×
Ad

ಖಾಸಗಿ ಆಸ್ಪತ್ರೆಗಳು ಹಾಸಿಗೆ, ಔಷಧದ ಮಾಹಿತಿಯನ್ನು ಫಲಕದಲ್ಲಿ ಪ್ರದರ್ಶಿಸಬೇಕು: ಸರಕಾರ ಆದೇಶ

Update: 2021-05-02 23:00 IST

ಬೆಂಗಳೂರು, ಮೇ 2: ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳು ಲಭ್ಯವಿರುವ ಬೆಡ್ ಹಾಗೂ ಔಷಧದ ಮಾಹಿತಿಯನ್ನು ಪ್ರದರ್ಶನ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಜತೆಗೆ ಸಹಾಯ ಕೇಂದ್ರ ಸೌಲಭ್ಯವನ್ನೂ ಒದಗಿಸಬೇಕು ಎಂದು ರಾಜ್ಯ ಸರಕಾರ ರವಿವಾರ ಆದೇಶ ಹೊರಡಿಸಿದೆ.

ಎಲ್ಲ ಜಿಲ್ಲೆಗಳಲ್ಲಿರುವ ಆರೋಗ್ಯ ಸೇವಾ ಕೇಂದ್ರಗಳು ತಕ್ಷಣ ಈ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ತಿಳಿಸಿದ್ದಾರೆ.

ಕೊರೋನ ಸೋಂಕಿತ ರೋಗಿಗಳಿಗೆ ಶೇ.50ರಷ್ಟು ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳು ಮೀಸಲಿಡಬೇಕು ಎಂದು ಆದೇಶಿಸಿದ್ದರೂ ಇನ್ನು ಕೆಲವು ಆಸ್ಪತ್ರೆಗಳು ಮೀಸಲಿರಿಸಿಲ್ಲ. ಹೀಗಾಗಿ, ಬಿಬಿಎಂಪಿಯ ಕೇಂದ್ರೀಕೃತ ಹಂಚಿಕೆ ವ್ಯವಸ್ಥೆ ಮೂಲಕ ಹಾಸಿಗೆ ಹಂಚಿಕೆ ಮಾಡಿದ್ದರೂ ಹಲವು ರೋಗಿಗಳಿಗೆ ಹಾಸಿಗೆ ಸಿಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ, ಸರಕಾರ ಈ ಆದೇಶ ಹೊರಡಿಸಿದೆ.

ಕೆಪಿಎಂಇ ಕಾಯ್ದೆಯಡಿ ನೋಂದಾಯಿತ ಎಲ್ಲ ಖಾಸಗಿ ಆಸ್ಪತ್ರೆಗಳು ಆಸ್ಪತ್ರೆಯ ಹೆಸರು, ಒಟ್ಟು ಹಾಸಿಗೆಗಳ ಸಂಖ್ಯೆ, ಕೋವಿಡ್ ರೋಗಿಗಳಿಗೆ ಮೀಸಲಿಟ್ಟ ಒಟ್ಟು(ಶೇ 50) ಹಾಸಿಗೆಗಳ ಮಾಹಿತಿಯನ್ನು ಪ್ರದರ್ಶಿಸಬೇಕು. ಜತೆಗೆ ತಮ್ಮಲ್ಲಿ ಲಭ್ಯವಿರುವ ಎಲ್ಲ ಅವಶ್ಯಕ ಔಷಧಗಳ ಮಾಹಿತಿ ಮತ್ತು ಸಹಾಯ ಕೇಂದ್ರದ ವಿವರವನ್ನೂ ನೀಡಬೇಕು. ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News