ಈ ಸಾವುಗಳಿಗೆ ಹೊಣೆ ಯಾರು?

Update: 2021-05-04 06:33 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ಮೊದಲು ನಿರ್ಲಕ್ಷಿಸಿ ಕೊನೆಗೆ ಕೊರೋನ ಕರ್ಫ್ಯೂ ಎಂದು ಏನೆಲ್ಲಾ ಕಸರತ್ತು ಮಾಡುತ್ತಿದ್ದರೂ ಕೋವಿಡ್ ಸೋಂಕನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ರವಿವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಚಾಮರಾಜನಗರದಲ್ಲಿ ಪ್ರಾಣವಾಯು ಲಭ್ಯವಾಗದೆ 24 ಮಂದಿ ಕೊನೆಯುಸಿರೆಳೆದಿದ್ದಾರೆ. ಕಲಬುರಗಿಯಲ್ಲಿ ವೈದ್ಯರೊಬ್ಬರ ಪತ್ನಿ ಆಕ್ಸಿಜನ್ ಸಿಗದೆ ಸಾವಿಗೀಡಾಗಿದ್ದಾರೆ.

ಯಾವುದಕ್ಕೂ ಕೊರತೆಯಿಲ್ಲ ಎಂದು ಸರಕಾರ ಹೇಳುತ್ತಲೇ ಇದೆ. ಆದರೆ ಜನ ಸಾಯುತ್ತಲೇ ಇದ್ದಾರೆ. ಸಾಯುವವರೆಲ್ಲ ಬಹುತೇಕ ಬಡ ಕುಟುಂಬಗಳಿಗೆ ಸೇರಿದವರು. ಜನರ ಜೀವದ ಬಗ್ಗೆ ಸರಕಾರಕ್ಕೆ ಕನಿಷ್ಠ ಕಾಳಜಿಯೂ ಇಲ್ಲ ಎಂಬುದು ಇದರಿಂದ ಸಾಬೀತಾಗುತ್ತಿದೆ.

ಚಾಮರಾಜನಗರದಲ್ಲಿ ನಡೆದಿರುವುದು ಸಾವು ಎನ್ನುವುದಕ್ಕಿಂತ ಕೊಲೆ ಎಂದರೆ ಹೆಚ್ಚು ಸೂಕ್ತವಾಗುತ್ತದೆ. ಇಡೀ ಪ್ರಕರಣದಲ್ಲಿ ಆರೋಗ್ಯ ಸಚಿವರ ಹಾಗೂ ಉಸ್ತುವಾರಿ ಸಚಿವರ ಹೊಣೆಗೇಡಿತನ ಎದ್ದು ಕಾಣುತ್ತದೆ. ನಾಲ್ಕು ದಿನಗಳ ಹಿಂದೆಯೇ ಅಲ್ಲಿ 65 ಕೋಟಿ ರೂಪಾಯಿ ಖರ್ಚು ಮಾಡಿ 6 ಸಾವಿರ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಿದ್ದಾಗಿ, ತಾನೇ ಅದನ್ನು ಉದ್ಘಾಟನೆ ಮಾಡಿರುವುದಾಗಿ ಉಸ್ತುವಾರಿ ಸಚಿವರು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಹಾಗಿದ್ದರೆ ಪ್ರಾಣವಾಯು ಇಲ್ಲದೆ ಸಾವು ಸಂಭವಿಸಿದ್ದು ಹೇಗೆ? ರವಿವಾರ ರಾತ್ರಿ ಪರಿಸ್ಥಿತಿ ಗಂಭೀರವಾಗಿರುವುದನ್ನು ಪತ್ರಕರ್ತರಿಬ್ಬರು ಮತ್ತು ಸಂಸದ ಧ್ರುವ ನಾರಾಯಣ ಸಂಬಂಧಿಸಿದ ಸಚಿವರ ಗಮನಕ್ಕೆ ತಂದರೂ ಸಕಾಲದಲ್ಲಿ ಆಮ್ಲಜನಕ ಲಭ್ಯವಾಗಲಿಲ್ಲವೇಕೆ? ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವುದು ಅಗತ್ಯವಾಗಿದೆ.

