ಬೆಳಗಾವಿಯಲ್ಲಿ ಸತೀಶ್ ವಿರುದ್ಧ ಮಂಗಳಾ ರೋಚಕ ಗೆಲುವು: ಬಸವಕಲ್ಯಾಣದಲ್ಲಿ ಬಿಜೆಪಿ, ಮಸ್ಕಿಯಲ್ಲಿ ಕಾಂಗ್ರೆಸ್ ಜಯಭೇರಿ

Update: 2021-05-02 17:05 GMT
ಗೆದ್ದ ಅಭ್ಯರ್ಥಿಗಳು (ಮಂಗಳಾ ಅಂಗಡಿ- ಶರಣು ಸಲಗರ- ಬಸನಗೌಡ ತುರ್ವಿಹಾಳ )

ಬೆಂಗಳೂರು, ಮೇ 2: ರಾಜ್ಯ ರಾಜಕೀಯದಲ್ಲಿ ತೀವ್ರ ಪ್ರತಿಷ್ಠೆ, ಪೈಪೋಟಿ ಸೃಷ್ಟಿಸಿದ್ದ ಮೂರು ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಸತೀಶ್ ಜಾರಕಿಹೊಳಿ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದ್ದು, ಬಸವಕಲ್ಯಾಣದಲ್ಲಿ ಬಿಜೆಪಿಯ ಶರಣು ಸಲಗರ ಹಾಗೂ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಜಯದ ನಗೆಬೀರಿದ್ದಾರೆ.

ರವಿವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭದಿಂದಲೂ ಕೊನೆಯ ಸುತ್ತಿನ ವರೆಗೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಂಗಳಾ ಅಂಗಡಿ ಮತ್ತು ಸತೀಶ್ ಜಾರಕಿಹೊಳಿ ನಡುವೆ ಹಾವು-ಏಣಿ ಆಟದ ರೀತಿಯಲ್ಲೇ ಮುನ್ನಡೆ-ಹಿನ್ನಡೆ ತೀವ್ರ ಪೈಪೋಟಿ ಏರ್ಪಟ್ಟಿತ್ತಾದರೂ ಅಂತಿಮ ಸುತ್ತಿನಲ್ಲಿ ಸತೀಶ್ ಜಾರಕಿಹೊಳಿ ವಿರುದ್ಧ ಮಂಗಳಾ ಅಂಗಡಿ 5,240 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸಂಸತ್ ಪ್ರವೇಶಿಸಲಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಒಟ್ಟು 4,40,327, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ-4,35,087 ಮತಗಳನ್ನು ಗಳಿಸಿದ್ದು, ಕೇವಲ 5,240 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಶರಣು ಸಲಗರ ಗೆಲುವು: ಬೀದರ್ ಜಿಲ್ಲೆಯ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಶರಣು ಸಲಗರವರು 20,629 ಮತಗಳ ಭಾರೀ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಲಾ ಬಿ.ನಾರಾಯಣ ರಾವ್ ಅವರು ಒಟ್ಟು 50,383 ಮತಗಳನ್ನು ಗಳಿಸಿದ್ದರೆ, ಬಿಜೆಪಿ ಶರಣು ಸಲಗರ ಒಟ್ಟು 71,012 ಮತಗಳನ್ನು ಗಳಿಸುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಲಿದ್ದಾರೆ. ಶರಣು ಸಲಗರ ಹೊರಗಿನವರೆಂದು ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿ ವಿರುದ್ಧವೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಠೇವಣಿ ಕಳೆದುಕೊಂಡಿದ್ದರೆ, ಜೆಡಿಎಸ್ ಅಭ್ಯರ್ಥಿ ಸೈಯದ್ ಯಶ್ರಬ್ ಮೂರನೇ ಸ್ಥಾನಕ್ಕೆ ತಳಲ್ಪಟ್ಟಿದ್ದಾರೆ.

ಪ್ರತಾಪ್ ಗೌಡ ಕನಸು ಭಗ್ನ: ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರ ಕನಸು ಭಗ್ನವಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರು 30,606 ಮತಗಳ ಭರ್ಜರಿ ಅಂತರದಿಂದ ವಿಜಯ ಸಾಧಿಸಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪ್ ಗೌಡ ಪಾಟೀಲ್ ಅವರು 55,731 ಮತಗಳನ್ನು ಗಳಿಸಿದ್ದರೆ ಕಾಂಗ್ರೆಸ್‍ನ ಬಸನಗೌಡ ತುರ್ವಿಹಾಳ ಅವರು ಒಟ್ಟು 86,337 ಮಗಳನ್ನು ಗಳಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದು, ವಿಧಾನಸಭೆ ಪ್ರವೇಶಿಸಲಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 213 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರತಾಪಗೌಡ ವಿರುದ್ಧ ತುರ್ವಿಹಾಳ ಸೋಲು ಕಂಡಿದ್ದರು.

