ಹೆಲ್ಮೆಟ್ ಧರಿಸದ್ದಕ್ಕೆ ಪ್ರಶ್ನಿಸಿದ ಪೊಲೀಸರ ಮೇಲೆಯೇ ಯುವಕನಿಂದ ಹಲ್ಲೆ: ಆರೋಪಿ ಬಂಧನ, ಓರ್ವ ಪರಾರಿ

Update: 2021-05-02 16:51 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಮೇ 2: ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆಯೇ ಯುವಕನೋರ್ವ ಸ್ನೇಹಿತನ ಜೊತೆಗೂಡಿ ಹಲ್ಲೆ ನಡೆಸಿದ್ದಾನೆನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶನಿವಾರ ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಅಣ್ಣಾ ನಗರದ ತುಂಗಾ ಚಾನಲ್ ಬಳಿ ಪೋಲಿಸರು ವಾಹನ ತಪಾಸಣೆ ನಡೆಸುತ್ತಿದ್ದರು. ಕರ್ಫ್ಯೂ ನಿಯಮ ಉಲ್ಲಂಘಿಸಿ ಮನೆಯಿಂದ ಹೊರಬಂದ ಇನಾಯತ್ (29) ಎಂಬ ಯುವಕ ಹೆಲ್ಮೆಟ್ (ಶಿರಸ್ತ್ರಾಣ) ಇಲ್ಲದೆ ಬೈಕ್ ಚಲಾಯಿಸಿಕೊಂಡು ಬಂದಿದ್ದಾನೆ. ಇದನ್ನು‌ ಕಂಡ ಪೊಲೀಸರು ಬೈಕ್ ತಡೆದು ಹೆಲ್ಮೆಟ್ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದ್ದು, ತಕ್ಷಣ ಪೊಲೀಸರು ಲಾಠಿ ಬೀಸಿದ್ದಾರೆ. ಈ ವೇಳೆ ಬೈಕ್ ಸವಾರ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಬಳಿಕ ಇನಾಯತ್ ತನ್ನ ಸ್ನೇಹಿತನಿಗೆ ಕರೆ ಮಾಡಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ವೇಳೆ ಕೆಲಕಾಲ‌ ಗೊಂದಲ ಉಂಟಾಗಿದೆ. ಹಲ್ಲೆ ಮಾಡಿದ ಯುವಕ ಇನಾಯತ್ ನನ್ನು ಪೊಲೀಸರು ಜೀಪಿನಲ್ಲಿ ಕೂರಿಸಲು ಯತ್ನಿಸಿದ್ದಾರೆ. ಇದಕ್ಕೆ ಒಪ್ಪದ ಇನಾಯತ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕೊರಳ ಪಟ್ಟಿಗೆ ಕೈ ಹಾಕಿದ್ದಾನೆ ಎನ್ನಲಾಗಿದೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಹಿನ್ನಲೆಯಲ್ಲಿ ಪೊಲೀಸರು ಲಾಠಿಯಲ್ಲಿ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ.

ಇನಾಯತ್ ನ ಸ್ನೇಹಿತ ಫಯಾಜ್ ಅಹಮ್ಮದ್(29) ಪರಾರಿಯಾಗಿದ್ದು, ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕಾಗಿ ಆತನಿಗೆ ದಂಡ ವಿಧಿಸಲಾಗಿದೆ. ಆತ ವಾಪಾಸು ಹೋಗಿ ತನ್ನ‌ ಸ್ನೇಹಿತನನ್ನು ಕರೆದುಕೊಂಡು ಬಂದು ಸಬ್ ಇನ್ಸ್ ಪೆಕ್ಟರ್ ಕುತ್ತಿಗೆಗೆ ಕೈ ಹಾಕಿ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತನನ್ನು ಪೊಲೀಸ್ ವಾಹನದಲ್ಲಿ ಕೂರಿಸಲು ನಮ್ಮ ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಆತ ವಾಹನದಲ್ಲಿ‌ ಕೂರಲು ಒಪ್ಪದೆ ಹಲ್ಲೆಗೆ ಯತ್ನಿಸಿದ್ದಾನೆ. ಇಬ್ಬರ ಮೇಲೆ ಕಲಂ 353, 332( ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆಗೆ ಯತ್ನ) ಪ್ರಕರಣ ದಾಖಲಾಗಿದೆ. ಒಬ್ಬನನ್ನು ಬಂಧಿಸಲಾಗಿದೆ. ಇನ್ನೊಬ್ಬ ತಲೆಮರೆಸಿಕೊಂಡಿದ್ದು ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು.

- ಬಿ.ಎಂ ಲಕ್ಷ್ಮೀ ಪ್ರಸಾದ್‌, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News