ಚಾಮರಾಜನಗರ ಜಿಲ್ಲೆಯಲ್ಲಿ ಸೋಮವಾರ 27 ಮಂದಿ ಸಾವು: ಜಿಲ್ಲಾಧಿಕಾರಿ ರವಿ
ಚಾಮರಾಜನಗರ, ಮೇ 4: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ರವಿವಾರ ಸಂಜೆಯಿಂದ ಸೋಮವಾರ ಸಂಜೆಯ ತನಕ 24 ಮಂದಿ ಸೋಂಕಿತರು ಮೃತಪಟ್ಟರೆ, ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ಹಾಗೂ ಹನೂರು ತಾಲೂಕಿನ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಒಬ್ಬರು ಸೇರಿ 27 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಂಗಳವಾರ ಹೇಳಿದರು.
ಚಾಮರಾಜನಗರ ಕೋವಿಡ್ ಆಸ್ಪತ್ರೆಯ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಕ್ಸಿಜನ್ ಕೊರತೆ ಹಾಗೂ ಇನ್ನಿತರ ಕಾರಣಗಳಿಂದ ಕೋವಿಡ್ ಆಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ್ದು, ಕೊಳ್ಳೇಗಾಲದಲ್ಲಿ ಇಬ್ಬರು ಮತ್ತು ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಒಬ್ಬರು ಸೇರಿ 27 ಮಂದಿ ಮೃತರಾಗಿದ್ದಾರೆ. ಜಿಲ್ಲಾ ಹೆಲ್ತ್ ಬುಲಿಟಿನ್ ನಲ್ಲಿ 22 ಎಂದು ನಮೂದಿಸಿರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಉಳಿದ ಐವರನ್ನು ಇಂದಿನ ಬುಲಿಟಿನ್ ನಲ್ಲಿ ಸೇರಿಸಲಾಗುವುದು ಎಂದರು.
ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟವರು ಕೋವಿಡ್ ಸೋಂಕಿತರು ಎಂದು ಕೋವಿಡ್ ಡೆತ್ ಆಡಿಟ್ ವರದಿ ತಿಳಿಸಲಾಗಿದೆ ಎಂದು ಕೇಳಿದ ಪ್ರಶ್ನೆಗೆ ಆಡಿಟ್ ವರದಿ ಇನ್ನೂ ನನ್ನ ಕೈ ಸೇರಿಲ್ಲ, ಇಂದು ಸಂಜೆಯ ವೇಳೆಗೆ ಆಡಿಟ್ ಡತ್ ವರದಿ ಬಂದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.