಕ್ಸಿಜನ್ ಬೇಕಾದಲ್ಲಿ ಆಸ್ಪತ್ರೆಗಳು ಆನ್ ಲೈನ್‍ನಲ್ಲೇ ಬೇಡಿಕೆ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ರೆಮ್‍ಡಿಸಿವಿರ್ ಗೂ ವ್ಯವಸ್ಥೆ ಮಾಡಲಾಗುವುದು ಎಂದು ಸುಧಾಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News