ಕೇರಳ, ತಮಿಳುನಾಡಿನಲ್ಲಿ ಬಿಜೆಪಿಯ ಮತ ಪ್ರಮಾಣ ಹೆಚ್ಚಿರುವುದು ಆಶಾದಾಯಕ: ಸಿಎಂ ಯಡಿಯೂರಪ್ಪ

Update: 2021-05-02 15:23 GMT

ಬೆಂಗಳೂರು, ಮೇ 2: ರಾಜ್ಯದ ಬೆಳಗಾವಿ ಲೋಕಸಭೆ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿರುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಯ ಸಾಧನೆಯೂ ಅಭಿನಂದನಾರ್ಹ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಫೇಸ್ಬುಕ್ ನಲ್ಲಿ ಬರೆದಿರುವ ಅವರು, ಬೆಳಗಾವಿಯಲ್ಲಿ ಮತದಾರರು ಮತ್ತೊಮ್ಮೆ ಪಕ್ಷವನ್ನು ಗೆಲ್ಲಿಸಿ, ಆಶೀರ್ವದಿಸಿದ್ದಾರೆ. ಬಸವಕಲ್ಯಾಣದಲ್ಲಿ ಅನುಕಂಪದ ಅಲೆಯನ್ನೂ ಮೀರಿ ಪಕ್ಷದ ಅಭಿವೃದ್ಧಿಪರ ಹಾಗೂ ಜನಹಿತ ಪರ ಕಾರ್ಯಸೂಚಿಗೆ ಮತದಾರ ಒಲವು ತೋರಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಸ್ಸಾಂನಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಮರಳಿದ್ದು, ಪುದುಚೇರಿಯಲ್ಲೂ ಸರ್ಕಾರ ರಚನೆಯಲ್ಲಿ ಪಕ್ಷ ಭಾಗಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಸಂಖ್ಯಾಬಲವನ್ನು 3 ರಿಂದ 75 ಸ್ಥಾನಗಳಿಗೆ ಹೆಚ್ಚಿಸಿರುವುದು, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಬಿಜೆಪಿಯ ಮತಗಳ ಪ್ರಮಾಣ ಹೆಚ್ಚಿರುವುದು ಆಶಾದಾಯಕ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ದಕ್ಷಿಣದ ಇತರ ರಾಜ್ಯಗಳಲ್ಲೂ ಬಿಜೆಪಿ ಇನ್ನಷ್ಟು ಸದೃಢವಾಗಲಿದೆ. ಪಕ್ಷದ ಈ ಸಾಧನೆಗಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳು ಹಾಗೂ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News