ಚಾಮರಾಜನಗರದ ಬಳಿಕ ಕಲಬುರಗಿಯಲ್ಲೂ ಆಕ್ಸಿಜನ್ ಕೊರತೆಯಿಂದ ಸೋಂಕಿತರ ಸಾವು ?

Update: 2021-05-03 17:36 GMT
ಸಾಂದರ್ಭಿಕ ಚಿತ್ರ

ಕಲಬುರಗಿ, ಮೇ 3: ಚಾಮರಾಜನಗರ ಜಿಲ್ಲಾಸ್ಪತ್ರೆಯ ದುರಂತದ ಬಗ್ಗೆ ಸರಕಾರ ತನಿಖೆಗೆ ಆದೇಶಿಸಿದೆ. ಮತ್ತೊಂದು ಕಡೇ ಆಕ್ಸಿಜನ್ ಕೊರತೆಯಿಂದಾಗಿ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಐವರು ಕೊರೋನ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಕಲಬುರಗಿ ನಗರದ ಸಂತೋಷ ಕಾಲೊನಿಯಲ್ಲಿರುವ ಆಸ್ಪತ್ರೆಯಲ್ಲಿ ರವಿವಾರ ತಡ ರಾತ್ರಿ 4 ಮತ್ತು ಸೋಮವಾರ ಬೆಳಗ್ಗೆ ಓರ್ವ ಕೋವಿಡ್ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

ಆಸ್ಪತ್ರೆಯ ಮೂಲಗಳು ಪ್ರಕಾರ ಕಳೆದ ಎರಡು ದಿನಗಳಿಂದ ಆಸ್ಪತ್ರೆಗೆ ಆಕ್ಸಿಜನ್ ದೊರೆಯುತ್ತಿಲ್ಲ. ನಾವೂ ಹಲವಾರು ಕಡೆಗಳಿಂದ ದುಪ್ಟಟ್ಟು ಹಣ ನೀಡಿ ತರುತ್ತಿದ್ದೇವೆ. ಆದರೂ ಬೇಡಿಕೆಯಷ್ಟು ಆಕ್ಸಿಜನ್ ಪಡೆಯಲು ನಮಗೂ ಸಾಧ್ಯವಾಗುತ್ತಿಲ್ಲ. ರವಿವಾರ ಸಂಜೆಯಿಂದ ರಾತ್ರಿ 11 ಗಂಟೆಯವರೆಗೆ 4 ಜನ ಮತ್ತು ಸೋಮವಾರ ಬೆಳಗ್ಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ.

ನಾವು ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದೇವೆ. ಆದರೆ, ಆಕ್ಸಿಜನ್ ಕೊರತೆಯಿಂದಾಗಿ ಸಾವು ಸಂಭವಿಸುತ್ತಿವೆ. ಜಿಲ್ಲಾಡಳಿತ ಆಕ್ಸಿಜನ್ ಪೂರೈಕೆ ಮಾಡುವ ಭರವಸೆ ನೀಡಿತ್ತು. ಈಗ ನಮಗೆ ದಿನದ ಬೇಡಿಕೆಯಷ್ಟು ಆಕ್ಸಿಜನ್ ಸಿಗುತ್ತಿಲ್ಲ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಆನಂದ ಅವರು ತಿಳಿಸಿದ್ದಾರೆ. 

50 ಹಾಸಿಗೆ ಇರುವ ಆಸ್ಪತ್ರೆಗೆ 250 ಸಿಲಿಂಡರ್ ಗಳು ಬೇಕು. ಅಷ್ಟು ಆಕ್ಸಿಜನ್ ಜಿಲ್ಲಾಡಳಿತಕ್ಕೆ ಕೊಡಲು ಆಗುತ್ತಿಲ್ಲ. ಇದರಿಂದಾಗಿ ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗುತ್ತಿದೆ. ನಾವು ಹಲವಾರು ಸಣ್ಣ ಕೈಗಾರಿಕೆಗಳ ಬಳಿಯಲ್ಲಿ ಸಿಲೆಂಡರ್ ಗಳನ್ನು ತಂದು ನಿಭಾಯಿಸುತ್ತಿದ್ದೇವೆ. ಎರಡು-ಮೂರು ಆಟೋಗಳನ್ನು ಸಿಲೆಂಡರ್ ತರಲಿಕ್ಕಾಗಿಯೇ ಮೀಸಲಿಟ್ಟಿದ್ದೇವೆ. ದೇವರು ದೊಡ್ಡವನು ದಿನಕ್ಕೆ ಹತ್ತಿಪ್ಪತ್ತು ಸಿಲೆಂಡರ್ ಸಿಗುತ್ತಿದೆ. ಅದರಲ್ಲೇ ಜೀವ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಆನಂದ ಅವರು ತಿಳಿಸಿದರು.

ಇಡೀ ನಗರದಲ್ಲಿ ಮತ್ತು ಜಿಲ್ಲೆಯ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ದೊಡ್ಡ ಮಟ್ಟದಲ್ಲಿ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿದೆ. ಕೆಲವು ವೈದ್ಯಕೀಯ ಮೂಲಗಳು ಪ್ರಕಾರ ಕಳೆದ 72 ಗಂಟೆಯಲ್ಲಿ ಜಿಲ್ಲೆಯಲ್ಲಿ 27 ಸಾವುಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದೆ. ಈ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಆಕ್ಸಿಜನ್ ಕೊರತೆ ನೀಗಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News