ಎರಡನೇ ಅಲೆ ಬರುವ ಮೊದಲು ರಾಜ್ಯದ ಮಂತ್ರಿಗಳೆಲ್ಲ ಉಪಚುನಾವಣೆಯಲ್ಲಿ ಮುಳುಗಿದ್ದರು. ನಂತರವೂ ಬೆಂಗಳೂರು ಬಿಟ್ಟು ಆಚೆ ಹೋಗಲಿಲ್ಲ. ಕೊರೋನದಂತಹ ಸನ್ನಿವೇಶದಲ್ಲಿ ಪ್ರತಿ ಜಿಲ್ಲೆಯಲ್ಲಿ ಅಲ್ಲಿನ ಉಸ್ತುವಾರಿ ಮಂತ್ರಿ ಮುಂದೆ ನಿಂತು ಕೆಲಸ ಮಾಡಿಸಿದರೆ ಸರಕಾರದ ಆಡಳಿತ ಯಂತ್ರ ಚುರುಕಾಗುತ್ತದೆ. ಆದರೆ ಉಸ್ತುವಾರಿ ಮಂತ್ರಿಗಳು ರಾಜಧಾನಿ ಬಿಟ್ಟು ಬರಲಿಲ್ಲ. ಹೀಗಾಗಿ ಚಾಮರಾಜನಗರ ಮಾತ್ರವಲ್ಲ ರಾಜಧಾನಿ ಬೆಂಗಳೂರೂ ಸೇರಿ ಹಲವೆಡೆ ನಿತ್ಯವೂ ಪ್ರಾಣವಾಯು ಇಲ್ಲದೆ ಸಾವುಗಳು ಸಂಭವಿಸುತ್ತಲೇ ಇವೆ. ಸಾವು ಸಂಭವಿಸದ ಜಿಲ್ಲೆಗಳೇ ಇಲ್ಲ. ಸರಕಾರ ಯಾವುದರ ಕೊರತೆಯಿಲ್ಲ, ಎಲ್ಲ ಸರಿಯಿದೆ ಎಂದು ಹೇಳಿಕೆ ಕೊಡುತ್ತಿರುವಾಗಲೇ ಬೀದಿಯಲ್ಲಿ ಹೆಣಗಳ ಮೆರವಣಿಗೆ ನಡೆಯುತ್ತಿದೆ. ಶವಕ್ಕೆ ಗೌರವಯುತ ಅಂತ್ಯಕ್ರಿಯೆ ಮಾಡಲು ಕೂಡ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಕೊರೋನಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರವನ್ನು ಮಾತ್ರ ದೂರಿದರೆ ಪ್ರಯೋಜನವಿಲ್ಲ. ಭಾರತವನ್ನು ವಿಶ್ವಗುರು ಮಾಡುವ ಭ್ರಮೆ ಸೃಷ್ಟಿಸಿದ ಪ್ರಧಾನಿ ಮೋದಿ ಅವರು ಈ ದುರಂತ ಸಾವುಗಳ ಹೊಣೆ ಹೊರಬೇಕು. ದೇಶದಲ್ಲಿ ಕೊರೋನ ವೈರಾಣು ಹೊಸ ರೂಪ ತಾಳಿ ವ್ಯಾಪಕವಾಗಿ ಹಬ್ಬುತ್ತದೆ ಎಂದು ವೈಜ್ಞಾನಿಕ ಸಲಹೆಗಾರರು ಮಾರ್ಚ್ ತಿಂಗಳ ಆರಂಭದಲ್ಲೇ ಎಚ್ಚರಿಕೆ ನೀಡಿದ್ದರೂ ಕೇಂದ್ರ ಸರಕಾರ ನಿರ್ಲಕ್ಷ್ಯ ಮಾಡಿತು. ಈ ವೈಜ್ಞಾನಿಕ ಸಲಹೆಗಾರರ ತಂಡವನ್ನು ಸರಕಾರವೇ ರಚಿಸಿತ್ತು. ತಾನು ರಚಿಸಿದ ತಂಡದ ವರದಿಯನ್ನು ಸರಕಾರ ಕಡೆಗಣಿಸಿತು. ಆ ನಂತರ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ, ಕೆಲ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳು ಹಾಗೂ ನಲವತ್ತು ಲಕ್ಷ ಜನ ಸೇರಿದ ಕುಂಭ ಮೇಳಕ್ಕೆ ಅವಕಾಶ ನೀಡಿದ್ದರಿಂದ ದೇಶದಲ್ಲಿ ಇಂದು ಸಾವಿನ ಸೂತಕದ ವಾತಾವರಣ ಉಂಟಾಗಿದೆ.

ಈಗ ಪಂಚರಾಜ್ಯಗಳ ಚುನಾವಣೆ ಮುಗಿದಿದೆ. ಈಗಲಾದರೂ ಪಕ್ಷ ರಾಜಕೀಯ ಬಿಟ್ಟು ಕೊರೋನ ಎದುರಿಸಲು ಸರಕಾರ ಸಮರೋಪಾದಿಯಲ್ಲಿ ಮುನ್ನುಗ್ಗಬೇಕಾಗಿದೆ. ಹಾಸಿಗೆ, ಆಮ್ಲಜನಕ ಸೇರಿದಂತೆ ವೈದ್ಯಕೀಯ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ. ಚುನಾವಣೆಯ ಸೋಲು ಗೆಲುವುಗಳಿಗಿಂತ ಕೊರೋನ ಎದುರಿನ ಹೋರಾಟ ಮುಖ್ಯವಾಗಿದೆ. ಕೊರೋನ ವಿರುದ್ಧ ಹೋರಾಟದಲ್ಲಿ ಸೋತರೆ ಅದು ಭಾರತದ ಸೋಲಾಗುತ್ತದೆ.

