ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಆಡಳಿತರೂಢ ಬಿಜೆಪಿಗೆ ತೀವ್ರ ಮುಖಭಂಗ, ಪ್ರತಿಪಕ್ಷ ಕಾಂಗ್ರೆಸ್ ಮೇಲುಗೈ

Update: 2021-04-30 12:41 GMT

ಬೆಂಗಳೂರು, ಎ.30: ಬಳ್ಳಾರಿ ಮಹಾನಗರ ಪಾಲಿಕೆ ಸೇರಿದಂತೆ 10 ನಗರ ಸ್ಥಳೀಯ ಸಂಸ್ಥೆಗಳಿಗೆ ಎ.27ರಂದು ನಡೆದಿದ್ದ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಎರಡು ವಾರ್ಡುಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಪ್ರತಿಪಕ್ಷ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಮಡಿಕೇರಿ ನಗರಸಭೆ ಹೊರತುಪಡಿಸಿ ಬೇರೆ ಯಾವುದೇ ನಗರ ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಆಡಳಿತರೂಢ ಬಿಜೆಪಿ ವಿಫಲವಾಗಿದೆ. ಬಳ್ಳಾರಿ ಮಹಾನಗರ ಪಾಲಿಕೆ, ರಾಮನಗರ ನಗರಸಭೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರ ಸಭೆ, ಹಾಸನ ಜಿಲ್ಲೆಯ ಬೇಲೂರು ಪುರಸಭೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣ ಪಂಚಾಯತ್, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತ್ ನಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ.

ಇದಲ್ಲದೆ, ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಬಿ ಪುರಸಭೆಯ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರಿದರೆ, ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣ ಪಂಚಾಯತ್ ನ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರಸಭೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪುರಸಭೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆ: ಒಟ್ಟು 39 ವಾರ್ಡುಗಳಲ್ಲಿ ಕಾಂಗ್ರೆಸ್-21, ಬಿಜೆಪಿ-13, ಪಕ್ಷೇತರರು 5 ಮಂದಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್, ಎಸ್‍ಡಿಪಿಐ, ಆಮ್‍ಆದ್ಮಿ ಪಕ್ಷ ಹಾಗೂ ಎಐಎಂಐಎಂ ಶೂನ್ಯ ಸಂಪಾದನೆ ಮಾಡಿವೆ.

ಬೀದರ್ ನಗರಸಭೆ: 33 ವಾರ್ಡುಗಳಲ್ಲಿ ಕಾಂಗ್ರೆಸ್-15, ಬಿಜೆಪಿ-9, ಜೆಡಿಎಸ್-7, ಆಮ್ ಆದ್ಮಿ ಪಕ್ಷ 1 ಹಾಗೂ ಎಐಎಂಐಎಂ 1 ಸ್ಥಾನದಲ್ಲಿ ಗೆದ್ದಿದೆ. ಎಸ್‍ಡಿಪಿಐ ಹಾಗೂ ಪಕ್ಷೇತರರು ಖಾತೆ ತೆರೆಯುವಲ್ಲಿ ವಿಫಲವಾಗಿದ್ದಾರೆ.

ರಾಮನಗರ ನಗರಸಭೆ: 31 ವಾರ್ಡುಗಳಲ್ಲಿ ಕಾಂಗ್ರೆಸ್-19, ಜೆಡಿಎಸ್-11, ಪಕ್ಷೇತರ-1, ಬಿಜೆಪಿ, ಎಸ್‍ಡಿಪಿಐ, ಆಮ್ ಆದ್ಮಿ ಪಕ್ಷ ಹಾಗೂ ಎಐಎಂಐಎಂ ಶೂನ್ಯ ಸಂಪಾದನೆ.

ಚನ್ನಪಟ್ಟಣ ನಗರಸಭೆ: 31 ವಾರ್ಡುಗಳಲ್ಲಿ ಕಾಂಗ್ರೆಸ್-7, ಬಿಜೆಪಿ-7, ಜೆಡಿಎಸ್-16, ಪಕ್ಷೇತರ-1.

ಭದ್ರಾವತಿ ನಗರಸಭೆ: 34 ವಾರ್ಡುಗಳಲ್ಲಿ ಕಾಂಗ್ರೆಸ್-18, ಬಿಜೆಪಿ-4, ಜೆಡಿಎಸ್-11, ಪಕ್ಷೇತರ-1.

ಮಡಿಕೇರಿ ನಗರಸಭೆ: 23 ವಾರ್ಡುಗಳಲ್ಲಿ ಕಾಂಗ್ರೆಸ್-1, ಬಿಜೆಪಿ-16, ಜೆಡಿಎಸ್-1, ಎಸ್‍ಡಿಪಿಐ-5.

ಬೇಲೂರು ಪುರಸಭೆ: 23 ವಾರ್ಡುಗಳಲ್ಲಿ ಕಾಂಗ್ರೆಸ್-17, ಬಿಜೆಪಿ-1, ಜೆಡಿಎಸ್-5.

ವಿಜಯಪುರ ಪುರಸಭೆ: 23 ವಾರ್ಡುಗಳಲ್ಲಿ ಕಾಂಗ್ರೆಸ್-7, ಬಿಜೆಪಿ-1, ಜೆಡಿಎಸ್-13, ಪಕ್ಷೇತರ-2

ತೀರ್ಥಹಳ್ಳಿ ಪಟ್ಟಣ ಪಂ.: 15 ವಾರ್ಡುಗಳಲ್ಲಿ ಕಾಂಗ್ರೆಸ್-9, ಬಿಜೆಪಿ-6.

ಗುಡಿಬಂಡೆ ಪಟ್ಟಣ ಪಂ.: 11 ವಾರ್ಡುಗಳಲ್ಲಿ ಕಾಂಗ್ರೆಸ್-6, ಜೆಡಿಎಸ್-2, ಪಕ್ಷೇತರ-3.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News