ವೈದ್ಯಕೀಯ ಉಪಕರಣ ಖರೀದಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ: ಬಸವರಾಜ ರಾಯರೆಡ್ಡಿ ಆರೋಪ
ಹುಬ್ಬಳ್ಳಿ, ಎ.30: ಕೊರೋನ ಸೋಂಕು ನಿಯಂತ್ರಿಸುವ ನೆಪದಲ್ಲಿ ವೈದ್ಯಕೀಯ ಉಪಕರಣಗಳನ್ನು ಖರೀದಿಸಲಾಗಿದ್ದು, ಇದರಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ. ಭ್ರಷ್ಟಾಚಾರ ಮಾಡಲು ಕೋವಿಡ್ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಬಸವರಾಜ ರಾಯರೆಡ್ಡಿ ಆರೋಪಿಸಿದ್ದಾರೆ.
ಶುಕ್ರವಾರ ಹುಬ್ಬಳ್ಳಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೋನ ಮೊದಲ ಅಲೆಯ ಸಂದರ್ಭದಲ್ಲಿ ಐಸಿಯು, ಪಿಪಿಇ ಕಿಟ್, ವೆಂಟಿಲೇಟರ್ ಹಾಗೂ ಮಾಸ್ಕ್ ಸೇರಿ ಇನ್ನಿತರ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರವಾಗಿದೆ. ಈಗ ಎರಡನೆ ಅಲೆಯಲ್ಲೂ ಇದೇ ಕೆಲಸವನ್ನು ಮುಂದುವರಿಸಿದ್ದಾರೆ. ಇದರ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಕೋವಿಡ್‍ನ ವೇಗ ಹೆಚ್ಚಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ, ವೈದ್ಯಕೀಯ ಕ್ಷೇತ್ರದ ಪರಿಣಿತರು ಹಿಂದೆಯೇ ಭಾರತಕ್ಕೆ ಎಚ್ಚರಿಸಿದ್ದರೂ ಪ್ರಧಾನಿ ನರೇಂದ್ರ ಮೋದಿ ಕಿವಿಗೊಡಲಿಲ್ಲ. ವಿಶ್ವದಲ್ಲಿ ನಾನೆ ಶ್ರೇಷ್ಠ ಎನ್ನುವ ಅಹಂಕಾರದಿಂದ ಬೀಗಿದ್ದರ ಪರಿಣಾಮದಿಂದಲೇ ಈಗ ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾದ ಸಂದರ್ಭ ಬಂದಿದೆ. ಅವೈಜ್ಞಾನಿಕ ನಿರ್ಧಾರಗಳು, ಎಲ್ಲ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದರಿಂದ ಇಷ್ಟೊಂದು ಅನಾಹುತಗಳು ಸಂಭವಿಸುತ್ತಿವೆ ಎಂದು ದೂರಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಉಪಸ್ಥಿತರಿದ್ದರು.
ಎಬಿಸಿಡಿ ಗೊತ್ತಿಲ್ಲದ ಸಚಿವ ಡಾ.ಕೆ.ಸುಧಾಕರ್
‘ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಂಬಿಬಿಎಸ್ ಓದಿದ್ದರೂ ಒಂದು ದಿನವೂ ವೈದ್ಯರಾಗಿ ಕೆಲಸ ಮಾಡಲಿಲ್ಲ. ವೈದ್ಯಕೀಯ ಲೋಕದ ಎಬಿಸಿಡಿಯೂ ಗೊತ್ತಿಲ್ಲ. ಈಗಿನ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿಲ್ಲ. ಅವರು ಈ ವಿಚಾರದಲ್ಲಿ ಸೋತಿದ್ದಾರೆ.’
-ಬಸವರಾಜ್ ರಾಯರೆಡ್ಡಿ, ಕೆಪಿಸಿಸಿ ವಕ್ತಾರ
ಕಿಮ್ಸ್ ನಲ್ಲಿ ಮುಸ್ಲಿಮರಿಗೆ ಬೆಡ್ ಕೊಡುತ್ತಿಲ್ಲ
‘ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಜಾತಿ ನೋಡಿ ಬೆಡ್ ಕೊಡಲಾಗುತ್ತಿದೆ. ಮುಸ್ಲಿಮರಿಗೆ ಬೆಡ್‍ಗಳನ್ನು ಕೊಡುತ್ತಿಲ್ಲ.’
-ಅಲ್ತಾಫ್ ಹಳ್ಳೂರ, ಕಾಂಗ್ರೆಸ್‍ನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