×
Ad

ಹೆಚ್ಚುವರಿ 1 ಕೋಟಿ ಡೋಸ್‍ ಲಸಿಕೆಗೆ ಕಾರ್ಯಪಡೆ ಸಮಿತಿ ಸಭೆ ಅನುಮೋದನೆ: ಡಿಸಿಎಂ ಕಾರಜೋಳ

Update: 2021-04-30 23:32 IST

ಬೆಂಗಳೂರು, ಎ.30: ಮೇ 1 ನೇ ತಾರೀಖಿನಿಂದ 18 ರಿಂದ 44 ವರ್ಷ ವಯೋಮಾನದವರಿಗೆ ರಾಜ್ಯದಲ್ಲಿ ಕೋವಿಡ್-19 ಲಸಿಕಾಕರಣಕ್ಕೆ ಇಂದು ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ  ಸಭೆಯಲ್ಲಿ ಮಹತ್ತರ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೋವಿಡ್ ಟಾಸ್ಕ್‍ಫೋರ್ಸ್ ಸಮಿತಿಯ ಅಧ್ಯಕ್ಷ ಗೋವಿಂದ ಕಾರಜೋಳ ತಿಳಿಸಿದರು.

ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿರಮ್ ಇನ್ಸ್‍ಟಿಟ್ಯೂಟ್ ಲೈಫ್ ಸೈನ್ಸ್‍ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಈಗಾಗಲೇ 1 ಕೋಟಿ ಡೋಸ್‍ಗಳ ಕೋವಿಶೀಲ್ಡ್ ಲಸಿಕೆಗಾಗಿ ಪೂರೈಕೆ ಆದೇಶದ ಜೊತೆಗೆ ಮತ್ತೊಂದು 1 ಕೋಟಿ ಡೋಸ್‍ಗಳನ್ನು ಪ್ರತಿ ಡೋಸ್‍ಗೆ 300 ರೂ.ಗಳಂತೆ ಕೋವಿಶೀಲ್ಡ್ ಲಸಿಕೆಗೆ ಬೇಡಿಕೆ ಪತ್ರ ಕಳುಹಿಸಲು ಕಾರ್ಯಪಡೆ ಸಮಿತಿ ಸಭೆ ಅನುಮೋದಿಸಿದೆ ಎಂದರು.

ಭಾರತ್ ಬಯೋಟೆಕ್ ಸಂಸ್ಥೆಗೆ 1 ಕೋಟಿ ಡೋಸ್‍ಗಳನ್ನು ಪ್ರತಿ ಡೋಸ್‍ಗೆ 400 ರೂ.ಗಳಂತೆ ಕೋವಾಕ್ಸಿನ್ ಲಸಿಕೆಗೆ ಬೇಡಿಕೆ ಪತ್ರ ಕಳುಹಿಸಲು ಕಾರ್ಯಪಡೆ ಸಮಿತಿ ಸಭೆ ಅನುಮೋದಿಸಿತು. 18 ರಿಂದ 44 ವರ್ಷ ವಯೋಮಾನದವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕಾ ತಯಾರಕರು ಖಾಸಗಿ ಸಂಸ್ಥೆಗಳಿಗೆ ನಿಗದಿ ಪಡಿಸಲಾದ ದರದ ಜೊತೆಗೆ ಖಾಸಗಿ ಆಸ್ಪತ್ರೆಗಳು ಪ್ರತಿ ಲಸಿಕಾ ಡೋಸ್‍ಗೆ ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಮಾರ್ಗಸೂಚಿಯಂತೆ ಸೇವಾ ಶುಲ್ಕವಾಗಿ ಪ್ರತಿ ಡೋಸ್‍ಗೆ 100 ರೂ.ಗಂತೆ ಮಾತ್ರ ವಿಧಿಸಲು ಸಭೆಯಲ್ಲಿ ಅನುಮೋದಿಸಲಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಿತಿ ಸದಸ್ಯರೂ ಹಾಗೂ ಸಚಿವ ಸಿ.ಸಿ.ಪಾಟೀಲ್ ಹಾಜರಾಗಿದ್ದರು. ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವಿದ್ ಅಖ್ತರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ಅನಿಲ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News