ಮೈಸೂರಿನ 3 ಕಡೆ 'ಕೋವಿಡ್ ಮಿತ್ರ' ಟ್ರಯೇಜ್ ಮತ್ತು ಕೌನ್ಸಿಲಿಂಗ್ ಕೇಂದ್ರ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಮೈಸೂರು, ಮೇ 1: ಕೋವಿಡ್ ಬಗ್ಗೆ ಜನರ ಆತಂಕ, ಗೊಂದಲ, ಭಯ ಉಂಟಾಗುತ್ತಿದ್ದು, ಈ ಸಮಸ್ಯೆ ನಿವಾರಣೆಗೆ ಮೈಸೂರಿನ ಮೂರು ಕಡೆ "ಕೋವಿಡ್ ಮಿತ್ರ" ಟ್ರಯೇಜ್ (ಚಿಕಿತ್ಸಾ ಸರದಿ ನಿರ್ಧಾರ) ಮತ್ತು ಸಲಹಾ ಕೇಂದ್ರವನ್ನು ತೆರೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾಹಿತಿ ನೀಡಿದ್ದಾರೆ.
ವಾರ್ ರೂಂ ಆರಂಭಿಸಿ 0821-2424111 ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿದ ನಂತರ ಕೆಲವೇ ದಿನಗಳಲ್ಲಿ ಸುಮಾರು 2 ಸಾವಿರ ದೂರವಾಣಿ ಕರೆ ಬಂದಿದೆ. ಪಾಸಿಟಿವ್ ಇಲ್ಲದಿದ್ದರೂ ಸೋಂಕಿನ ಲಕ್ಷಣ ಇವೆ, ಏನು ಮಾಡುವುದು ಎಂಬ ಗೊಂದಲದಲ್ಲಿದ್ದೀವಿ ಎಂಬ ಆತಂಕದ ಕರೆಗಳೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ. ಈ ಗೊಂದಲ, ಆತಂಕ ನಿವಾರಣೆಗೆ ಕೋವಿಡ್ ಮಿತ್ರ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕೇಂದ್ರಗಳಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ತಂತ್ರಜ್ಞನರು ಇರುತ್ತಾರೆ. ಅನಿವಾರ್ಯ ಸಂದರ್ಭಕ್ಕಾಗಿ ಆಕ್ಸಿಜನೇಟಡ್ ಹಾಸಿಗೆಗಳನ್ನು ಸಹ ವ್ಯವಸ್ಥೆ ಮಾಡಿಕೊಳ್ಳಲಾಗಿರುತ್ತದೆ. ಕೋವಿಡ್ ಪಾಸಿಟಿವ್ ಆಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಮುಂದೆ ಏನು, ಎಲ್ಲಿಗೆ ಹೋಗಬೇಕು ಎಂಬುದು ಕೆಲವರ ಪ್ರಶ್ನೆಯಾಗಿರುತ್ತದೆ. ಕೆಲವರಿಗೆ ಸೋಂಕಿನ ಲಕ್ಷಣ ಇರುತ್ತದೆ. ಆದರೆ ಕೊರೋನ ನೆಗಿಟಿವ್ ಆಗಿರುತ್ತೆ. ಕೆಲವರಿಗೆ ಸೋಂಕಿನ ಲಕ್ಷಣ ಇರುವುದಿಲ್ಲ, ಆದರೂ ಪಾಸಿಟಿವ್ ಇರುತ್ತದೆ. ಇಂತಹವರೆಲ್ಲರೂ ಇಲ್ಲಿ ವೈದ್ಯರ ತಪಾಸಣೆ/ಸಲಹೆ ಪಡೆದುಕೊಳ್ಳಬಹುದು.
