×
Ad

ಅಳಿವಿನಂಚಿನಲ್ಲಿರುವ ದೊಡ್ಡಳಿಲು ಬೇಟೆ: ಓರ್ವನ ಬಂಧನ, ಇಬ್ಬರು ಪರಾರಿ

Update: 2021-04-30 14:57 IST

ಮಡಿಕೇರಿ, ಎ.30: ಅಳಿವಿನಂಚಿನಲ್ಲಿರುವ ದೊಡ್ಡಳಿಲು (ಹಾರುವ ಬೆಕ್ಕು) ನ್ನು ಬೇಟೆಯಾಡಿದ ಆರೋಪದಡಿ ವಿರಾಜಪೇಟೆ ಉಪವಿಭಾಗ ಅರಣ್ಯ ಸಂರಕ್ಷಣಾ ಇಲಾಖಾಧಿಕಾರಿಗಳು ಬೇಟೆಗಾರನೊಬ್ಬನನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಅಯ್ಯಂಗೇರಿ ಗ್ರಾಮದ ನಿವಾಸಿ ಕೆ.ಎನ್.ಸುನೀಲ್ ಬಂಧಿತ ಆರೋಪಿಯಾಗಿದ್ದು, ತೋಮರ ಗ್ರಾಮದ ಮುದ್ದು ಸೋಮಯ್ಯ ಹಾಗೂ ಪಾಲಂಗಾಲ ಗ್ರಾಮದ ಕರಿನೆರವಂಡ ಮೇದಪ್ಪ (ಹರೀಶ್) ನಾಪತ್ತೆಯಾಗಿದ್ದಾರೆ.

ಮಾಕುಟ್ಟ ರಕ್ಷಿತಾರಣ್ಯ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ದೊಡ್ಡಳಿಲು (ಹಾರುವ ಬೆಕ್ಕು) ಬೇಟೆಯಾಡಿ ಮಾಂಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ವನ್ಯಜೀವಿಯನ್ನು ಬೇಟೆಯಾಡಿ ಮನೆಗೆ ತಂದು ಸಾರು ಮಾಡಿರುವ ಬಗ್ಗೆ ಮಾಹಿತಿ ದೊರೆತ ಅರಣ್ಯ ಇಲಾಖೆ ಸಿಬ್ಬಂದಿಗಳು ಲೈನ್ ಮನೆಗೆ ದಾಳಿ ಮಾಡಿದರು. ಕೆ.ಎನ್.ಸುನೀಲ್‍ನನ್ನು ಬಂಧಿಸಿದ ಅಧಿಕಾರಿಗಳು ಮಾಂಸ, ಸಾರು ಮಾಡಿದ ಪಾತ್ರೆ, ಜೀವಿಯ ಚರ್ಮ ಹಾಗೂ ಕೃತ್ಯಕ್ಕೆ ಬಳಸಿದ ಕೋವಿ, ಕತ್ತಿ ಮತ್ತು ಚಾಕು ವಶಕ್ಕೆ ಪಡೆದರು.

2ನೇ ಆರೋಪಿ ಮುದ್ದು ಸೋಮಯ್ಯ ಹಾಗೂ 3ನೇ ಆರೋಪಿ ಕರಿನೆರವಂಡ ಮೇದಪ್ಪ ಹರೀಶ್ ದಾಳಿಯ ಸುಳಿವು ಅರಿತು ಸ್ಥಳದಿಂದ ಪರಾರಿಯಾಗಿದ್ದಾರೆ. ಇವರ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ವಲಯ ಉಪವಿಭಾಗ ಅರಣ್ಯ ಸಂರಕ್ಷಣಾಧಿಕಾರಿಗಳಾದ ವೈ.ಚಕ್ರಪಾಣಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಷಿನಿ ಎ.ಜೆ. ಅವರುಗಳ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ.ದೇವಯ್ಯ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳಾದ ಆನಂದ ಕೆ.ಆರ್, ಕುಮಾರಿ ಮೋನಿಷಾ ಎಂ.ಎಸ್, ಶ್ರೀಶೈಲ, ಸಚಿನ್, ಸಂಜೀವ್, ಅರಣ್ಯ ರಕ್ಷಕರಾದ ಮಾಲತೇಶ್ ಬಾಡಿಗಾರ್, ಸೋಮಯ್ಯ, ನಾಗರಾಜ್, ಹುಸೇನ್, ಚಂದ್ರಶೇಖರ, ಸಿಬ್ಬಂದಿಗಳಾದ ಪೊನ್ನಪ್ಪ, ಸಚಿನ್, ಪ್ರಕಾಶ್, ಮೊಣ್ಣಪ್ಪ, ಚಾಲಕ ಅಶೋಕ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News