ರಾಮನಗರ ನಗರಸಭೆಯಲ್ಲಿ ಪ್ರಾಬಲ್ಯ ಮೆರೆದ ಕಾಂಗ್ರೆಸ್: ಜೆಡಿಎಸ್ ಗೆ ಹಿನ್ನಡೆ
ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿಗೆ ಪ್ರತಿಷ್ಠೆಯ ಕಣವಾಗಿದ್ದ ರಾಮನಗರ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು 19 ಕಡೆಗಳಲ್ಲಿ ಗೆಲ್ಲುವ ಮೂಲಕ ಬಹುಮತ ಗಳಿಸಿದ್ದಾರೆ.
ಒಟ್ಟು 31 ವಾರ್ಡುಗಳ ಪೈಕಿ ಕಾಂಗ್ರೆಸ್ 19 ಸ್ಥಾನ ತನ್ನದಾಗಿಸಿಕೊಂಡಿದೆ. ಜೆಡಿಎಸ್ 11 ಸ್ಥಾನಗಳಲ್ಲಷ್ಟೇ ಗೆದ್ದಿದೆ. ಒಂದು ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಬಿಜೆಪಿ ಖಾತೆ ತೆರೆಯಲು ವಿಫಲವಾಗಿದೆ.
ಮೃತ ಅಭ್ಯರ್ಥಿಗೆ ಗೆಲುವು: ಕೋವಿಡ್ ಸೋಂಕಿನಿಂದಾಗಿ ಗುರುವಾರ ಮೃತಪಟ್ಟಿದ್ದ ನಾಲ್ಕನೇ ವಾರ್ಡ್ ಅಭ್ಯರ್ಥಿ ಲೀಲಾ ಗೋವಿಂದರಾಜು ಅವರು ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ನಿಂದ ಕಣಕ್ಕೆ ಇಳಿದಿದ್ದ ಲೀಲಾ ಅವರು ಒಟ್ಟು 917 ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿಯನ್ನು ಮಣಿಸಿದ್ದಾರೆ. ಲೀಲಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರೂ ಅವರ ಮನೆಯಲ್ಲಿ ಸಂಭ್ರಮದ ಬದಲಿಗೆ ಸೂತಕದ ವಾತಾವರಣ ಇದೆ.