ಜೆ.ಎಲ್.ಬಿ. ರಸ್ತೆಯಲ್ಲಿರುವ ಸೇಠ್ ಮೋಹನ್‌ದಾಸ್ ತುಳಸಿದಾಸ್ ಆಸ್ಪತ್ರೆ, ಎನ್.ಆರ್.ಮೊಹಲ್ಲಾದ ಬೀಡಿ ಕಾರ್ಮಿಕರ ಆಸ್ಪತ್ರೆ ಮತ್ತು ಕೆ.ಆರ್.ಎಸ್. ರಸ್ತೆಯಲ್ಲಿರುವ ಪಂಚಕರ್ಮ ಹೈಟೆಕ್ ಆಸ್ಪತ್ರೆಯಲ್ಲಿ ಈ 'ಕೋವಿಡ್ ಮಿತ್ರ' ಸಲಹಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ. ಕೋವಿಡ್ ಮಿತ್ರ ಕೇಂದ್ರದಲ್ಲಿ ವೈದ್ಯರು ತಪಾಸಣೆ ನಡೆಸಿ, ವ್ಯಕ್ತಿಯ ಆರೋಗ್ಯ ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ಚಿಕಿತ್ಸೆಗೆ ಶಿಫಾರಸ್ಸು ಮಾಡುತ್ತಾರೆ.
ಸೋಂಕಿತ ವ್ಯಕ್ತಿ ಅದಾದಲೇ ಗಂಭೀರ ಸ್ಥಿತಿಗೆ ಬಂದಿದ್ದರೆ ಅಲ್ಲಿಂದಲೇ ಸೂಕ್ತ ಸೌಲಭ್ಯವಿರುವ ಆಸ್ಪತ್ರೆಗೆ ಕಳುಹಿಸುತ್ತಾರೆ. ಸಾಮಾನ್ಯ ರೋಗ ಲಕ್ಷಣಗಳಿದ್ದರೆ ಅದಕ್ಕೆ ಸೂಕ್ತವಾದ ಹಾಸಿಗೆ ಸೌಲಭ್ಯ ಇರುವ ಆಸ್ಪತ್ರೆಗೆ ಕಳುಹಿಸುತ್ತಾರೆ. ಯಾವುದೇ ರೋಗ ಲಕ್ಷಣ ಇಲ್ಲದಿದ್ದಲ್ಲಿ ಸೋಂಕಿತ ವ್ಯಕ್ತಿ ಇಚ್ಚೆಗೆ ಅನುಗುಣವಾಗಿ ಮನೆಯಲ್ಲೇ ಪ್ರತ್ಯೇಕವಾಗಿರಲು (ಹೋಮ್ ಐಸೋಲೇಷನ್) ಅಥವಾ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಲು ಶಿಫಾರಸ್ಸು ಮಾಡುತ್ತಾರೆ.
ಮನೆಯಲ್ಲೇ ಪ್ರತ್ಯೇಕವಾಗಿರಲು ಇಚ್ಚಿಸುವವರಿಗೆ ಔಷಧಗಳನ್ನು ನೀಡಿ, ಪ್ರತಿ ದಿನ ನಿಗಾವಹಿಸಲು ಕೂಡ ವ್ಯವಸ್ಥೆ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳ ತಾಂತ್ರಿಕ ಮತ್ತು ವೈದ್ಯಕೀಯ ಸೇವೆಗಳನ್ನು ಬಳಸಿಕೊಂಡು ಈ ವಿನೂತನ ಕ್ರಮ ಕೈಗೊಳ್ಳಲಾಗಿದೆ. ರವಿವಾರದ ವೇಳೆಗೆ ಸಿದ್ಧತೆ ಪೂರ್ಣಗೊಂಡು ಕಾರ್ಯ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಕೋವಿಡ್ ಮಿತ್ರಕ್ಕೆ ಸಂಬಂಧಿಸಿದಂತೆ ಚಾಮರಾಜ ಕ್ಷೇತ್ರದಲ್ಲಿರುವ ಪಂಚಕರ್ಮ ಆಸ್ಪತ್ರೆ 0821-2519922, ನರಸಿಂಹರಾಜ ಕ್ಷೇತ್ರದಲ್ಲಿರುವ ಬೀಡಿಕಾರ್ಮಿಕರ ಆಸ್ಪತ್ರೆ 0821-2517422, ಕೃಷ್ಣರಾಜ ಕ್ಷೇತ್ರದಲ್ಲಿರುವ ಸೇಠ್ ಮೋಹನ್‌ದಾಸ್ ತುಳಸಿದಾಸ್ ಆಸ್ಪತ್ರೆಗೆ 0821-2517922, ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.