ಬಿಜೆಪಿ ಸರಕಾರದ ವೈಫಲ್ಯ, ಲಂಪಟತನ, ಸುಳ್ಳು ಎಲ್ಲವೂ ಬಯಲಾಗುತ್ತಿದೆ: ಕಾಂಗ್ರೆಸ್ ಕಿಡಿ

Update: 2021-04-30 12:31 GMT

ಬೆಂಗಳೂರು, ಎ. 30: `ಮೂರ್ಖರ ಸರಕಾರದ ಲಸಿಕೆ ಅಭಿಯಾನವೋ, ಲಸಿಕೆ ಅಧ್ವಾನವೋ?! ಲಸಿಕೆ ನೀಡಲು ಮಾಡಿಕೊಂಡ ತಯಾರಿ ಏನೆಂದು ನಾವು ಮೊದಲಿಂದಲೂ ಕೇಳುತ್ತಾ ಬಂದಿದ್ದೇವೆ. ಸರಕಾರ ತಯಾರಿ ಇಲ್ಲದೆ ರಾಜ್ಯದ ಜನರನ್ನು ಮೂರ್ಖರನಾಗಿಸುತ್ತಿದೆ, ರಾಜ್ಯಗಳ ಮೇಲೆ ಹೊರೆ ಹೊರಿಸಿ ಕೇಂದ್ರ ಜಾರಿಕೊಂಡಿದೆ. ಬಿಜೆಪಿಗೆ ನಿಮ್ಮದು ಕೈಲಾಗದ ಸರಕಾರವೆನ್ನಲು ಈ ವೈಫಲ್ಯವೇ ಸಾಕು' ಎಂದು ಕಾಂಗ್ರೆಸ್ ಟೀಕಿಸಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಡಾ.ಸುಧಾಕರ್ ಅವರೇ, ಡೋಲು ಬಡಿಯುವ ಮುಂಚೆ ಕೋಲು ಇದೆಯೇ ನೋಡಿಕೊಳ್ಳಬೇಕು ಕಣ್ರೀ! ಕಂಪೆನಿಗಳು ಆರ್ಡರ್ ಪೂರೈಸುವ ಭರವಸೆ ನೀಡಿಲ್ಲ, ನೀವು ದಾಸ್ತಾನು ಇಟ್ಟಿಲ್ಲ, ಕೇಂದ್ರವೂ ಕೊಟ್ಟಿಲ್ಲ, ಲಸಿಕೆ ಎಷ್ಟು ಸಿಗುತ್ತದೆ ಎನ್ನುವ ಅಂದಾಜು ನಿಮಗಿಲ್ಲ, ಹೀಗಿರುವಾಗ ಯಾವ ಆಧಾರದಲ್ಲಿ ಅಭಿಯಾನದ ಬಡಾಯಿ ಕೊಚ್ಚಿದಿರಿ, ಲಸಿಕೆ ಪಡೆಯಲು ಕರೆ ಕೊಟ್ಟಿರಿ?' ಎಂದು ಪ್ರಶ್ನಿಸಿದೆ.

`ನಾಳೆಯಿಂದ ಲಸಿಕೆ ಕೊಡಲಾಗುತ್ತಿಲ್ಲ, ಆಸ್ಪತ್ರೆ ಕಡೆ ಬರಲೇಬೇಡಿ ಎಂದಿರುವ ಡಾ.ಸುಧಾಕರ್ ಅವರೇ, ಇಷ್ಟು ದಿನ ಮೇ 1 ರಿಂದ ಸರ್ವರಿಗೂ ಲಸಿಕೆ ಎಂದು ಯಾವ ಆಧಾರದಲ್ಲಿ ಭರವಸೆ ನೀಡಿದ್ದಿರಿ? ರಾಜ್ಯ ಬಿಜೆಪಿ ಸರಕಾರದ ನಿಮ್ಮ ವೈಫಲ್ಯ, ಲಂಪಟತನ, ಸುಳ್ಳು ಎಲ್ಲವೂ ಬಯಲಾಗುತ್ತಿದೆ, ಜನರನ್ನು ಮಂಕುಬೂದಿ ಎರಚಿ ಯಾಮಾರಿಸುವ ತಂತ್ರ ಬಿಡಿ ಸರ್ವರಿಗೂ ಲಸಿಕೆ ಯಾವಾಗ ಹೇಳಿ' ಎಂದು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದೆ.

ಲೆಕ್ಕ ಮುಚ್ಚಿಟ್ಟು ಮಾನ ಉಳಿಸಿಕೊಳ್ಳಲು ಯತ್ನ: `ಚಿತಾಗಾರಗಳಲ್ಲಿನ ಲೆಕ್ಕ ಬೆಟ್ಟದಷ್ಟು, ಸರಕಾರದ ಲೆಕ್ಕ ಸಾಸಿವೆಯಷ್ಟು. ಒಂದೇ ಚಿತೆಯಲ್ಲಿ ಹತ್ತು ಶವ ಸುಡಲಾಗುತ್ತಿದೆ, ಎಲ್ಲೆಲ್ಲೂ ಶವಗಳ ಸಾಲು, ಉರಿಯುತ್ತಿರುವ ಚಿತೆಗಳು. ಸರಕಾರ ಮಾತ್ರ ಎಮ್ಮೆಯ ಮೇಲೆ ಮಳೆ ಸುರಿದಂತೆ ಬೇಜವಾಬ್ದಾರಿತನದಲ್ಲಿ ಕೊರೋನ ಸಾವುಗಳ ಲೆಕ್ಕ ಮುಚ್ಚಿಟ್ಟು ಮಾನ ಉಳಿಸಿಕೊಳ್ಳಲು ಯತ್ನಿಸುತ್ತಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.

