ಆಕ್ಸಿಜನ್ ಟ್ಯಾಂಕರ್ ಗಳು ತಡೆರಹಿತ ಸಂಚಾರಕ್ಕೆ ಗ್ರೀನ್ ಕಾರಿಡಾರ್: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-05-03 18:23 GMT

ಬೆಂಗಳೂರು, ಮೇ 3: ಆಮ್ಲಜಕನ ಕೊರತೆ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಕ್ಸಿಜನ್ ಉತ್ಪಾದಕರು ಮತ್ತು ಸರಬರಾಜುದಾರರ ಜತೆ ಸಭೆ ನಡೆಸಿ, ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಉಂಟಾಗದಂತೆ ಕ್ರಮ ವಹಿಸಲು ನಿರ್ದೇಶನ ನೀಡಿದ್ದಾರೆ.

ಸೋಮವಾರ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿದ ಅವರು, ಇದೀಗ ಕೇಂದ್ರ ಸರಕಾರವು ಹಂಚಿಕೆ ಮಾಡಿರುವ ಆಕ್ಸಿಜನ್ ಕೋಟಾದಲ್ಲಿ ಯಾವುದೇ ರೀತಿ ಕಡಿತವಾಗದಂತೆ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆಕ್ಸಿಜನ್ ಟ್ಯಾಂಕರ್ ಗಳ ಫಿಲಿಂಗ್ ಅವಧಿಯನ್ನು ಕಡಿತಗೊಳಿಸಿ, ಆಕ್ಸಿಜನ್ ಟ್ಯಾಂಕರ್ ಗಳು ತಡೆರಹಿತ ಪ್ರಯಾಣಕ್ಕಾಗಿ ಗ್ರೀನ್ ಕಾರಿಡಾರ್ ಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.

ಆಮ್ಲಜನಕ ತಡೆರಹಿತ ಪೂರೈಕೆಗೆ ಟೋಲ್‍ಗಳಲ್ಲಿ ಅನಗತ್ಯ ವಿಳಂಬ ತಪ್ಪಿಸಲು ಟೋಲ್‍ಗಳಿಗೆ ನಿರ್ದೇಶನ ನೀಡಲಾಗಿದ್ದು, ನೈಟ್ರೋಜನ್, ಆರ್ಗನ್ ಅನಿಲಗಳ ಸಾಗಣೆ ಟ್ಯಾಂಕರ್‍ಗಳನ್ನು ಆಕ್ಸಿಜನ್ ಸಾಗಣೆಗೆ ಪರಿವರ್ತಿಸಲು ಕ್ರಮ ವಹಿಸಲಾಗುವುದು ಎಂದ ಯಡಿಯೂರಪ್ಪ, ತುರ್ತು ಅಗತ್ಯಕ್ಕಾಗಿ ಆಕ್ಸಿಜನ್ ವಾಹನಗಳ ಚಾಲನೆಗಾಗಿ ಎಲ್‍ಪಿಜಿ ಟ್ಯಾಂಕರ್‍ಗಳ ಚಾಲಕರ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡು ಅಗತ್ಯವಿದ್ದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಆಕ್ಸಿಜನ್ ಉತ್ಪಾದಕರು ಮತ್ತು ಸರಬರಾಜುದಾರರು ಆಕ್ಸಿಜನ್ ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ನಿಯೋಜಿಸಲ್ಪಟ್ಟ ಅಧಿಕಾರಿಗೆ ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಡೆರಹಿತವಾಗಿ ಆಕ್ಸಿಜನ್ ಪೂರೈಕೆ ಮಾಡಬೇಕು ಎಂದು ಕೋರಿದ ಯಡಿಯೂರಪ್ಪ, ಲಭ್ಯವಿರುವ ಟ್ಯಾಂಕ್‍ರ್‍ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಪೂರೈಕೆ ಮಾಡಬೇಕು ಎಂದು ಯಡಿಯೂರಪ್ಪ ತಿಳಿಸಿದರು.

ಸಭೆಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು, ಆಕ್ಸಿಜನ್ ಪೂರೈಕೆ ಕಂಪೆನಿಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News