ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದುರಂತ: ಸಿಎಂ, ಆರೋಗ್ಯ ಸಚಿವರ ರಾಜೀನಾಮೆಗೆ ಆಗ್ರಹಿಸಿ ಟ್ವಿಟರ್ ಅಭಿಯಾನ

Update: 2021-05-03 17:05 GMT

ಬೆಂಗಳೂರು, ಮೇ 3: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 20ಕ್ಕೂ ಅಧಿಕ ಮಂದಿ ಕೋವಿಡ್ ಸೋಂಕಿತರು ಸಾವನ್ನಪ್ಪಿರುವ ಘಟನೆ ಇದೀಗ ರಾಷ್ಟ್ರದ ಗಮನ ಸೆಳೆದಿದ್ದು, ರಾಜಕೀಯ ನಾಯಕರು, ಸಾಮಾಜಿಕ ಜಾಲತಾಣ ಬಳಕೆದಾರರು ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂಬಂಧ ಹಲವು ರಾಜಕೀಯ ನಾಯಕರು ಹೇಳಿಕೆಗಳನ್ನು ನೀಡಿದ್ದು, ನೆಟ್ಟಿಗರು ಟ್ವಿಟರ್, ಫೇಸ್ಬುಕ್ ಮೂಲಕ ಅಭಿಯಾನ ನಡೆಸುತ್ತಿದ್ದಾರೆ. #ResignSudhakar, #ResignBSY ಹ್ಯಾಶ್ ಟ್ಯಾಗ್ ಗಳು ಟ್ರೆಂಡಿಂಗ್ ಆಗಿದ್ದು, ಆರೋಗ್ಯ ಸಚಿವ ಸುಧಾಕರ್ ಮತ್ತು ಸಿಎಂ ಯಡಿಯೂರಪ್ಪ ಅವರು ರಾಜೀನಾಮೆ ನೀಡುವಂತೆ ಆಗ್ರಹಿಸಿ 10 ಸಾವಿರಕ್ಕೂ ಅಧಿಕ ಟ್ವೀಟ್ ಮಾಡಲಾಗಿದೆ.

''ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕವಿಲ್ಲದ ಕಾರಣ 24 ಜನರು ಸಾವನ್ನಪ್ಪಿದ್ದಾರೆ. ಇದು ಸಿಎಂ ಯಡಿಯೂರಪ್ಪ ಮತ್ತು ಸಚಿವ ಸುಧಾಕರ್ ಅವರ ಕ್ರಿನಿನಲ್  ನಿರ್ಲಕ್ಷ್ಯ. #ResignSudhakar'' ಎಂದು ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಆರೋಗ್ಯ ಸಚಿವ ಸುಧಾಕರ್ ಆಮ್ಲಜನಕದ ಕೊರತೆಯಿಲ್ಲ ಎಂದು ಹೇಳಿದ್ದರು. ಅವರು ಈಗ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆಯೇ? ಎಂದು ವಂಶಿ ಚಾಂದ್ ರೆಡ್ಡಿ ಎಂಬವರು ಪ್ರಶ್ನಿಸಿದ್ದಾರೆ.

ನಮ್ಮ ಕರ್ನಾಟಕ ಮತ್ತೊಂದು ಉತ್ತರ ಪ್ರದೇಶ ಆಗುವುದ ನಮಗೆ ಬೇಕಾಗಿಲ್ಲ. ಈ ಸಾವಿಗೆ ಸಿಎಂ ಯಡಿಯೂರಪ್ಪ ಅವರು ನೈತಿಕ ಹೊಣೆಗಾರಿಕೆಹೊರಲಿದ್ದಾರೆಯೇ ಎಂದು ವನಿತಾ ಸುರ್ವಣ ಎಂಬವರು ಕೇಳಿದ್ದಾರೆ.

ಕೊರೋನದೊಂದಿಗಿನ ಹೋರಾಟದಲ್ಲಿ ಕರ್ನಾಟಕ ಗಂಭೀರ ಸ್ಥಿತಿಗೆ ಇಳಿದಿದೆ. ಡಾ.ಸುಧಾಕರ್ ಅವರು ಕರ್ನಾಟಕದ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿಲ್ಲ. #ResignSudhakar ಎಂದು ಸಂದೀಪ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆದ ಸಾವಿನ ನೈತಿಕ ಹೊಣೆಯನ್ನ ಸಚಿವರಾದ ಸುಧಾಕರ್ ಅವರು ಹೊತ್ತು ಈ ಕೂಡಲೆ ರಾಜೀನಾಮೆ ನೀಡಬೇಕು. #ResignSudhakar ಎಂದು ಭುವನ್ ಕರ್ಕೇರ ಎಂಬವರು ಆಗ್ರಹಿಸಿದ್ದು, '' ನನ್ನ ರಾಜ್ಯದ ಜನರಿಗೆ ಆಕ್ಸಿಜನ್ ಕೊಡದ ನೀವು ಸಚಿವನ ಸ್ಥಾನದಲ್ಲಿ ಕುಳಿತಿರುವುದು ವ್ಯರ್ಥ, #ResignSudhakar ಎಂದು ರೇಣುಕ ಸ್ವಾಮಿ ಎಂಬವರು ತಿಳಿಸಿದ್ದಾರೆ.

