ಸರಕಾರದ ನಿರ್ಲಕ್ಷ್ಯ ಮುಂದುವರಿದರೆ ಬೀದಿಗಿಳಿಯಬೇಕಾಗುತ್ತದೆ: ಸಿದ್ದರಾಮಯ್ಯ ಎಚ್ಚರಿಕೆ

Update: 2021-05-03 18:14 GMT

ಬೆಂಗಳೂರು, ಮೇ 3: ಕೊರೋನ ವಿಚಾರದಲ್ಲಿ ಸರಕಾರದ ನಿರ್ಲಕ್ಷ್ಯ ಧೋರಣೆ ಇದೇ ರೀತಿ ಮುಂದುವರಿದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಕೊರೋನದಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಸ್ಥಿತಿಗತಿ ಕುರಿತು ಪಕ್ಷದ ಸಂಸದರು, ಶಾಸಕರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಅವರು, ಕೆಪಿಸಿಸಿ ಅಧ್ಯಕ್ಷರು, ಹಿರಿಯ ನಾಯಕರೊಂದಿಗೆ ಚರ್ಚಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸುವುದಾಗಿ ತಿಳಿಸಿದರು.

ತಮ್ಮ ಕ್ಷೇತ್ರಗಳಲ್ಲಿ ಕೊರೋನ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಗಳಿಗೆ ತೀವ್ರ ಕೊರತೆ ತಲೆದೋರಿದೆ ಎಂದು ಶಾಸಕರು ಈ ವೇಳೆ ಗಮನ ಸೆಳೆದರು.

ಕೇಂದ್ರ ಮತ್ತು ರಾಜ್ಯ ಸರಕಾರ ಕೊರೋನ ಸೋಂಕು ನಿಯಂತ್ರಿಸುವ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ವಿಫಲವಾಗಿದೆ ಎಂದು ಜನ ಸಾಮಾನ್ಯರು ಹೇಳುತ್ತಿದ್ದಾರೆ. ಜನ ಎರಡೂ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಕೋವಿಡ್ ಎರಡನೇ ಅಲೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಿಲ್ಲ ಎಂದು ಸಿದ್ದರಾಮಯ್ಯ ದೂರಿದರು.

ಎರಡನೇ ಅಲೆ ಕುರಿತು ಉಭಯ ಸರಕಾರಕ್ಕೆ ಮಾಹಿತಿ ಇತ್ತು. ತಜ್ಞರು ಎಚ್ಚರಿಕೆ ಕೊಟ್ಟಿದ್ದರು. ಆದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ. ರಾಜ್ಯದಲ್ಲಿ ತಜ್ಞರ ತಂಡ ಕಳೆದ ವರ್ಷ ನವೆಂಬರ್ ನಲ್ಲೆ ವರದಿ ನೀಡಿತ್ತು. ಆದರೆ, ಸರಕಾರ ನಡೆಸುವವರು ಕೊರೋನ ನಿಯಂತ್ರಿಸುವುದಕ್ಕಿಂತ ಮುಖ್ಯವಾಗಿ ಚುನಾವಣೆಗಳನ್ನು ನಡೆಸುವುದರಲ್ಲಿಯೇ ಮೈಮರೆತಿದ್ದರು. ಹೀಗಾಗಿ ತಜ್ಞರ ಶಿಫಾರಸ್ಸುಗಳನ್ನು ಜಾರಿಗೆ ತರುವಲ್ಲಿ ನಿರ್ಲಕ್ಷ್ಯ ಮಾಡಿದರು ಎಂದು ಅವರು ದೂರಿದರು.

ಕೊರೋನ ಸೋಂಕಿನಲ್ಲಿ ಬೆಂಗಳೂರಿಗೆ ಇಡೀ ದೇಶದಲ್ಲೇ ನಂಬರ್ ಒನ್ ಸ್ಥಾನ ಸಿಕ್ಕಿದೆ. ರಾಜ್ಯದಲ್ಲಿ ಸೋಂಕಿತರಿಗೆ ಬೆಡ್, ಆ್ಯಂಬುಲೆನ್ಸ್, ರೆಮ್‍ಡಿಸಿವರ್, ವೆಂಟಿಲೇಟರ್, ಆಕ್ಸಿಜನ್ ಸಿಗುತ್ತಿಲ್ಲ. ನಾವು ಸರಕಾರಕ್ಕೆ ಹೇಳಿ ಸಾಕಾಯಿತು. ನಿರ್ಲಕ್ಷ್ಯ ಧೋರಣೆ ಇದೇ ರೀತಿ ಮುಂದುವರಿದರೆ ಬೀದಿಗಿಳಿಯುವುದು ಅನಿವಾರ್ಯ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಅನೇಕ ಕ್ಷೇತ್ರಗಳಲ್ಲಿ ಶಾಸಕರು ಸೋಂಕಿತರಿಗೆ ನೆರವಾಗುತ್ತಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿದ್ದಾರೆ. ನಿಜಕ್ಕೂ ಇದು ಒಳ್ಳೆಯ ಕೆಲಸವಾಗಿದ್ದು ಮುಂದುವರಿಸಿ ಎಂದರು.

