ಕರ್ಫ್ಯೂ: ಸಂಚಾರ, ವಾಣಿಜ್ಯ ಚಟುವಟಿಕೆಗಳು ಭಣಗುಡುತ್ತಿರುವ ಕರ್ನಾಟಕ

Update: 2021-04-28 16:23 GMT

ಬೆಂಗಳೂರು, ಎ.28:  ಕೋವಿಡ್ ನಿಯಂತ್ರಣ ಸಲುವಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ಕರ್ಫ್ಯೂನಿಂದ ರಾಜಧಾನಿ ಬೆಂಗಳೂರು ಸಹಿತ ರಾಜ್ಯದೆಲ್ಲೆಡೆ ಸಾರಿಗೆ ಸಂಚಾರ, ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡು ಭಣಗುಡುತ್ತಿದೆ.

ರಾಜಧಾನಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ ಸೇರಿದಂತೆ ಹಲವು ನಗರ ಪ್ರದೇಶಗಳಲ್ಲಿ ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರಿಂದ ಬುಧವಾರ ಮಾರುಕಟ್ಟೆಗೆ ಭೇಟಿ ನೀಡಿದ ಜನರು ತರಕಾರಿ, ಕಿರಾಣಿ ಸಾಮಗ್ರಿಗಳನ್ನು ಖರೀದಿಸಿ ಮನೆಗೆ ತೆರಳುವ ಧಾವಂತ ಕಂಡು ಬಂತು.

ಆನಂತರ 10 ಗಂಟೆಯಾಗುತ್ತಿದ್ದಂತೆ ಪೊಲೀಸರು ಅಂಗಡಿಗಳ ಬಳಿ ತೆರಳಿ ಮುಚ್ಚುವಂತೆ ಸೂಚನೆ ನೀಡಿದರು. ಆದರೆ, ಹೊಟೇಲ್‍ಗಳಲ್ಲಿ ಪಾರ್ಸೆಲ್ ಕೊಂಡೊಯ್ಯಲು ಅವಕಾಶ ನೀಡಲಾಗಿತ್ತು. ಸಂಚಾರ ಸಂಪೂರ್ಣವಾಗಿ ಬಂದ್ ಆಗಿದ್ದರೂ, ಅನೇಕರು ಬಸ್ ನಿಲ್ದಾಣಗಳಿಗೆ ಆಗಮಿಸುತ್ತಿದ್ದ ದೃಶ್ಯ ಕಂಡಿತು.

ಪೊಲೀಸರ ಗಸ್ತು: ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಗಸ್ತು ತಿರುಗಿದ ಪೊಲೀಸರು ಜನರನ್ನು ತಡೆದು ಪ್ರಶ್ನಿಸುತ್ತಿದರು. ಮತ್ತೊಂದೆಡೆ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪೊಲೀಸರು ನಾಕಾ ಬಂದಿ ಮಾಡಿ ವಾಹನಗಳ ಸಂಚಾರವನ್ನು ನಿಯಂತ್ರಿಸಿದರು.

ಮದುವೆ ಕಾರ್ಯಕ್ರಮ: 13 ಪ್ರಕರಣ ದಾಖಲು

ಇಲ್ಲಿನ ಬಾಗಲಕೋಟೆಯ ಉಪ ವಿಭಾಗ ವ್ಯಾಪ್ತಿಯಲ್ಲಿ ಮದುವೆ ಕಾರ್ಯದಲ್ಲಿ ಮಾರ್ಗಸೂಚಿ ಉಲ್ಲಂಘನೆಯಡಿ ಒಟ್ಟು 13 ಪ್ರಕರಣಗಳನ್ನು ದಾಖಲಿಸಿರುವುದಾಗಿ ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಬಾಗಲಕೋಟೆ, ಬಾದಾಮಿ, ಗುಳೇದಗುಡ್ಡ, ಹುನಗುಂದ ಹಾಗೂ ಇಳಕಲ್ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಎ.26 ಮತ್ತು 27ರಂದು ನಡೆದ ಮದುವೆಗಳಲ್ಲಿ ನಿಮಯ ಉಲ್ಲಂಘಿಸಿದ 13 ಮದುವೆ ಆಯೋಜಕರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ ಎಂದರು.

ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ನಿಂದ ಎನ್‍ಓಸಿ ಪಡೆದು ಉಪ ವಿಭಾಗಾಧಿಕಾರಿಗಳಿಂದ ಅನುಮತಿ ಪತ್ರ ಹಾಗೂ ಪಾಸ್ ಪಡೆಯದೆ 50ಕ್ಕಿಂತ ಹೆಚ್ಚಿನ ಜನ ಸೇರಿರುವ ಆರೋಪ ಕೇಳಿಬಂದ ಹಿನ್ನೆಲೆ ಕಾನೂನು ಕ್ರಮ ಜರುಗಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News