ಕೈ ಕೊಟ್ಟ ಚಾಣಕ್ಯ ತಂತ್ರ: ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಸ್ಕಿ ಕ್ಷೇತ್ರದಲ್ಲಿ ಹದಿನೈದರಿಂದ ಇಪ್ಪತ್ತು ದಿನಗಳಿಗೂ ಹೆಚ್ಚು ಕಾಲ ನೆಲೆಯೂರಿ ಪ್ರತಾಪ್ ಗೌಡ ಪಾಟೀಲ್ ಅವರನ್ನು ಶತಾಯ-ಗತಾಯ ಗೆಲ್ಲಿಸಲೇಬೇಕೆಂದು ರಣತಂತ್ರ ರೂಪಿಸಿದ್ದರೂ, ವಿಜಯೇಂದ್ರ ತಂತ್ರಕ್ಕೆ ಮತದಾರ ತಿರುಮಂತ್ರ ಹಾಕಿದ್ದಾನೆ. ಹೀಗಾಗಿಯೇ ವಿಜಯೇಂದ್ರ ಪರೋಕ್ಷವಾಗಿ ಸೋಲಿನ ಹೊಣೆ ಹೊತ್ತಿದ್ದಾರೆ.

'ಜನಾದೇಶಕ್ಕೆ ತಲೆಬಾಗುತ್ತಾ ಚುನಾವಣೆಗಳಲ್ಲಿ ಸೋಲು-ಗೆಲುವುಗಳನ್ನು ಸಮಭಾವದಿಂದ ಸ್ವಿಕರಿಸೋಣ. ಮಸ್ಕಿ ಕ್ಷೇತ್ರದ ಕಾರ್ಯಕರ್ತರು ಎದೆಗುಂದುವುದು ಬೇಡ. ನಿಮ್ಮ ಪರಿಶ್ರಮ, ಹೋರಾಟ ವ್ಯರ್ಥವಾಗದಂತೆ ನೋಡಿಕೊಳ್ಳವ ಜವಾಬ್ದಾರಿ ನಮ್ಮ ಮೇಲಿದೆ. ಕಾರ್ಯಕರ್ತನಾಗಿ ಸದಾ ನಿಮ್ಮೊಂದಿಗಿರುವೆ. ಬಿಜೆಪಿ ಬೆಂಬಲಿಸಿದ ಮತದಾರ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವೆ' ಎಂದು ವಿಜಯೇಂದ್ರ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಸವದಿಗೆ ಕೃತಜ್ಞತೆ

ಕ್ಷೇತ್ರದ ಸಮಸ್ತ ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ನನಗೆ ಈ ಗೆಲುವು ದಕ್ಕಿದೆ. ಮತದಾರರು ಪ್ರಧಾನಿ ಮೋದಿ, ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕಾರ್ಯವೈಖರಿಗೆ ಮನಸೋತು ನನಗೆ ಮತ ಚಲಾಯಿಸಿದ್ದಾರೆ. ಪಕ್ಷದ ಅಧ್ಯಕ್ಷ ಸಚಿವರು, ಶಾಸಕರು ಹಾಗೂ ಚುನಾವಣೆ ಉಸ್ತುವಾರಿ ವಹಿಸಿದ್ದ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ'

-ಶರಣು ಸಲಗರ, ಬಸವಕಲ್ಯಾಣ ಕ್ಷೇತ್ರದ ಬಿಜೆಪಿಯ ಗೆದ್ದ ಅಭ್ಯರ್ಥಿ

ಫಲಿತಾಂಶ ಸಂತಸ ನೀಡಿದೆ

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಸಾಮಾನ್ಯ ಸಾಧನೆ ಮಾಡಿದೆ. ಅಸ್ಸಾಂನಲ್ಲಿ ಸಿಎಎ ಷಡ್ಯಂತ ಮೆಟ್ಟಿ ನಿಂತು ಮತ್ತೆ ಗೆದ್ದಿದ್ದೇವೆ. ಪುದುಚೇರಿಯಲ್ಲಿ ಇತಿಹಾಸ ಸೃಷ್ಟಿಸಿ ಇದೇ ಮೊದಲ ಬಾರಿ ಅಧಿಕಾರಕ್ಕೇರಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದೇವೆ. ಕೇರಳ, ತಮಿಳುನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ಮತ ಹಂಚಿಕೆ ಆಗಿದೆ.

-ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

ನನ್ನ ಗೆಲುವಲ್ಲ

ದಿ. ಸುರೇಶ ಅಂಗಡಿ ಅವರು ಜಿಲ್ಲೆಯ ಅಭಿವೃದ್ಧಿಗೆ ಬಹಳ ಕನಸು ಕಂಡಿದ್ದರು. ಅವರು ಅಂದುಕೊಂಡಿದ್ದ ಎಲ್ಲ ಕಾರ್ಯಗಳನ್ನು ಮಾಡಿ ಕೊಡುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ. ಇದು ನನ್ನ ಗೆಲುವಲ್ಲ ಕಾರ್ಯಕರ್ತರ ಗೆಲುವು. ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ.

-ಮಂಗಳಾ ಅಂಗಡಿ, ಬೆಳಗಾವಿ ಬಿಜೆಪಿ ಅಭ್ಯರ್ಥಿ

ಮಮತಾ ಬ್ಯಾನರ್ಜಿ ಗೆಲುವು ದೇಶದ ರೈತರ ಗೆಲವು

ಪಶ್ಚಿಮ ಅಂಗಳದಲ್ಲಿ ಮಮತಾ ಬ್ಯಾನರ್ಜಿ ಗೆಲುವು ದೇಶದ ರೈತರ ಗೆಲವು ಆಗಿದೆ. ಕೇಂದ್ರ ಸರಕಾರ ಹೊಸದಿಲ್ಲಿ ಗಡಿಭಾಗದಲ್ಲಿ ರೈತರ ಹೋರಾಟದ ಬಗ್ಗೆ ಲಘುವಾಗಿ ವರ್ತಿಸಿದ ಕಾರಣ ಪಶ್ಚಿಮ ಬಂಗಾಳದಲ್ಲಿ ರೈತರು ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸಿ ಸರ್ವಾಧಿಕಾರಿ ಆಡಳಿತ ನಡೆಸುವ ಬಿಜೆಪಿ ಪಕ್ಷಕ್ಕೆ ತಕ್ಕ ಎಚ್ಚರಿಕೆ ನೀಡಿದ್ದಾರೆ.

-ಕುರುಬೂರು ಶಾಂತಕುಮಾರ್, ರೈತ ಮುಖಂಡ

ನನ್ನ ಗೆಲುವಿಗಾಗಿ ಶ್ರಮಿಸಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಎಲ್ಲ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮತದಾರರಿಗೆ ಧನ್ಯವಾದ. ಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ಮತ್ತೆ ಇಂತಹ ಹಲವಾರು ಚುನಾವಣೆ ಸವಾಲುಗಳನ್ನು ನಾವು ಎದುರಿಸಬೇಕಾಗಿದೆ.

-ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ, ಬೆಳಗಾವಿ

ಕ್ಷೇತ್ರದ ಜನತೆಗೆ ಅಭಿವೃದ್ಧಿ ಬೇಕಾಗಿಲ್ಲ. ಆದರೆ, ಬದಲಾವಣೆ ಬಯಸಿ ಹೊಸಬರಿಗೆ ಅವಕಾಶ ನೀಡಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಈ ಫಲಿತಾಂಶ ಕುರಿತು ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವೆ.

-ಪ್ರತಾಪ್ ಗೌಡ ಪಾಟೀಲ್, ಬಿಜೆಪಿ ಪರಾಜಿತ ಅಭ್ಯರ್ಥಿ, ಮಸ್ಕಿ

ಉಪ ಚುನಾವಣೆಯಲ್ಲಿ ನನ್ನ ಗೆಲುವು ಮಸ್ಕಿ ಕ್ಷೇತ್ರದ ಗೆಲುವು ಆಗಿದ್ದು, ನನ್ನನ್ನು ಗೆಲ್ಲಿಸಿದ ಮತದಾರರಿಗೆ ಋಣಿಯಾಗಿರುವೆ. ಈ ಫಲಿತಾಂಶ 2023ರ ಚುನಾವಣೆಗೆ ದಿಕ್ಸೂಚಿಯಾಗಲಿದೆ.

-ಆರ್.ಬಸವನಗೌಡ ತುರವಿಹಾಳ, ಕಾಂಗ್ರೆಸ್ ಪಕ್ಷದ ವಿಜೇತ ಅಭ್ಯರ್ಥಿ , ಮಸ್ಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News