ಆಸ್ಪತ್ರೆಗಳು ರೋಗಿಗಳ ದಾಖಲಾತಿ ನಿರಾಕರಿಸಿದರೆ ನೀವು ಏನು ಮಾಡಬೇಕು ?

Update: 2021-05-01 12:00 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 1: ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಅಥವಾ ಕೋವಿಡ್‍ಯೇತರ ರೋಗಿಗಳು ಚಿಕಿತ್ಸೆಗಾಗಿ ಹೋದಾಗ ಅವರನ್ನು ಆಸ್ಪತ್ರೆಗಳು ಏಕಾಏಕಿ ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ ಎಂದು ಗುಲ್ಬರ್ಗದ ಮಾನವ ಹಕ್ಕುಗಳ ಹೋರಾಟಗಾರ ಮುಹಮ್ಮದ್ ರಿಯಾಝುದ್ದೀನ್ ತಿಳಿಸಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ದಾಖಲಾತಿ ನಿರಾಕರಿಸುವ ಆಸ್ಪತ್ರೆಗಳು ರೋಗಿಗಳಿಗೆ ರೆಫರ್ ಪತ್ರ ನೀಡಬೇಕು. ಇಲ್ಲದಿದ್ದರೆ, ಅಂತಹವರ ವಿರುದ್ಧ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ರೋಗಿಗಳು ಅಥವಾ ಸಂಬಂಧಪಟ್ಟವರು ದೂರು ನೀಡಬಹುದು ಎಂದರು.

ರೋಗಿಗಳು ದೂರು ನೀಡಲು ಅನುಕೂಲವಾಗುವಂತೆ ನಾವು ಮಾದರಿಯನ್ನು ಸಿದ್ಧಪಡಿಸಿದ್ದೇವೆ. ಅವರು ನೀಡುವಂತಹ ದೂರನ್ನು ಜಿಲ್ಲಾಧಿಕಾರಿ, ಸರಕಾರದ ಮುಖ್ಯ ಕಾರ್ಯದರ್ಶಿ, ಎಲ್ಲ ಸಚಿವರಿಗೆ ಕಳುಹಿಸಿಕೊಡುತ್ತೇವೆ. ರೆಫರ್ ಪತ್ರ ತೆಗೆದುಕೊಂಡು ಹೋದರೂ ಕೆಲವು ಆಸ್ಪತ್ರೆಗಳು ಹಾಸಿಗೆ ಲಭ್ಯವಿಲ್ಲವೆಂದು ರೋಗಿಗಳಿಗೆ ದಾಖಲಿಸಿಕೊಳ್ಳಲು ನಿರಾಕರಿಸುತ್ತಿವೆ. ಕೆಲವು ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ಬಲವಂತವಾಗಿ ಡಿಸ್ಚಾರ್ಜ್ ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಸರಕಾರಕ್ಕೆ ಮೀಸಲಿಡುವಂತೆ ಆದೇಶಿಸಲಾಗಿದೆ. ಆದರೆ, ಗುಲ್ಬರ್ಗದಲ್ಲಿ ಸರಕಾರಿ ಕೋಟಾದ ಹಾಸಿಗೆಗಳು ಭರ್ತಿಯಾಗದಿದ್ದರೂ ಆಸ್ಪತ್ರೆಗಳು ಹಾಸಿಗೆ ಲಭ್ಯವಿಲ್ಲ ಎಂದು ಹೇಳುತ್ತಿವೆ. ಇಂತಹ ಆಸ್ಪತ್ರೆಗಳ ವಿರುದ್ಧ ಜಿಲ್ಲಾಡಳಿತ, ಜನಪ್ರತಿನಿಧಿಗಳು ಯಾವುದೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅವರು ದೂರಿದರು.

ಸರಕಾರಿ ಕೋಟಾದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಸಾಮಾನ್ಯ ಬೆಡ್‍ಗೆ 10 ಸಾವಿರ ರೂ., ಆಕ್ಸಿಜನ್ ಬೆಡ್ 12 ಸಾವಿರ ರೂ., ಐಸಿಯುಗೆ 15 ಸಾವಿರ ರೂ. ಹಾಗೂ ಐಸಿಯು ವೆಂಟಿಲೇಟರ್ ಬೆಡ್‍ಗೆ 25 ಸಾವಿರ ರೂ.ಇದೆ. ಆದರೆ, ಇಲ್ಲಿ ಖಾಸಗಿ ಆಸ್ಪತ್ರೆಯವರು ಐಸಿಯು ಬೆಡ್‍ಗೆ 30 ಸಾವಿರ ರೂ. ಹಾಗೂ ಐಸಿಯು ವೆಂಟಿಲೇಟರ್ ಗೆ 45 ಸಾವಿರ ರೂ.ಪಡೆಯುತ್ತಿದ್ದಾರೆ ಎಂದು ರಿಯಾಝುದ್ದೀನ್ ಹೇಳಿದರು.

