ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದು 24 ಅಲ್ಲ, 28 ಮಂದಿ: ಡಿ.ಕೆ.ಶಿವಕುಮಾರ್

Update: 2021-05-04 16:31 GMT

ಚಾಮರಾಜನಗರ, ಮೇ 4: ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವಿಗೀಡಾಗಿರುವವರು 24 ಅಲ್ಲ ಬದಲಿಗೆ 28 ಜನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೋವಿಡ್ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಕೊರೋನ ಸೋಂಕಿಗೆ ಒಳಗಾಗಿ ಮೃತಪಟ್ಟವರ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಡೀನ್ ಬಳಿ ಸಂಪೂರ್ಣ ಮಾಹಿತಿ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸತ್ತಿರುವವರು 24 ಜನ ಅಲ್ಲ 28 ಜನ. ಈ ಬಗ್ಗೆ ನಮ್ಮ ಹತ್ತಿರ ದಾಖಲೆಗಳಿವೆ ಎಂದರು.

ಆರೋಗ್ಯ ಸಚಿವರ ಹೇಳಿಕೆ ಮತ್ತು ಇಲ್ಲಿನ ವಾಸ್ತವಾಂಶದ ಬಗ್ಗೆ ನಮ್ಮ ಶಾಸಕರು ನೀಡಿದ ಹೇಳಿಕೆ ಪಡೆದು ಈ ತೀರ್ಮಾನಕ್ಕೆ ಬರಲಿಲ್ಲ. ಅಧಿಕಾರಿಗಳನ್ನು ವಿಚಾರಣೆ ಮಾಡಿದ ಮೇಲೆ 24 ಜನರ ಜತೆ ಮತ್ತೆ 4 ಜನ ಸೇರಿ 28 ಜನರು ಸಾವಿಗೀಡಾಗಿದ್ದಾರೆ ಎನ್ನುವುದು ದೃಢವಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಸ್ಪತ್ರೆಯಲ್ಲಿ 350 ಹಾಸಿಗೆಗಳಲ್ಲಿ 150ನ್ನು ಕೋವಿಡ್ ಹಾಸಿಗೆಗಳಾಗಿ ಪರಿವರ್ತಣೆ ಮಾಡಲಾಗಿದೆ. 53 ಐಸಿಯು, 33 ವೆಂಟಿಲೇಟರ್ ಇದೆ. ಎಲ್ಲ ರೋಗಿಗಳೂ ಕೂಡ ಆಮ್ಲಜನಕದ ಕೊರತೆಯಿಂದ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಆಮ್ಲಜನಕ ಕೊರತೆಯ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮತ್ತು ನಮ್ಮ ಶಾಸಕರು ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಈ ಘಟನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರಿಯನ್ನು ನೇಮಿಸಲಾಗಿದೆ. ಇದು ಜಾಸ್ತಿ ದಿನ ಆದರೆ ಇದರಿಂದ ಏನೂ ಪ್ರಯೋಜನವಾಗುವುದಿಲ್ಲ. ಸರಿಯಾದ ರೀತಿಯಲ್ಲಿ ತನಿಖೆಯಾಗಿ ತಪ್ಪಿತಸ್ಥರಿಗೆ ಕಾನೂನು ರೀತಿ ತಕ್ಕ ಶಿಕ್ಷೆಯಾಗಬೇಕು. ಇದು ಕೊಲೆ ಪ್ರಕರಣ ಎಂದು ದಾಖಲಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ ಮತ್ತು ಮುಖಂಡರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News