ಹೆಣದ ಮೇಲೆ ಹಣ ಮಾಡಿ ಯಾವ ಸಾಮ್ರಾಜ್ಯ ಕಟ್ಟಲು ಹೊರಟಿದ್ದೀರಾ?: ಸುಧಾಕರ್ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

Update: 2021-05-03 17:55 GMT

ಬೆಂಗಳೂರು, ಮೇ 3: ಸ್ವಾಮಿ ಸುರೇಶ್ ಕುಮಾರ್ ಅವರೇ ಜನರ ಸಾವಿನಲ್ಲಿ ಸುಳ್ಳು ಲೆಕ್ಕ ಕೊಟ್ಟು ನಿಮ್ಮ ಹುಳುಕು ಮುಚ್ಚಿಕೊಳ್ಳುವ ಬಂಡ ಬಾಳು ಬಾಳಬೇಕಾ? ನಿಮಗೆ ಕಿಂಚಿತ್ತಾದರೂ ಮನುಷ್ಯತ್ವ ಇದ್ದರೆ ನೀವು, ಸುಧಾಕರ್ ಕೂಡಲೇ ರಾಜೀನಾಮೆ ಕೊಡಿ ಎಂದು ಕೆಪಿಸಿಸಿ ವಕ್ತಾರೆ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ಆರೋಗ್ಯ ಸಚಿವ ಸುಧಾಕರ್ ಅವರೇ ಜನ ಸಾಯುತ್ತಿದ್ದರೂ ಕಮಿಷನ್ ಲೆಕ್ಕ ಹಾಕುವುದರಲ್ಲಿ ಮುಳುಗಿದ್ದೀರಾ? ಹೆಣದ ಮೇಲೆ ಹಣ ಮಾಡಿ ಯಾವ ಸಾಮ್ರಾಜ್ಯ ಕಟ್ಟಲು ಹೊರಟಿದ್ದೀರಾ ಸ್ವಾಮಿ? ಎಂದು ಕಿಡಿಗಾರಿದ್ದಾರೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಪ್ರತಿನಿತ್ಯ 70 ಟನ್ ಆಕ್ಸಿಜನ್ ಬೇಡಿಕೆ ಇದೆ. ಆದರೆ ಕೇವಲ 20 ಟನ್ ಪೂರೈಕೆ. ಈ ಲೋಪಗಳಿದ್ದರೂ ಆರೋಗ್ಯ ಮಂತ್ರಿಗಳು ಗಮನ ಹರಿಸದೆ, ಸುಳ್ಳು ಹೇಳುತ್ತಲೇ 24 ಸಾವುಗಳಿಗೆ ಕಾರಣರಾಗಿದ್ದಾರೆ. ಯಡಿಯೂರಪ್ಪ ಅವರೇ, ಇಷ್ಟೆಲ್ಲ ವೈಫಲ್ಯವಿದ್ದರೂ ಸಚಿವರ ತಲೆದಂಡಕ್ಕೆ ಮಿನಾಮೇಷವೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಜನ ಕೊರೋನ ಸೋಂಕಿನಿಂದ ಸಾಯುತ್ತಿರುವುದಕ್ಕಿಂತ ಹೆಚ್ಚಾಗಿ ಸರಕಾರದ ಬೇಜವಾಬ್ದಾರಿತನದಿಂದ ಉದ್ಭವಿಸಿರುವ ಆಕ್ಸಿಜನ್, ಐಸಿಯು ಹಾಸಿಗೆ, ಔಷಧಗಳ ಪೂರೈಕೆ ಕೊರತೆಯಿಂದ ಸಾಯುತ್ತಿದ್ದಾರೆ. ಈ ಸಾವಿಗೆಲ್ಲ ಅಸಮರ್ಥ ಸರಕಾರ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರೇ ಹೊಣೆ ಎಂದು ಲಕ್ಷ್ಮಿಹೆಬ್ಬಾಳ್ಕರ್ ಹೇಳಿದ್ದಾರೆ.