ಈ ಎಲ್ಲ ಮಾಹಿತಿಯನ್ನು ನಾವು ಹೈಕೋರ್ಟ್ ನಲ್ಲಿ ದಾಖಲಿಸಿರುವ ಪಿಐಎಲ್‍ನಲ್ಲಿ ಅಳವಡಿಸಲಾಗುವುದು. ಬಡವರ ನೋವು ಯಾರೂ ಕೇಳುತ್ತಿಲ್ಲ. ಖಾಸಗಿ ಆಸ್ಪತ್ರೆಗಳ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತಬೇಕು. ಹೈಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಸಮಾಜ ಸೇವಕ ಸಿರಾಜ್ ಶಾಬ್ದಿ ಮಾತನಾಡಿ, ಕೋವಿಡ್ ಎರಡನೆ ಅಲೆಯ ಬಗ್ಗೆ ಕಳೆದ ಸಾಲಿನ ಡಿಸೆಂಬರ್ ನಲ್ಲೇ ತಜ್ಞರು ಎಚ್ಚರಿಕೆ ನೀಡಿದ್ದರೂ ಈ ಸರಕಾರಗಳು ಚುನಾವಣಾ ರ್‍ಯಾಲಿಗಳನ್ನು ನಡೆಸುವ ಮೂಲಕ ಬೇಜವಾಬ್ದಾರಿಯನ್ನು ಪ್ರದರ್ಶಿಸಿವೆ. ಇದರಿಂದಾಗಿ, ನಮ್ಮ ರಾಜ್ಯ ಹಾಗು ದೇಶದಲ್ಲಿ ಈ ದುಸ್ಥಿತಿ ನಿರ್ಮಾಣವಾಗಿದೆ ಎಂದರು.

ಹಾಸಿಗೆಗಳು, ಔಷಧಗಳು ಲಭ್ಯವಿಲ್ಲದೆ ಜನ ಸಾಯುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗಳಿಗೆ ರೋಗಿಯನ್ನು ದಾಖಲಿಸಲು ರೆಫರ್ ಪತ್ರವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ. ರೆಫರ್ ಪತ್ರ ಇದ್ದರೂ ರೋಗಿಯನ್ನು ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳು ನಿರಾಕರಿಸುತ್ತಿವೆ. ಇದಕ್ಕೆ ಡಿಎಚ್‍ಒ, ಚುನಾಯಿತ ಪ್ರತಿನಿಧಿಗಳು ಜವಾಬ್ದಾರರು ಎಂದು ಅವರು ಹೇಳಿದರು.

ಸರಕಾರಿ ಕೋಟಾದಲ್ಲಿ ಮೀಸಲಾಗಿರುವ ಹಾಸಿಗೆಗಳ ಬಳಕೆ ಯಾವ ರೀತಿ ಆಗುತ್ತಿದೆ ಎಂಬುದರ ಬಗ್ಗೆ ಜನಪ್ರತಿನಿದೀಗಳು ಯಾಕೆ ಪರಿಶೀಲಿಸುತ್ತಿಲ್ಲ. ಎನ್‍ಜಿಒ ಗಳಾದ ನಾವು ಖಾಸಗಿ ಆಕ್ಸಿಜನ್ ಘಟಕಗಳನ್ನು ಸಂಪರ್ಕಿಸಿ ಗುಲ್ಬರ್ಗಕ್ಕೆ ಆಕ್ಸಿಜನ್ ತರಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಚುನಾಯಿತ ಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ. ಜನ ಸತ್ತ ನಂತರ ಕ್ರಮ ಕೈಗೊಳ್ಳುತ್ತಾರೋ? ಸರಕಾರದ ಮುಖ್ಯ ಕಾರ್ಯದರ್ಶಿಗೆ ಗುಲ್ಬರ್ಗದ ಪರಿಸ್ಥಿತಿ ಗೊತ್ತಾಗಬೇಕು. ಇದಕ್ಕಾಗಿ ನಮ್ಮ ಹೋರಾಟಕ್ಕೆ ಜನತೆಯ ಸಹಕಾರವು ಬೇಕು ಎಂದು ಅವರು ಹೇಳಿದರು.

ದೂರಿನ ಮಾದರಿ ಏನು?

ರೆಫರಲ್ ಪತ್ರವಿದ್ದರೂ ದಾಖಲಾತಿ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಇ-ಮೇಲ್ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗೆ ದೂರು ನೀಡಬೇಕು. ಇದರಲ್ಲಿ ರೋಗಿಯ ಹೆಸರು, ಅವರ ತಂದೆ ಹೆಸರು, ವಯಸ್ಸು, ಎಸ್‍ಆರ್‍ಎಫ್ ಐಡಿ, ರೋಗಿಯ ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಬೇಕು. ಜೊತೆಗೆ, ದೂರುದಾರರ ಹೆಸರು, ವಯಸ್ಸು, ವೃತ್ತಿ, ಮೊಬೈಲ್ ಸಂಖ್ಯೆ ಹಾಗೂ ವಿಳಾಸವನ್ನು ನಮೂದಿಸಬೇಕು.

ದೂರು ನೀಡುವ ಇಮೆಲ್ ವಿಳಾಸ ಯಾವುದು?

cm@karnataka.gov.in, min-mededu@karnataka.gov.in, min-health@ karnataka.gov.in, prs-hfw@ karnataka.gov.in, secyhwf@nic.in, secyme-hfw@ karnataka.gov.in, comn-hfw@ karnataka.gov.in, dmekarnataka@yahoo.com, janaspanda-ka@nic.in, dcglb@gmail.com, deo-gulbarga@gmail.com, rcgulb@gmail.com, rcofficegulbarga@gmail.com, dhokalaburgi-hfws@ karnataka.gov.in,director-hfws@ karnataka.gov.in, governor.rbblr-ka@gov.in, riyazec2006@gmail.com, shabdisiraj@gmail.com, regjudicial@hck.gov.in, arg.hckkalaburagi@ karnataka.gov.in.

Writer - ಅಮ್ಜದ್ ಖಾನ್ ಎಂ.

contributor

Editor - ಅಮ್ಜದ್ ಖಾನ್ ಎಂ.

contributor

Similar News