ಲಸಿಕೆ ಪೂರೈಕೆಯಾಗಿಲ್ಲ, ಆಸ್ಪತ್ರೆ- ಲಸಿಕಾ ಕೇಂದ್ರಗಳಿಗೆ ಈಗಲೇ ಬರಬೇಡಿ: ಸಚಿವ ಡಾ.ಕೆ.ಸುಧಾಕರ್

Update: 2021-04-30 12:59 GMT

ಬೆಂಗಳೂರು, ಎ. 30: `ರಾಜ್ಯದಲ್ಲಿ ನಾಳೆಯಿಂದ (ಮೇ 1 ರಿಂದ) 18 ವರ್ಷದಿಂದ 44 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ಪಡೆದುಕೊಳ್ಳಲು ಹೆಸರು ನೋಂದಣಿ ಮಾಡಿಕೊಳ್ಳಲು ಸರಕಾರ ಕೋರಿತ್ತು. ಆದರೆ, ಲಸಿಕೆ ಪೂರೈಕೆ ಕುರಿತು ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಹೀಗಾಗಿ ನೋಂದಣಿ ಮಾಡಿಕೊಂಡಿರುವವರು ಆಸ್ಪತ್ರೆಗೆ ಅಥವಾ ಲಸಿಕಾ ಕೇಂದ್ರಗಳಿಗೆ ಈಗಲೇ ಬರುವುದು ಬೇಡ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ಸದಾಶಿವನಗರದಲ್ಲಿನ ತನ್ನ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೆರಂ ಇನ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶಿಲ್ಡ್ ಲಸಿಕೆಯನ್ನು ಇನ್ನೂ ಪೂರೈಕೆ ಮಾಡದೆ ಇರುವುದರಿಂದ ನಾಳೆಯಿಂದ ನಡೆಯಬೇಕಿದ್ದ ಲಸಿಕೆ ಅಭಿಯಾನವನ್ನು ಮುಂದೂಡಲಾಗಿದೆ. ಸೆರಂ ಇನ್ಟಿಟ್ಯೂಟ್ ತಿಂಗಳಲ್ಲಿ ಸುಮಾರು 5 ರಿಂದ 6 ಕೋಟಿ ಡೋಸ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಭಾರತ್ ಬಯೋಟೆಕ್ 1 ರಿಂದ 1.25 ಲಕ್ಷ ಕೋಟಿ ಡೋಸ್ ತಯಾರು ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ, ಲಸಿಕೆ ಲಭ್ಯತೆ ಇನ್ನೂ ಕೆಲ ದಿನಗಳಾಗುವ ಸಾಧ್ಯತೆಗಳಿವೆ ಎಂದು ಅವರು ವಿವರಣೆ ನೀಡಿದರು.

ಕೋವಿಡ್ ಲಸಿಕೆ ನೀಡಲು ಯಾವ ದಿನದಿಂದ ಆರಂಭವಾಗಬಹುದು ಎಂಬುವುದನ್ನು ನಾನು ಹೇಳಲ್ಲ. ಸರಕಾರಕ್ಕೆ ಇದನ್ನು ಅಂದಾಜು ಮಾಡಿ ಹೇಳಲು ಸಾಧ್ಯವಿಲ್ಲ. ಕಂಪೆನಿ ಅಧಿಕೃತವಾಗಿ ಮಾಹಿತಿ ಹಂಚಿಕೆ ಮಾಡಿದ ಬಳಿಕ ರಾಜ್ಯದ ಜನರಿಗೆ ತಿಳಿಸಲಾಗುವುದು. ಆದರೆ, ಸತತ ಪ್ರಯತ್ನ ಮುಂದುವರಿದಿದೆ. ಒತ್ತಡ ಹೇರಿ ಆದಷ್ಟು ಶೀಘ್ರದಲ್ಲಿ ರಾಜ್ಯ ಲಸಿಕೆ ತರಿಸಿಕೊಳ್ಳುವುದು ನಮ್ಮ ಧ್ಯೇಯವಾಗಿದೆ ಎಂದು ಸುಧಾಕರ್ ತಿಳಿಸಿದರು.

18 ವರ್ಷ ಮೇಲ್ಪಟ್ಟು 44 ವರ್ಷದೊಳಗಿನ ಎಲ್ಲರಿಗೂ ಉಚಿತವಾಗಿ ಲಸಿಕೆ ಕೊಡುತ್ತೇವೆಂದು ಹೇಳಿದ್ದೇವೆ. ಅದರಲ್ಲಿ ಯಾವುದೇ ಗೊಂದಲ ಬೇಡ. 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳಬಹುದು. 99 ಲಕ್ಷ ನೋಂದಣಿ ಆದ ಪೈಕಿ 95 ಲಕ್ಷ ಲಸಿಕೆ ಈಗಾಗಲೇ ನೀಡಿದ್ದೇವೆ. ಕೇಂದ್ರ ಸರಕಾರದ ಜೊತೆ ಸಂಪರ್ಕದಲ್ಲಿದ್ದು, ಮನವಿ ಮಾಡಿದ್ದೇವೆ. ಆರು ಲಕ್ಷ ಡೋಸ್ ಇದೆ. ಎಲ್ಲೂ ಸ್ಥಗಿತ ಆಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸುಧಾಕರ್ ಹೇಳಿದರು.

ಹೈಕೋರ್ಟ್ ಪ್ರಶಂಸೆ: ದೇಶದಲ್ಲೆ ಕೋವಿಡ್ ನಿರ್ವಹಣೆ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರವನ್ನು ಪ್ರಶಂಸಿಸಿದೆ. ಕೋವಿಡ್ ಸೋಂಕಿನ ಸರಪಳಿ ಕಡಿತಕ್ಕೆ ರಾಜ್ಯ ಸರಕಾರ ಕೊರೋನ ಕರ್ಫ್ಯೂ ಹೇರಿದೆ. ಜನರು ಅದಕ್ಕೆ ಸಹಕಾರ ನೀಡಬೇಕು. ಸೋಂಕಿನಿಂದ ನಾನು ಮತ್ತು ನನ್ನವರ ರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬರಿಗೂ ಇರಬೇಕು ಎಂದು ಸಚಿವ ಸುಧಾಕರ್ ಇದೇ ವೇಳೆ ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News