ಕಳೆದ ವರ್ಷ ಬೆಂಗಳೂರಿನಲ್ಲಿ ಕೊರೋನ ಉಸ್ತುವಾರಿ ವಹಿಸಿಕೊಳ್ಳಲು ಪೈಪೋಟಿ ನಡೆಸಿದ್ದ ಅಷ್ಟದಿಗ್ಪಾಲಕ ಮಂತ್ರಿಗಳು, ಈ ಬಾರಿ ಜನರ ಜೀವ ಉಳಿಸಲು ಆಕ್ಸಿಜನ್ ಪೂರೈಸಲು ಯಾಕೆ ಉತ್ಸುಕರಾಗಿಲ್ಲ? ಆರೋಗ್ಯ ಸಚಿವ ಸುಧಾಕರ್ ಅವರೇ ನಿಮ್ಮ ಕೈಯಲ್ಲಿ ಪರಿಸ್ಥಿತಿ ನಿಯಂತ್ರಣ ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಿ ಸ್ವಾಮಿ ಎಂದು ಅವರು ಕೇಳಿದ್ದಾರೆ.

ರಾಜ್ಯ ಬಿಜೆಪಿ ಸರಕಾರ ಯಾವುದೇ ನೆಪಗಳನ್ನು ಹೇಳದೆ ಕೂಡಲೇ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ, ಹಾಸಿಗೆ, ಐಸಿಯು, ಆಕ್ಸಿಜನ್, ವೆಂಟಿಲೇಟರ್ ನ್ನು ಅಗತ್ಯಕ್ಕನುಸಾರ ಒದಗಿಸಬೇಕು. ಇಲ್ಲವೇ ಅಧಿಕಾರದಿಂದ ತೊಲಗಬೇಕು. ಕೋವಿಡ್ 2ನೇ ಅಲೆಯ ಪರಿಸ್ಥಿತಿ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ಸಂಪೂರ್ಣ ವಿಫಲವಾಗಿದೆ. ಕೋವಿಡ್ ನಿಂದಾದ ಎಲ್ಲ ಸಾವು-ನೋವುಗಳಿಗೆ ಈ ಎರಡು ಸರಕಾರಗಳೇ ನೇರ ಹೊಣೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಸಚಿವ ಸುಧಾಕರ್ ಅವರ ನಿರ್ಲಕ್ಷ್ಯದಿಂದ ಇಡೀ ರಾಜ್ಯ ಆಕ್ಸಿಜನ್ ಕೊರತೆಯಿಂದ ಬಳಲುತ್ತಿದೆ. ಚಾಮರಾಜನಗರದಲ್ಲಿ 24 ಮಂದಿ ರೋಗಿಗಳು ಇದೇ ಕಾರಣಕ್ಕೆ ಮೃತಪಟ್ಟಿದ್ದಾರೆ. ಇದಕ್ಕೆ ಸಚಿವ ಸುಧಾಕರ್ ಅವರೇ ನೇರ ಹೊಣೆ. ಕರ್ನಾಟಕ ರಾಜಕೀಯ ಇತಿಹಾಸ ಕಂಡ ಅತ್ಯಂತ ಬೇಜವಾಬ್ದಾರಿ ಆರೋಗ್ಯ ಸಚಿವ ಇವರೇ ಎಂದು ಅವರು ಟೀಕಿಸಿದ್ದಾರೆ.

ಆಕ್ಸಿಜನ್ ಕೊರತೆ ಇಲ್ಲ ಎಂದು ಸುಳ್ಳು ಹೇಳಿದ ಕೊಲೆಗಡುಕ ಸರಕಾರ. 24 ಜನರ ಪ್ರಾಣ ಬಲಿ ಪಡೆದ ನಂತರವಾದ್ರೂ ನಿಜ ಒಪ್ಪಿಕೊಳ್ಳುತ್ತಾ? ಎಂದು ಲಕ್ಷ್ಮಿಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News