ರೆಮ್‍ಡೆಸಿವಿರ್ ಸರಬರಾಜು ಮಾಡದೆ ಕೇಂದ್ರ ಸರಕಾರ ತಾರತಮ್ಯ ಎಸಗುತ್ತಿದೆ: ಎಂ.ಬಿ.ಪಾಟೀಲ್
ವಿಜಯಪುರ, ಎ.30: ರಾಜ್ಯದಲ್ಲಿ ಕೊರೋನ ರೋಗಿಗಳ ಸಂಖ್ಯೆ ದಿನಂಪ್ರತಿ ಹೆಚ್ಚುತ್ತಿದ್ದರೂ, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ರೆಮ್‍ಡೆಸಿವಿರ್ ಇಂಜೆಕ್ಷನ್‍ನನ್ನು ಸರಬರಾಜು ಮಾಡದೇ, ಕೇಂದ್ರ ಸರಕಾರ ತಾರತಮ್ಯ ಎಸಗುತ್ತಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.
ಈ ಕುರಿತು ಶುಕ್ರವಾರ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಪ್ರತಿ ದಿನ 30 ಸಾವಿರಕ್ಕಿಂತಲೂ ಹೆಚ್ಚು ಹೊಸ ಕೊರೋನ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಛತ್ತೀಸಗಡ, ಗುಜರಾತ್ ರಾಜ್ಯದಲ್ಲಿ ಅಂದಾಜು ನಿತ್ಯವೂ ತಲಾ 15 ಸಾವಿರ ಕೊರೋನ ರೋಗಿಗಳು ದಾಖಲಾಗುತ್ತಿವೆ. ಕೇಂದ್ರ ಸರಕಾರ ರೆಮ್‍ಡೆಸಿವಿರ್ ಪೂರೈಕೆಯಲ್ಲಿ ಎ.21 ರಿಂದ 30ರವರೆಗೆ 10ದಿನಗಳ ಅವಧಿಗೆ ಗುಜರಾತ್ ರಾಜ್ಯಕ್ಕೆ 1,63,559 ಹಾಗೂ ಛತ್ತೀಸಗಡ ರಾಜ್ಯಕ್ಕೆ 48,250 ಇಂಜೆಕ್ಷನ್‍ಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಿರುವ ಕರ್ನಾಟಕಕ್ಕೆ ಕೇವಲ 25,352 ಇಂಜೆಕ್ಷನ್‍ಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ.
ಈ ಅಂಕಿ-ಅಂಶಗಳನ್ನು ಗಮನಿಸಿದರೆ ರೆಮ್‍ಡೆಸಿವಿರ್ ಪೂರೈಕೆ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಪಾರದರ್ಶಕವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾರಣ ಪ್ರಧಾನ ಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಿ, ಈ ತಾರತಮ್ಯ ನಿವಾರಣೆ ಮಾಡಿ, ಬಳಲುತ್ತಿರುವ ರೋಗಿಗಳಿಗೆ ಔಷಧ ನೀಡಲು ಈ ಕೂಡಲೇ ನೆರವಾಗಬೇಕೆಂದು ಎಂ.ಬಿ.ಪಾಟೀಲ್ ಒತ್ತಾಯಿಸಿದ್ದಾರೆ.