ಯಾವುದೇ ಒಂದು ದೇಶವನ್ನು ದೇವರು, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ ಬಹಳ ದಿನ ಆಡಳಿತ ನಡೆಸಲು ಸಾಧ್ಯವಿಲ್ಲ. ಜನರನ್ನು ಕೋಮು ಉನ್ಮಾದದಲ್ಲಿ ಬಹಳ ಕಾಲ ಇಡಲಾಗುವುದಿಲ್ಲ. ದೇಶವೆಂದರೆ ಜನ. ಆ ಜನರು ನೆಮ್ಮದಿಯಾಗಿರುವ ವಾತಾವರಣ ನಿರ್ಮಿಸಬೇಕು. ಕೊರೋನದಂತಹ ಪರಿಸ್ಥಿತಿಯನ್ನು ಎದುರಿಸುವಲ್ಲಿ ಸರಕಾರ ವಿಫಲಗೊಂಡರೆ ಅಧಿಕಾರದಲ್ಲಿರುವವರು ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಇನ್ನಾದರೂ ತಜ್ಞರ ಸಲಹೆ ಪಡೆದು ಸರಿಯಾದ ಕಾರ್ಯತಂತ್ರ ರೂಪಿಸಲಿ. ಮುಖ್ಯವಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಿ.

ಚಾಮರಾಜನಗರದಲ್ಲಿ ನಡೆದ ದುರಂತ ಮತ್ತೆ ಮರುಕಳಿಸಬಾರದು. ಅಲ್ಲಿ ಅಸು ನೀಗಿದ 24 ಜನರ ಕುಟುಂಬಗಳಿಗೆ ಸೂಕ್ತವಾದ ಪರಿಹಾರವನ್ನು ಒದಗಿಸಬೇಕು. ಈ ಸಾವಿನ ಹೊಣೆ ಹೊತ್ತು ಸಂಬಂಧಿಸಿದ ಸಚಿವರು ಪದತ್ಯಾಗ ಮಾಡಬೇಕು. ಈ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆಯಾಗಬೇಕು.

ರಾಜ್ಯದಲ್ಲಿ ಕೊರೋನ ನಿರ್ವಹಣೆಗೆ ಅಂದರೆ ಎಲ್ಲೆಲ್ಲಿ ಆಸ್ಪತ್ರೆ, ಹಾಸಿಗೆ, ಆಮ್ಲಜನಕ ವ್ಯವಸ್ಥೆ ಇದೆ ಎಂಬುದನ್ನು ನೋಡಿಕೊಳ್ಳಲು ಒಬ್ಬ ಮಂತ್ರಿಯನ್ನು ತುರ್ತಾಗಿ ನೇಮಕ ಮಾಡಬೇಕು. ವಿಶೇಷ ಅಧಿಕಾರಿಗಳ ತಂಡ ರಚಿಸಬೇಕು ಮತ್ತು ಜನಸಾಮಾನ್ಯರ ಅಹವಾಲುಗಳಿಗೆ ತಕ್ಷಣ ಸ್ಪಂದಿಸುವ ಏರ್ಪಾಡು ಮಾಡಬೇಕು. ಸರಕಾರದ ಮೊದಲ ಆದ್ಯತೆ ಇದಾಗಿರಬೇಕು. ಇನ್ನು ಮುಂದೆ ಕೊರೋನದಿಂದ ಹಾಸಿಗೆ, ಪ್ರಾಣವಾಯು ಇಲ್ಲದೆ ಜನ ಸಾವಿಗೀಡಾಗುವ ಘಟನೆಗಳು ಸಂಭವಿಸಬಾರದು.

ರಾಜ್ಯದ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಅಂದರೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ.ಸಾವಿಗೀಡಾದವರ ಅಂತ್ಯಕ್ರಿಯೆ ಮಾಡಲು ರಾಜಧಾನಿ ಬೆಂಗಳೂರಿನ ಸ್ಮಶಾನಗಳಲ್ಲಿ ಜಾಗವೂ ಇಲ್ಲದಂತಾಗಿದೆ. ಚಿತಾಗಾರಗಳು ತುಂಬಿವೆ. ಸರಕಾರ ಇನ್ನಾದರೂ ಎಚ್ಚೆತ್ತು ಪರಿಸ್ಥಿತಿ ಇನ್ನಷ್ಟು ಹದಗೆಡದಂತೆ ನೋಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News