ಕೋವಿಡ್ ಹೆಲ್ತ್ ಬುಲೆಟಿನ್ ಪಟ್ಟಿಯಿಂದ ಐಸಿಯು ಹಾಸಿಗೆ ಮಾಹಿತಿ ಮಾಯ !
Update: 2021-05-03 23:54 IST
ಬೆಂಗಳೂರು, ಮೇ 3: ಗಂಭೀರ ಸ್ವರೂಪದ ರೋಗ ಲಕ್ಷಣಗಳನ್ನು ಹೊಂದಿರುವ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆಯೇ ರಾಜ್ಯ ಸರಕಾರ ಪ್ರತಿದಿನ ಬಿಡುಗಡೆ ಮಾಡುವ ಆರೋಗ್ಯ ವರದಿಯಲ್ಲಿ(ಹೆಲ್ತ್ ಬುಲೆಟಿನ್) ಐಸಿಯುಗೆ ದಾಖಲಾಗುವ ಸೋಂಕಿತರ ಮಾಹಿತಿ ಪಟ್ಟಿಯನ್ನೇ ತೆಗೆದುಹಾಕಿದೆ.
ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಹಾಗೂ ಬೆಂಗಳೂರಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಐಸಿಯುಗೆ ದಾಖಲಾಗಿರುವ ಸೋಂಕಿತರ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ಜಿಲ್ಲೆಗಳಲ್ಲಿ ಪ್ರತಿದಿನ 500ಕ್ಕೂ ಹೆಚ್ಚು ಸೋಂಕಿತರು ಐಸಿಯು ಹಾಸಿಗೆಗಾಗಿ ಸಾಲುಗಟ್ಟಿ ನಿಂತಿದ್ದು, ಅವರಲ್ಲಿ ಅನೇಕರು ಐಸಿಯು ಹಾಸಿಗೆ ಸಿಗದೇ ನರಳಿ ಸಾಯುತ್ತಿದ್ದಾರೆ.
ಆದರೆ, ಸರಕಾರ ಪ್ರತಿದಿನ ಬಿಡುಗಡೆ ಮಾಡುವ ಹೆಲ್ತ್ ಬುಲೆಟಿನ್ ಪಟ್ಟಿಯಲ್ಲಿ ರಾಜ್ಯದ 30 ಜಿಲ್ಲೆಗಳ ಐಸಿಯು ರೋಗಿಗಳ ಮಾಹಿತಿಯನ್ನು ಕಳೆದ ಎಪ್ರಿಲ್ 30 ರಿಂದ ಬಹಿರಂಗಪಡಿಸಿಲ್ಲ. ಸರಕಾರ ಈ ಮಾಹಿತಿಯನ್ನು ಮುಚ್ಚಿಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.