ಸಿದ್ದರಾಮಯ್ಯ- ಡಿಕೆಶಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಚಿವ ಉಮೇಶ್ ಕತ್ತಿ

Update: 2021-04-28 15:21 GMT

ಬೆಳಗಾವಿ, ಎ.28: ಕಾಂಗ್ರೆಸ್‍ನವರಿಗೆ ಮಾಡೋಕೆ ಏನು ಕೆಲಸವಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ ಹೆಸರು ಹೇಳಿ ನಾನು ಮುಖ್ಯಮಂತ್ರಿಯಾದರೆ 10 ಕೆಜಿ ಕೊಡುತ್ತೇನೆ ಎಂದರು. ಇದೇ ಸಿದ್ದರಾಮಯ್ಯ 7 ಕೆಜಿ ಕೊಟ್ಟಿರುವುದು, 4 ಕೆಜಿ ಕೊಟಿರುವುದನ್ನು ನಾವು ನೋಡಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವನು(ಸಿದ್ದರಾಮಯ್ಯ) ಮತ್ತು ಡಿ.ಕೆ.ಶಿವಕುಮಾರ್ ಇವರಿಬ್ಬರ ನಡುವೆ ಯಾರು ಸಿಎಂ ಆಗುತ್ತಾರೆ ಅನ್ನೋದನ್ನು ರಾಜ್ಯದ ಜನತೆಗೆ ಹೇಳಲಿ. ಅವರು ಸಿಎಂ ಆದ ನಂತರ ನಾವು ಕೊಡುತ್ತಿರುವ ಅಕ್ಕಿಯ ಪ್ರಮಾಣವನ್ನು ಹಿಂಪಡೆದುಕೊಳ್ಳಲಿ ಎಂದರು.

ನಮ್ಮ ಸರಕಾರ ಆಹಾರ ಭದ್ರತೆ ಯೋಜನೆಯಡಿ ಸರಿಯಾಗಿ ಪಡಿತರ ಹಾಗೂ ಪೌಷ್ಠಿಕ ಆಹಾರ ವಿತರಣೆ ಮಾಡುತ್ತಿದೆ. ನಾನು ಈಗಾಗಲೇ, ಕ್ಷಮೆ ಕೇಳಿ ಆಗಿದೆ. ಮಾಧ್ಯಮದವರಿಗೂ ಕ್ಷಮೆ ಕೇಳುತ್ತೇನೆ. ಪಡಿತರದ ಫಲಾನುಭವಿಗಳು, ರೈತರ ಬಳಿಯೂ ಕ್ಷಮೆ ಕೇಳುತ್ತೇನೆ ಎಂದು ಉಮೇಶ್ ಕತ್ತಿ ಹೇಳಿದರು.

ನನ್ನ ರಾಜೀನಾಮೆ ಕೇಳಲು ಅವನು(ಡಿ.ಕೆ.ಶಿವಕುಮಾರ್) ಯಾರು? ಕಾಂಗ್ರೆಸ್ ಅಧ್ಯಕ್ಷ ಆದರೆ ನನ್ನ ರಾಜೀನಾಮೆ ಕೇಳಲು ಏನು ಅಧಿಕಾರವಿದೆ. ಶವಯಾತ್ರೆ ಮಾಡುವುದಾದರೆ ಕಾಂಗ್ರೆಸ್ ಶವ ತೆಗೆದುಕೊಂಡು ಮುಖ್ಯಮಂತ್ರಿ ಮನೆ ಬದಲು ವಿರೋಧ ಪಕ್ಷದ ನಾಯಕನ ಮನೆಗೆ ಹೋಗಲಿ ಎಂದು ಉಮೇಶ್ ಕತ್ತಿ ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News