×
Ad

ಕೊರೋನದಿಂದ ಪುತ್ರಿ ಸಾವನ್ನಪ್ಪಿದ 6 ಗಂಟೆಯೊಳಗೆ ತಂದೆ ಹೃದಯಾಘಾತದಿಂದ ಮೃತ್ಯು

Update: 2021-05-01 21:47 IST
ಸಾಂದರ್ಭಿಕ ಚಿತ್ರ

ದಾವಣಗೆರೆ, ಮೇ 1: ಕೊರೋನದಿಂದ ಪುತ್ರಿ ಸಾವನ್ನಪ್ಪಿ ಆರು ಗಂಟೆಯೊಳಗೆ ತಂದೆ ಹೃದಯಾಘಾತದಿಂದ ಮೃತಪಟ್ಟು ಸಾವಿನಲ್ಲೂ ತಂದೆ- ಮಗಳು ಒಂದಾದ ಹೃದಯ ವಿದ್ರಾವಕ ಘಟನೆ ನಡೆದಿದೆ. 

ಶಿವಕುಮಾರಸ್ವಾಮಿ ಬಡಾವಣೆಯ 2ನೇ ಹಂತದ 2ನೇ ಕ್ರಾಸಿ ನಿವಾಸಿ ಮಂಜುನಾಥ್ (ಸೀಸ್ಕಡ್ಡಿ) ಹೃದಯಾಘಾತದಿಂದ ಮೃತಪಟ್ಟ ತಂದೆ. ಪೂಜಾ ಕೊರೋನದಿಂದ ಸಾವನ್ನಪ್ಪಿದ ಪುತ್ರಿ.

ಪೂಜಾ ಅವರನ್ನು ದಾವಣಗೆರೆ ಜಯನಗರದ ಮಂಜುನಾಥ್ ಎಂಬವರೊಂದಿಗೆ ಮದುವೆ ಮಾಡಿಸಲಾಗಿತ್ತು. ಮಂಜುನಾಥ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. 

ಪೂಜಾ ಅವರಿಗೆ ಕೊರೋನ ಸೋಂಕು ತಗಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆದರೆ ಪುತ್ರಿಯ ಸಾವಿನ ಸುದ್ದಿ ತಂದೆಗೆ ತಿಳಿಸಿರಲಿಲ್ಲ. ಶುಕ್ರವಾರ ಬೆಳಗಿನ ಜಾವ 5 ಗಂಟೆ ಸುಮಾರಿನಲ್ಲಿ ತಂದೆ ಮಂಜುನಾಥ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ತಂದೆ- ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಈಗ ಶೋಕ ಮಡುಗಟ್ಟಿದೆ. ಮಂಜುನಾಥ್ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಕಳೆದ 30 ವರ್ಷಗಳಿಂದ ಬಸ್ ನಿಲ್ದಾಣ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News