ಶಾಸಕರ ಅಭಿಪ್ರಾಯಗಳು: ಸಾರ್ವಜನಿಕರಿಗೆ ಸರಿಯಾಗಿ ಆಕ್ಸಿಜನ್ ದೊರೆಯುತ್ತಿಲ್ಲ. ಸಿಲಿಂಡರ್ ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಕೃತಕ ಕೊರತೆಯನ್ನು ಉಂಟು ಮಾಡಲಾಗುತ್ತಿದೆ ಹಾಗೂ ಹೆಚ್ಚಿನ ಬೆಲೆಯನ್ನು ನಿಗದಿಪಡಿಸಲಾಗುತ್ತಿದೆ.

ಆಸ್ಪತ್ರೆಗಳಲ್ಲಿ ಐ.ಸಿ.ಯು., ಬೆಡ್, ವೆಂಟಿಲೇಟರ್ ಗಳ ಕೊರತೆಯಿದೆ. ಇದರ ರಾಜ್ಯ ಸರಕಾರದ ಯಾವುದೇ ಸಿದ್ದತೆ ಮಾಡಿಕೊಂಡಿಲ್ಲ. ಈ ಕೊರೋನ ಕಾಯಿಲೆಗೆ ಅಗತ್ಯವಿರುವ ರೆಮ್‍ಡಿಸಿವಿರ್ ಹಾಗೂ ಇತರ ಔಷಧಗಳ ತೀವ್ರ ಕೊರತೆಯಿದ್ದು, ಕೂಡಲೇ ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳಬೇಕು.

18 ರಿಂದ 45 ವರ್ಷದವರಿಗೆ ವ್ಯಾಕ್ಸಿನ್ ನೀಡಲು ಮುಖ್ಯಮಂತ್ರಿ ಉದ್ಘಾಟನೆ ಮಾಡಿದ್ದಾರೆ. ಆದರೆ ವ್ಯಾಕ್ಸಿನ್ ನೀಡಲು ಇದುವರೆವಿಗೂ ಕ್ರಮ ತೆಗೆದುಕೊಂಡಿಲ್ಲ. ರಾಜ್ಯದಲ್ಲಿ ವ್ಯಾಕ್ಸಿನ್ ನೀಡಲು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸುವಂತೆ ತಿಳಿಸಿದ್ದಾರೆ. ರಾಜ್ಯದಲ್ಲಿ ಇರುವ ಅನಕ್ಷರಸ್ಥರು ಹೇಗೆ ಆನ್‍ಲೈನ್ ಮೂಲಕ ನೋಂದಣಿ ಮಾಡಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ಸರಕಾರ ಕ್ರಮ ವಹಿಸಬೇಕು.

ಲಸಿಕೆಯನ್ನು ಪ್ರತಿ ಮನೆಗೆ ತೆರಳಿ (ಪೊಲೀಯೋ ಡ್ರಾಪ್ ನೀಡುವಂತೆ) ವ್ಯಾಕ್ಸಿನ್ ಅಭಿಯಾನ ನೀಡಲು ಆರೋಗ್ಯ ಇಲಾಖೆ ಕ್ರಮ ವಹಿಸುವುದು ಉತ್ತಮ ಎಂದು ಶಾಸಕರು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ, ಈಶ್ವರ ಖಂಡ್ರೆ, ಸಲೀಂ ಅಹಮದ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಭಾಗವಹಿಸಿದ್ದರು.

ಸೋಂಕು ನಿಯಂತ್ರಿಸುವಲ್ಲಿ ಕೇರಳ ಸಫಲ

ಚುನಾವಣೆಗಳನ್ನು ನಡೆಸಿದ್ದರಿಂದ ಜನ ಸೇರುವಂತಾಯಿತು. ಹೀಗಾಗಿ ಸೋಂಕು ವ್ಯಾಪಕವಾಗಿ ಹರಡಿತು. ಸ್ವತಃ ಮುಖ್ಯಮಂತ್ರಿಗಳೆ ಪ್ರಚಾರ ಸಭೆಗಳಲ್ಲಿ ಭಾಗಿಯಾದರು. ಆದರೆ, ಕೇರಳದಲ್ಲಿ ಈ ರೀತಿ ಆಗಲಿಲ್ಲ. ಸೋಂಕು ನಿಯಂತ್ರಿಸುವಲ್ಲಿ ಅಲ್ಲಿಯ ಸರಕಾರ ಸಫಲವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News