ಸುಂಟಿಕೊಪ್ಪ: ಒಂಟಿ ವೃದ್ಧೆ ಇದ್ದ ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚಿದ ಕಳ್ಳರು

Update: 2021-04-28 17:52 GMT

ಮಡಿಕೇರಿ, ಎ.28: ಒಂಟಿ ವೃದ್ಧೆ ವಾಸವಾಗಿದ್ದ ಮನೆಗೆ ನುಗ್ಗಿದ ಚೋರರು ಚಿನ್ನಾಭರಣ ಸಹಿತ ನಗದನ್ನು ದೋಚಿರುವ ಘಟನೆ ಸುಂಟಿಕೊಪ್ಪ ಸಮೀಪದ ಹಾರ್ ಬೈಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬೆಳೆಗಾರ ದಿ.ಕುಞಣ್ಣ ರೈ ಅವರ ಪತ್ನಿ ಸರೋಜಿನಿ (67) ಅವರು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದುದ್ದನ್ನು ಗಮನಿಸಿದ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಮುಸುಕುದಾರಿಗಳಾಗಿ ಲಗ್ಗೆ ಇಟ್ಟಿದ್ದಾರೆ. ಸರೋಜಿನ ಅವರ ಬಾಯಿಗೆ ಬಟ್ಟೆ ತುರುಕಿ, ಕುತ್ತಿಗೆ ಹಿಸುಕಿ ಪ್ರಜ್ಞೆ ತಪ್ಪಿಸಿದ ಕಳ್ಳರು ಕುತ್ತಿಗೆಯಲ್ಲಿದ್ದ 24 ಗ್ರಾಂ ತೂಕದ ಕನಕ ಮಾಲೆ, ಕೈಯಲ್ಲಿದ್ದ 12 ಗ್ರಾಂ ತೂಕದ 2 ಚಿನ್ನದ ಬಳೆ, ಬೀರುವನ್ನು ಮುರಿದು 32 ಗ್ರಾಂ ಚಿನ್ನದ ಸರ, 12 ಗ್ರಾಂ ತೂಕದ 4 ಬಳೆ, 2 ಗ್ರಾಂ ನ 1 ಉಂಗುರ  ಹಾಗೂ 35 ಸಾವಿರ ರೂ. ನಗದು  ದೋಚಿದ್ದಾರೆ.

ಚಿನ್ನಾಭರಣಗಳ ಮೌಲ್ಯ 3.90 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದ್ದು, ಚೋರರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎ.27 ರಂದು ಸಂಜೆ 7.30 ಗಂಟೆ ಸುಮಾರಿಗೆ ಮೂವರು ಅಪರಿಚಿತರು ಸರೋಜಿನಿ ಅವರನ್ನು ಮನೆಯೊಳಗೆ ಎಳೆದೊಯ್ದು 2 ಕೈಗಳನ್ನು ಗಟ್ಟಿಯಾಗಿ ಹಿಡಿದು ಕುತ್ತಿಗೆ ಹಿಸುಕಿ, ಪ್ರಜ್ಞೆ ತಪ್ಪಿಸಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸರೋಜಿನಿ ಅವರು ಹಾರ್‍ಬೈಲು ಗ್ರಾಮದಲ್ಲಿ ತಮಗೆ ಸೇರಿದ ನಾಲ್ಕು ಏಕರೆ ಕಾಫಿ ತೋಟವನ್ನು ನೋಡಿಕೊಂಡು ಏಕಾಂಗಿಯಾಗಿದ್ದರು. ಇವರ ಪುತ್ರ ಬಿಲ್ಡರ್ ಹಾಗೂ ಗುತ್ತಿಗೆದಾರ ಪುರುಷೋತ್ತಮ ರೈ ಕುಶಾಲನಗರದಲ್ಲಿ ವಾಸವಾಗಿದ್ದು ಆಗಿಂದಾಗ್ಗೆ ತಾಯಿಯ ಮನೆಗೆ ಬಂದು ಹೋಗುತ್ತಿದ್ದರು ಎಂದು ಹೇಳಲಾಗಿದೆ.

ಸೋಮವಾರಪೇಟೆ ತಾಲೂಕು ಡಿವೈಎಸ್‍ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್ ಹಾಗೂ ಬೆರಳಚ್ಚು ತಜ್ಞರು ಮತ್ತು ಶ್ವಾನದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News