`ಡಾ.ಸುಧಾಕರ್ ಅವರೇ, ಲಸಿಕೆ ಹಂಚಿಕೆ ಯಾವ ದಿನಾಂಕದಿಂದ ನೀಡುವಿರಿ? ಲಸಿಕೆ ಕೊರತೆಯನ್ನು ನಿಭಾಯಿಸಲು ಯಾವ ಯೋಜನೆ ಹೊಂದಿದ್ದೀರಿ? ಕೇಂದ್ರ ಸರಕಾರಕ್ಕೆ ಲಸಿಕೆ ನೀಡುವಂತೆ ಏಕೆ ಬೇಡಿಕೆ ಇಟ್ಟಿಲ್ಲ? ರಾಜ್ಯದಲ್ಲಿ ಸರ್ವರಿಗೂ ಲಸಿಕೆ ನೀಡಲು ನಿಮಗೆ ಎಷ್ಟು ಕಾಲಾವಧಿ ಬೇಕು? ಲಸಿಕೆ ನೀಡಿಕೆಯ ಬಗ್ಗೆ ಸರಕಾರದ ಕಾರ್ಯತಂತ್ರವೇನು?' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಸೋಂಕಿತರ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂದರೆ ಅದು ಸೋಂಕಿನ ಪ್ರಭಾವವಲ್ಲ, ಸರಕಾರದ ವೈಫಲ್ಯ. ಸುದ್ದಿಗಳೆಲ್ಲವೂ ಆಕ್ಸಿಜನ್ ಇಲ್ಲದೆ ಸಾವು, ಹಾಸಿಗೆ ಸಿಗದೆ ಸಾವು, ವೆಂಟಿಲೇಟರ್ ಸಿಗದೆ ಸಾವು, ಚಿಕಿತ್ಸೆ ಸಿಗದೆ ಸಾವು. ತಜ್ಞರ ಪ್ರಕಾರ ಸೋಂಕಿತರನ್ನು ಶೇ.98ರಷ್ಟು ಕಾಪಾಡುವ ಸಾಧ್ಯತೆ ಇದೆ. ಆದರೆ ಬೇಜವಾಬ್ದಾರಿ ಕೊಲೆಗಡುಕ ಸರಕಾರದಿಂದ ಸಾವು ಹೆಚ್ಚಿದೆ' ಎಂದು ಕಾಂಗ್ರೆಸ್ ದೂರಿದೆ.

ಕೊರೋನ ಭೀತಿ ಮತ್ತು ಉದ್ಯೋಗ ನಷ್ಟದ ಪರಿಣಾಮ ವಲಸೆ ಕಾರ್ಮಿಕರು ಹಳ್ಳಿಗಳಿಗೆ ತೆರಳಿದ್ದಾರೆ, ಅವರ ಬದುಕಿಗೆ ಈಗ ಉದ್ಯೋಗ ಖಾತ್ರಿ ಒಂದೇ ಆಸರೆಯಾಗಬಲ್ಲದು. ಉದ್ಯೋಗ ಖಾತ್ರಿಗೆ ಅನುದಾನ ಹೆಚ್ಚಿಸಿ ನೆರವಿಗೆ ನಿಲ್ಲಬೇಕಾದ ಸರಕಾರ ಮೂರು ತಿಂಗಳ ಬಾಕಿಯನ್ನೇ ಕೊಡಲಿಲ್ಲ. ರಾಜ್ಯದ 25 ಬಿಜೆಪಿ ಸಂಸದರೇ ಯಾವ ಬಿಲದಲ್ಲಿ ಅಡಗಿದ್ದೀರಿ, ದಯಮಾಡಿ ಹೊರಬನ್ನಿ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ಫೇಕ್ ಫ್ಯಾಕ್ಟರಿ

ಲಸಿಕೆ ಸಾಕಷ್ಟು ಇದೆ, ಆಕ್ಸಿಜನ್ ಬೇಕಾದಷ್ಟಿದೆ, ಬೆಡ್‍ಗಳು ಸರಾಗವಾಗಿ ಸಿಗುತ್ತಿದೆ, ರೆಮ್‍ಡಿಸಿವಿರ್ ಸಾಕಷ್ಟಿದೆ, ರಾಜ್ಯದಲ್ಲಿ ಸೋಂಕಿತರು ಸಾಯುತ್ತಲೇ ಇಲ್ಲ. ಯಾವುದೇ ವೈದ್ಯಕೀಯ ಸಮಸ್ಯೆಗಳೇ ಇಲ್ಲ. ಇದೆಲ್ಲವೂ ಫೇಕ್ ಫ್ಯಾಕ್ಟರಿ ಖ್ಯಾತಿಯ ಬಿಜೆಪಿ ಕರ್ನಾಟಕ ಟ್ವೀಟ್‍ಗಳಲ್ಲಿ ಮಾತ್ರ. ಜನ ಸಾಯುತ್ತಿದ್ದಾರೆ, ಇವರ ಸುಳ್ಳು ಮುಂದುವರಿಯುತ್ತಲೇ ಇದೆ. ಮಾತಲ್ಲಿ ಲಸಿಕೆ ಅಭಿಯಾನ, ವಾಸ್ತವದಲ್ಲಿ ಲಸಿಕೆ ಇಲ್ಲದೆ ಅಧ್ವಾನ' ಎಂದು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News