ಆರೋಗ್ಯ ಸಚಿವ ಸುಧಾಕರ್ ಅವರೇ ಜನ ಸಾಯುತ್ತಿದ್ದರೂ ಕಮಿಷನ್ ಲೆಕ್ಕ ಹಾಕುವುದರಲ್ಲಿ ಮುಳುಗಿದ್ದೀರಾ? ಹೆಣದ ಮೇಲೆ ಹಣ ಮಾಡಿ ಯಾವ ಸಾಮ್ರಾಜ್ಯ ಕಟ್ಟಲು ಹೊರಟಿದ್ದೀರಾ ಸ್ವಾಮಿ? ರಾಜೀನಾಮೆ ಕೊಡಿ ಎಂದು ಗುಲಾಬ್ ಬಾಳೇಕುಂದ್ರಿ ಎಂಬವರು ಟ್ವೀಟ್ ಮಾಡಿದ್ದಾರೆ.

ಸರ್ಕಾರವೇ 24 ಜನರನ್ನ ಕೊಂದು, ಸರ್ಕಾರವೇ ಒಂದು ಐಎಎಸ್ ಅಧಿಕಾರಿಯನ್ನ ನೇಮಿಸಿ, ಸರ್ಕಾರದ ವಿರುದ್ಧವೇ ತನಿಖೆ ಮಾಡಿ ಎಂದು ಆದೇಶ ನೀಡಿತಂತೆ. ನಗಬೇಕು, ಅಳಬೇಕೋ ನೀವೇ ಹೇಳಿ. #ಆರೋಗ್ಯಮಂತ್ರಿ_ಸಾವನ್ನೇತಂದ್ರಿ #ResignSudhakar #ರಾಜೀನಾಮೆಕೊಡಿ ಎಂದು ರವಿ ಎಂಬವರು ಆಗ್ರಹಿಸಿದ್ದಾರೆ.

ಎಂತ ದರಿದ್ರ ಬಿಜೆಪಿ ಸರ್ಕಾರ. ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಾಜದಲ್ಲಿ ಬದುಕುತ್ತಿದ್ದೇವೆ. ಬೆಳಗ್ಗೆ ಕಳವಾಗಿದ್ದ ಒಬ್ಬ ಕೊರೋನ ಸೋಂಕಿತ ಸಂಜೆ ವೇಳೆಗೆ ಮೋರಿಯಲ್ಲಿ ಹೆಣವಾಗಿ ಪತ್ತೆ. ಏನಾಗಿದೆ ಚಾಮರಾಜನಗರ ಆಸ್ಪತ್ರೆಗೆ #ResignSudhakar ಎಂದು ಸಚಿನ್ ಎಂಬವರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲೋ ತೇಜಸ್ವಿ ಸೂರ್ಯ ಅವರೇ, ನೀವು ಈಗ ಎಲ್ಲಿ ಅಡಗಿದ್ದೀರಿ? ಆಕ್ಸಿಜನ್ ಪೂರೈಕೆಯ ಕೊರತೆಯನ್ನು ನೀವು ನಿರಾಕರಿಸಿದ್ದೀರಿ ಮತ್ತು ಪ್ರತಿಪಕ್ಷಗಳು ವಂಚನೆಯ ನಿರೂಪಣೆ ರಚಿಸುತ್ತಿರುವುದಾಗಿ ದೂರಿದ್ದೀರಿ. ಈಗ ಈ ದುರ್ಘಟನೆಗೆ ಕಾರಣ ಯಾರು ? ಚಾಮರಾಜನಗರದಂತಹ ಘಟನೆ ಮತ್ತೆ ಸಂಭವಿಸಿದರೆ? ಎಂದು ಪ್ರತಾಪ್ ಕಣಗಾಲ್ ಎಂಬವರು ಟ್ವೀಟ್ ಮಾಡಿದ್ದಾರೆ.

ಆಮ್ಲಜನಕದ ಕೊರತೆಯಿಂದಾಗಿ ಚಾಮರಾಜನಗರದಲ್ಲಿ 24 ಜೀವಗಳನ್ನು ಕಳೆದುಕೊಂಡಿರುವುದು ವಿನಾಶಕಾರಿ. ಈ ಸಾವುಗಳು ಸರ್ಕಾರದ ವೈಫಲ್ಯದಿಂದ ಆಗಿದೆ. ಆಮ್ಲಜನಕದ ಕೊರತೆಯ ಬಗ್ಗೆ ಮಾತನಾಡುವಾಗ ಬೆದರಿಕೆ ಹಾಕುವ ಬದಲು, ಸರ್ಕಾರವು ಆಮ್ಲಜನಕವನ್ನು ಪೂರೈಸಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು ಎಂದು ಶಾಸಕ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಕರ್ನಾಟಕ ಈ ಕೋವಿಡ್ ಅವ್ಯವಸ್ಥೆಯಲ್ಲಿ ಇರುವುದಕ್ಕೆ ಕಾರಣ ಬಿಜೆಪಿ. ಆರೋಗ್ಯ ತಜ್ಞರ ಸಲಹೆಯನ್ನು ನಿರ್ಲಕ್ಷಿಸಲಾಗಿದೆ. ಜೀವಂತವಾಗಿರುವಾಗ ಅಥವಾ ಮರಣ ಹೊಂದಿದಾಗ ಜನರಿಗೆ ಯಾವುದೇ ಘನತೆ ಇರುವುದಿಲ್ಲ ಎಂದು ಈ ಸರ್ಕಾರ ಖಚಿತಪಡಿಸಿದೆ. ಅತ್ಯಂತ ಅಸಮರ್ಥ ಜನರು ರಾಜ್ಯವನ್ನು ನಡೆಸುತ್ತಿದ್ದಾರೆ. #ResignSudhakar 

- ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News