ಯುವ ಕಾಂಗ್ರೆಸ್ ಪಡೆಯಿಂದ ಕೋವಿಡ್ ಸೋಂಕಿತರಿಗೆ ಅಗತ್ಯ ನೆರವು

Update: 2021-04-29 17:45 GMT
ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ

ಬೆಂಗಳೂರು, ಎ.29: ರಾಜ್ಯದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ ಬೆಚ್ಚಿ ಬೀಳಿಸುವ ರೀತಿಯಲ್ಲಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪ್ರದೇಶ ಯುವ ಕಾಂಗ್ರೆಸ್ ಪಡೆ ಕೋವಿಡ್ ಸೋಂಕಿತರಿಗೆ ಐಸೋಲೇಷನ್ ಕಿಟ್, ಅಗತ್ಯವಿರುವವರಿಗೆ ಆಹಾರ ವಿತರಿಸುವ ಕಾರ್ಯದಲ್ಲಿ ನಿರತವಾಗಿದೆ. ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿರುವವರಿಂದ ಪ್ಲಾಸ್ಮಾ ಸಂಗ್ರಹ, ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದೆ.

“ಕೋವಿಡ್ ಸಹಾಯ ಹಸ್ತ” ಹೆಸರಿನಡಿ ರಾಜ್ಯಾದ್ಯಂತ ಕೋವಿಡ್ ಸೋಂಕಿತರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಂದಿಸುತ್ತಿರುವ ಯುವ ತಂಡ ಇದೀಗ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ನೋಂದಣಿ ಮಾಡಿಕೊಂಡಿರುವವರಿಗೆ ಐಸೋಲೇಷನ್ ಕಿಟ್ ಗಳನ್ನು ವಿತರಿಸುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನ ಸೋಂಕಿತರಿಗೆ ಹಾಸಿಗೆಗಳು ಸಿಗದೇ ತೀವ್ರ ತೊಂದರೆಯಲ್ಲಿರುವ ಹಿನ್ನೆಲೆಯಲ್ಲಿ ಬಹಳಷ್ಟು ಸೋಂಕಿತರು ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಮನೆ ಆರೈಕೆಯಲ್ಲಿರುವವರಿಗೆ ಧೈರ್ಯ ತುಂಬುವ ಜತೆಗೆ ಅತ್ಯಂತ ಅಗತ್ಯವಾಗಿರುವ ಬಹುತೇಕ ಔಷಧಗಳನ್ನೊಳಗೊಂಡ ಕಿಟ್ ಒದಗಿಸಲಾಗುತ್ತಿದೆ.

ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದ ಯುವ ತಂಡ, ಕೋವಿಡ್ ಚಿಕಿತ್ಸೆಗೆ ಅಗತ್ಯವಾಗಿರುವ ಬಹುತೇಕ ಔಷಧಿಗಳನ್ನು ಪೂರೈಸುತ್ತಿದ್ದು, ಇವು ಸೋಂಕಿತರಿಗೆ ಅತ್ಯಂತ ಅಗತ್ಯವಾಗಿವೆ. ತಜ್ಞ ವೈದ್ಯರ ಮಾರ್ಗದರ್ಶನದಂತೆ ಔಷಧಿ ಕಿಟ್‍ಗಳನ್ನು ಸಿದ್ಧಪಡಿಸಲಾಗಿದೆ. ಸೋಂಕಿತರಿಗೆ ಆರೋಗ್ಯ ಕುರಿತ ಏನಾದರೂ ಸಂದೇಹಗಳಿದ್ದರೆ ತಜ್ಞ ವೈದ್ಯರ ದೂರವಾಣಿ ಸಂಖ್ಯೆಯನ್ನು ಯುವ ಪಡೆ ಒದಗಿಸಿದೆ.

ಯುವ ಕಾಂಗ್ರೆಸ್ ಪದಾಧಿಕಾರಿಗಳು ಇಂದು ಬೆಂಗಳೂರಿನ ಆಡುಗೋಡಿ ಮತ್ತಿತರ ಪ್ರದೇಶಗಳಿಗೆ ತೆರಳಿ ಐಸೋಲೇಷನ್ ಕಿಟ್‍ಗಳನ್ನು ವಿತರಿಸಿದ್ದು, ಅಗತ್ಯವಿರುವವರಿಗೆ ಕಿಟ್‍ಗಳ ಜತೆಗೆ “ಕೋವಿಡ್ ಸಹಾಯ ಹಸ್ತ”ದ ಮೂಲಕ ನೆರವು ನೀಡಲಾಗುವುದು ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ತಿಳಿಸಿದ್ದಾರೆ.

ಜತೆಗೆ ಕಮ್ಮನಹಳ್ಳಿ, ಶಾಂತಿನಗರ, ಸರ್ವಜ್ಞ ನಗರ, ಆಡುಗೋಡಿ, ಮಲ್ಲೇಶ್ವರಂ, ಬನ್ನೇರುಘಟ್ಟ ಮತ್ತಿತರ ಪ್ರದೇಶಗಳಲ್ಲಿ ಕಫ್ರ್ಯೂ ಸಂದರ್ಭದಲ್ಲಿ ಆಹಾರ ವಿತರಣೆ ಮಾಡಲಾಗಿದೆ. ಇದು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಮಯ. ಈಗ ಎಲ್ಲಕ್ಕಿಂತ ಜನರ ಜೀವ ರಕ್ಷಣೆ ನಮಗೆ ಮುಖ್ಯವಾಗಿದೆ. ನಮ್ಮ ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡುತ್ತಿರುವ ಪ್ರತಿಯೊಂದು ಜೀವ ಉಳಿಯಬೇಕು ಎಂಬುದು ಯುವ ಕಾಂಗ್ರೆಸ್‍ನ ದ್ಯೇಯವಾಗಿದೆ ಎಂದು ಅವರು ಹೇಳಿದ್ದಾರೆ.

ತೀವ್ರ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ಲಾಸ್ಮಾ ಸಂಗ್ರಹ, ರಕ್ತ ನಿಧಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಕರ್ಫ್ಯೂ ಸಮಯದಲ್ಲಿ ಪ್ಲಾಸ್ಮಾ ಮತ್ತು ರಕ್ತ ಸಂಗ್ರಹ ಅತ್ಯಂತ ಕಠಿಣವಾಗಿದ್ದು, ಯುವ ಕಾಂಗ್ರೆಸ್ ಘಟಕಗಳಿಂದ ಇದಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಐಸೋಲೇಷನ್ ಕಿಟ್ ಪಡೆಯಲು ಅರ್ಹರಾಗಿದ್ದಲ್ಲಿ https://forms.gle/nUXww71p2bwhrWgB7 ಈ ಲಿಂಕ್ ಮೂಲಕ ಅರ್ಜಿ ಭರ್ತಿ ಮಾಡಿ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News