ಅಕ್ರಮವಾಗಿ ಸಾಗುವಾನಿ ಮರ ಸಾಗಣೆ: ಓರ್ವನ ಬಂಧನ, ಇಬ್ಬರು ಪರಾರಿ
ಶಿವಮೊಗ್ಗ: ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ ಕಳ್ಳಸಾಗಣೆ ಮಾಡುತ್ತಿದ್ದ ಓರ್ವ ಆರೋಪಿಯನ್ನು ಶಿವಮೊಗ್ಗ ವನ್ಯಜೀವಿ ವಲಯದ ಸಿಬ್ಬಂದಿಗಳು ಬಂಧಿಸಿದ್ದಾರೆ.
ಭಾರತಿ ನಗರದ ವಾಸಿ ಮಂಜ(46) ಯಾನೆ ಕುಳ್ಳಮಂಜ ಬಂಧಿತ ಆರೋಪಿ.
ಶಿವಮೊಗ್ಗ ವನ್ಯಜೀವಿ ವಲಯದ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಪುರದಾಳು ಮೀಸಲು ಅರಣ್ಯವಾದ(ಎಸ್ಎಫ್) ಕರಡಿಮಟ್ಟಿಯಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ ತುಂಡುಗಳನ್ನಾಗಿ ಮಾರ್ಪಡಿಸಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆ ನಡೆಸಿರುವ ಶಿವಮೊಗ್ಗ ವನ್ಯಜೀವಿ ವಲಯದ ಸಿಬ್ಬಂದಿಗಳು ಪ್ರಕರಣದ ಪ್ರಮುಖ ಆರೋಪಿ ಭಾರತಿ ನಗರದ ವಾಸಿ ಮಂಜ ಯಾನೆ ಕುಳ್ಳಮಂಜನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತನ ಸಹಚರರಾದ ಭೋವಿ ಕಾಲೋನಿ ವಾಸಿ ರಾಜ( 30), ಹಾಗೂ ಭಾರತಿ ನಗರದ ತಿರುಪತಿ(36) ತಲೆಮರೆಸಿಕೊಂಡಿದ್ದು,ಇವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಮೂವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಅಡಿ ಕಲಂ 27,29,31,50 & 51 ರ ಅಡಿ ಪ್ರಕರಣ ದಾಖಲಾಗಿದೆ
ಕಾರ್ಯಾಚರಣೆಯಲ್ಲಿ ಶೆಟ್ಟಿಹಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಕೃಪಾಸಾಗರ್.ಸಿ, ಅರಣ್ಯ ರಕ್ಷಕರಾದ ರಾಜು ಲಿಂಬು ಚವ್ಹಾಣ, ಸಲೀಮ್ ಎಂ, ಸಂತೋಷ ಹೆಚ್.ಎಸ್ ಮತ್ತು ವಾಹನ ಚಾಲಕರಾದ ಸುನೀಲ್ ಭಾಗವಹಿಸಿದ್ದರು.