ಕೊರೋನ ಕರ್ಫ್ಯೂ: ಕಾರ್ಮಿಕರ ಸಂಬಳ ಕಡಿತಗೊಳಿಸದಂತೆ ನಿರ್ದೇಶಿಸಲು ಕೋರಿ ಹೈಕೋರ್ಟ್ ಗೆ ಅರ್ಜಿ

Update: 2021-04-28 16:25 GMT

ಬೆಂಗಳೂರು, ಎ.28: ಕೊರೋನ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಸಂಬಳವನ್ನು ಕಡಿತಗೊಳಿಸದೆ ನೀಡಲು ಉದ್ದಿಮೆಗಳಿಗೆ ನಿರ್ದೇಶಿಸಬೇಕು, ಆಹಾರ ಕಿಟ್‍ಗಳನ್ನು ಪೂರೈಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ.

ಈ ಕುರಿತು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ (ಎಐಸಿಟಿಯು) ಪರ ವಕೀಲ ಕ್ಲಿಫ್ಟನ್ ರೊಜಾರಿಯೊ ಹೈಕೋರ್ಟ್ ಗೆ ಮೆಮೊ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ 2020ರ ಕೋವಿಡ್ ಬಳಿಕ ಬಡವರ ಸಂಖ್ಯೆ 75 ದಶ ಲಕ್ಷದಷ್ಟು ಹೆಚ್ಚಾಗಿದ್ದು ಬಡವರ, ಕಾರ್ಮಿಕರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಕೋವಿಡ್ ಎರಡನೆ ಅಲೆ ಬಳಿಕ ಇವರ ಬದುಕು ಮತ್ತಷ್ಟು ದುಸ್ತರವಾಗುವ ಸಾಧ್ಯತೆ ಇದೆ. ಹೀಗಾಗಿ ಸರಕಾರ ಇಂತಹ ವರ್ಗಗಳ ಹಿತರಕ್ಷಣೆಗೆ ಮುಂದಾಗಬೇಕಲ್ಲದೇ, ಇವರ ಬಗ್ಗೆ ವಿಶೇಷವಾಗಿ ಗಮನ ಹರಿಸಬೇಕು.

ರಾಜ್ಯದಲ್ಲಿರುವ ಸಣ್ಣ ರೈತರು, ಕೃಷಿ ಕಾರ್ಮಿಕರು, ಮನೆ ಕೆಲಸದವರು, ಬೀದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಗಾಮೆರ್ಂಟ್ಸ್ ಕಾರ್ಮಿಕರು, ಪೌರ ಕಾರ್ಮಿಕರು, ಕಟ್ಟಡ ಕಾರ್ಮಿಕರು ಕೋವಿಡ್ ನಿಂದ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಇದೀಗ ಮತ್ತೊಮ್ಮೆ ಕರ್ಫ್ಯೂ ಜಾರಿಯಾಗಿದ್ದು, ಈ ಅವಧಿಯಲ್ಲಿ ಇವರ ಜೀವಿಸುವ ಹಕ್ಕಿನ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಸರಕಾರ ವಿಶೇಷ ಗಮನ ಹರಿಸಬೇಕು. ಅಗತ್ಯ ಆಹಾರ, ವೈದ್ಯಕೀಯ ಸೌಲಭ್ಯ ನೀಡಬೇಕು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಸೆಕ್ಷನ್ 30 ರಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮ ಕೈಗೊಂಡು ಆಹಾರ ಕಿಟ್‍ಗಳನ್ನು ಪೂರೈಸಬೇಕು.

2020ರ ಮಾ.29ರ ಗೃಹ ವ್ಯವಹಾರಗಳ ಸಚಿವಾಲಯದ ನಿರ್ದೇಶನದಂತೆ ಲಾಕ್ ಡೌನ್ ಅವಧಿಯಲ್ಲಿ ಉದ್ದಿಮೆಗಳು ಮುಚ್ಚಿವೆ ಎಂಬ ಕಾರಣಕ್ಕೆ ಕಾರ್ಮಿಕರ ಕೂಲಿ-ವೇತನ ಕಡಿತ ಮಾಡದಂತೆ ರಾಜ್ಯ ಸರಕಾರ ಉದ್ದಮೆಗಳಿಗೆ ನಿರ್ದೇಶಿಸಬೇಕು. ಒಂದು ತಿಂಗಳ ಮನೆ ಬಾಡಿಗೆ ಕೇಳದಂತೆ, ಒತ್ತಾಯಿಸದಂತೆ, ಮನೆ ಖಾಲಿ ಮಾಡಿಸಿದರೆ ಕ್ರಮ ಕೈಗೊಳ್ಳುವ ಕುರಿತು ಆದೇಶ ಹೊರಡಿಸಬೇಕು.

ಸಾಮಾನ್ಯ ಹಾಗೂ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ ಉದ್ದಿಮೆಗಳಿಗೆ-ಮಾಲಕರಿಗೆ ನಿರ್ದೇಶಿಸಬೇಕು. ಕಾರ್ಮಿಕರ ಕೆಲಸ ಹಾಗೂ ಮನೆ ಬಾಡಿಗೆ ಸಮಸ್ಯೆಗಳ ಕುರತು ನೆರವು ನೀಡಲು ಪ್ರತ್ಯೇಕ ಸಹಾಯವಾಣಿ ಆರಂಭಿಸಬೇಕು. ರೈತರಿಗೆ, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಈ ಎಲ್ಲ ಅಂಶಗಳನ್ನು ಜಾರಿಗೊಳಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿಯನ್ನು ಮುಂದಿನ ವಿಚಾರಣೆ ಸಂದರ್ಭದಲ್ಲಿ ಪರಿಗಣಿಸುವುದಾಗಿ ಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News