ಕೊರೋನ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುವ ಅಬ್ದುಲ್ ಖಾದರ್

Update: 2021-05-02 17:48 GMT

ಹಾವೇರಿ, ಮೇ 2: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನಂಪ್ರತಿ ಹೆಚ್ಚಳವಾಗುತ್ತಿದ್ದು, ಈ ರೋಗದಿಂದ ಮೃತಪಟ್ಟರೇ ಅವರ ಕುಟುಂಬದವರು ಹಾಗೂ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಹಾವೇರಿ ಜಿಲ್ಲೆಯವರಾದ ಅಬ್ದುಲ್ ಖಾದರ್ ಎಂಬುವವರು ಅನಾರೋಗ್ಯದಿಂದ ಬಳಲುತ್ತಿರುವವರು, ಅನಾಥರನ್ನು ತಮ್ಮ ಮನೆಯವರೆಂದು ಭಾವಿಸಿ ಸಲಹುತ್ತಿದ್ದಾರೆ. ಜತೆಗೆ ಕೊರೋನದಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಪಿಪಿಇ ಕಿಟ್ ಧರಿಸಿ ಮಾಡುತ್ತಿದ್ದಾರೆ.

ಇವರಿಗೆ ನಲವತ್ತೈದು ವರ್ಷ. ಹಾವೇರಿ ನಗರದ ಸುಭಾಸ ವೃತ್ತದ ಬಳಿಯ ನಿವಾಸಿ. ಅಬ್ದುಲ್ ಖಾದರ್ ಸುಭಾಸ ವೃತ್ತದಲ್ಲಿ ಸಹೋದರರ ಜೊತೆ ವೆಲ್ಡಿಂಗ್ ಶಾಪ್‍ನಲ್ಲಿ ಕೆಲಸ ಮಾಡುತ್ತಾರೆ.

ವೃತ್ತಿಯ ಜತೆಗೆ ಆರೇಳು ವರ್ಷಗಳಿಂದ ಅನಾಥರು ಮತ್ತು ಬಡ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಯಾವುದೇ ರೋಗಿಗಳು ಏನಾದರೂ ಸಹಾಯ ಬೇಕೆಂದು ಕರೆ ಮಾಡಿದರೆ ಅಬ್ದುಲ್ ಖಾದರ್ ತಕ್ಷಣ ಅಲ್ಲಿಗೆ ಧಾವಿಸಿ ಬಡವರು, ಅನಾಥ ರೋಗಿಗಳ ನೆರವಿಗೆ ನಿಲ್ಲುತ್ತಾರೆ. ಕೆಲವು ಸಂದರ್ಭಗಳಲ್ಲಿ ತಮ್ಮ ಮನೆಯಿಂದಲೇ ರೋಗಿಗಳಿಗೆ ಊಟ, ಟಿಫಿನ್ ತಂದುಕೊಟ್ಟು ಬಡರೋಗಿಗಳ ಆರೈಕೆ ಮಾಡುತ್ತಿದ್ದಾರೆ.

ಕಳೆದೊಂದು ವರ್ಷದಿಂದ ಎಲ್ಲೆಲ್ಲೂ ಕೊರೋನ ಅಬ್ಬರ ಶುರುವಾಗಿದೆ. ಆದರೆ ಅಬ್ದುಲ್ ಖಾದರ್ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮಾಸ್ಕ್ ಧರಿಸಿ, ಹ್ಯಾಂಡ್ ಗ್ಲೋಸ್ ಹಾಕಿಕೊಂಡು, ಆಗಾಗ ಸ್ಯಾನಿಟೈಸರ್ ಬಳಸುತ್ತಾ ಬಡವರು, ಅನಾಥ ರೋಗಿಗಳ ನೆರವಿಗೆ ನಿಲ್ಲುತ್ತಿದ್ದಾರೆ. ಈಗಂತೂ ಕೊರೋನ ಎರಡನೆ ಅಲೆಯ ಅಬ್ಬರಕ್ಕೆ ಜನರು ಅಕ್ಷರಶಃ ಭಯದ ವಾತಾವರಣದಲ್ಲಿ ಮುಳುಗಿದ್ದಾರೆ. ಮನೆಯಲ್ಲಿನ ಯಾರಿಗಾದರೂ ಏನಾದರೂ ಆರೋಗ್ಯ ಸಮಸ್ಯೆ ಎದುರಾದರೆ ಭಯದಿಂದ ನೋಡುವ ವಾತಾವರಣವಿದೆ. ಹೀಗಿದ್ದೂ ಯಾರಾದರೂ ಸಹಾಯ ಬೇಕು ಎಂದಾದರೆ ಅಬ್ದುಲ್ ಖಾದರ್ ಹಿಂದೆ ಮುಂದೆ ನೋಡದೆ ರೋಗಿಗಳ ನೆರವಿಗೆ ನಿಲ್ಲುತ್ತಿದ್ದಾರೆ.

19 ಕೋವಿಡ್ ಶವಗಳ ಅಂತ್ಯಕ್ರಿಯೆ: ರಸ್ತೆ, ಮಾರುಕಟ್ಟೆ ಹೀಗೆ ಎಲ್ಲಿಯಾದರೂ ಅನಾಥರು ಸಾವನ್ನಪ್ಪಿದ್ದರೆ ಅಬ್ದುಲ್ ಖಾದರ್ ಅಲ್ಲಿಗೆ ಬಂದು ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ದಾಖಲಿಸುತ್ತಾರೆ. ಮರಣೋತ್ತರ ಪರೀಕ್ಷೆ ಮುಗಿದ ಮೇಲೆ ಯಾರೂ ಸಂಬಂಧಿಕರು ಬರದೇ ಇದ್ದಾಗ ಅಬ್ದುಲ್ ಖಾದರ್ ಅನಾಥ ಮೃತದೇಹಗಳ ಅಂತ್ಯಕ್ರಿಯೆ ಮಾಡುತ್ತಾರೆ. ಕೊರೋನ ಮೊದಲನೇ ಅಲೆಯ ಸಮಯದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟ ಹತ್ತೊಂಬತ್ತು ಜನರ ಅಂತ್ಯಕ್ರಿಯೆ ಮಾಡಿದ್ದಾರೆ.

ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆಗೆ ಪಿಪಿಇ ಕಿಟ್ ಧರಿಸಿ ಕೊರೋನದಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಿದ್ದಾರೆ. ಕೊರೋನದಿಂದ ಮೃತಪಟ್ಟವರು ಮಾತ್ರವಲ್ಲದೆ ಅನೇಕ ಅನಾಥರ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕೊರೋನ ಎರಡನೆ ಅಲೆಯ ಅಬ್ಬರದ ಈ ಸಮಯದಲ್ಲೂ ಜಿಲ್ಲಾಸ್ಪತ್ರೆಯಲ್ಲೇ ಹೆಚ್ಚಾಗಿ ಇದ್ದು, ಸಮಸ್ಯೆ ಹೇಳಿಕೊಂಡು ಬರುವ ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಜೊತೆ ನಿಂತು ಅನಾಥರಿಗೆ ಸಹಾಯ ಮಾಡುವ ಮೂಲಕ ಇಲಾಖೆಗೂ ಸಹಕಾರಿ ಆಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News