ಹಿರಿಯ ಕಥೆಗಾರ ಯೋಗಪ್ಪನವರ್ ನಿಧನ

Update: 2021-05-04 17:05 GMT

ಬೆಂಗಳೂರು, ಮೇ 4: ಹಿರಿಯ ಕಥೆಗಾರ, ಅನುವಾದಕ, ನಿವೃತ್ತ ಅಧಿಕಾರಿ ಎಸ್.ಎಫ್.ಯೋಗಪ್ಪನವರ್(72) ಕೋವಿಡ್ ಸೋಂಕಿನಿಂದಾಗಿ ಮಂಗಳವಾರ ನಿಧನರಾಗಿದ್ದಾರೆ.

ಕೆಲ ದಿನಗಳ ಹಿಂದೆ ಕೊರೋನ ಸೋಂಕು ತಗುಲಿದ್ದು, ಯಶವಂತಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರ ಪತ್ನಿ ಕೂಡ ಕೋವಿಡ್ ಪೀಡಿತರಾಗಿ, ಆಸ್ಪತ್ರೆ ಸೇರಿ ನಾಲ್ಕು ದಿನಗಳ ಹಿಂದೆ ಗುಣಮುಖರಾಗಿದ್ದರು. ಆದರೆ, ಯೋಗಪ್ಪನವರ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ.

ಯೋಗಪ್ಪನವರ್ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮಕ್ಕೆ ಕೊಂಡೊಯ್ದು, ಮಂಗಳವಾರ ರಾತ್ರಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂಎ ಪದವಿ ಪಡೆದಿದ್ದ ಯೋಗಪ್ಪನವರ್, ಕೆಲ ಕಾಲ ಉಪನ್ಯಾಸಕರಾಗಿದ್ದರು. 1974ರಲ್ಲಿ ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾಗಿ, ಇತ್ತೀಚೆಗೆ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ರಾಜ್ಯ ಸರಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಕೆಲ ಮಂತ್ರಿಗಳಿಗೆ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು ದಕ್ಷ ಅಧಿಕಾರಿಯೆಂದು ಹೆಸರು ಗಳಿಸಿದ್ದರು. ವೃತ್ತಿಯ ಜೊತೆಗೆ ಸಾಹಿತ್ಯದ ಒಲವು ಬೆಳೆಸಿಕೊಂಡ ಅವರು, ತಮ್ಮ ಸೃಜನಶೀಲ ಬರವಣಿಗೆಯ ಮೂಲಕ ಸಾಹಿತ್ಯಾಸಕ್ತರ ಹೃದಯ ಗೆದ್ದಿದ್ದರು.

‘ಲಂಕೇಶ್ ಪತ್ರಿಕೆ’ಯ ಅಂಕಣಕಾರರಾಗಿ ಖ್ಯಾತಿ ಪಡೆದಿದ್ದರು. ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ, ಪ್ರೀತಿಯೆಂಬುದು ಚಂದ್ರನ ದಯೆ, ಶೋಧ ಕಾದಂಬರಿಗಳು, ಮ್ಯೂಟೇಶನ್, ಆರಾಮಕುರ್ಚಿ ಮತ್ತು ಇತರ ಕಥೆಗಳು ಕಥಾಸಂಕಲನ, ಮಾಯಾಕನ್ನಡಿ, ಹದಿಹರೆಯ ಒಬ್ಬಂಟಿ ಪಯಣ ಅನುವಾದ, ಒಂದು ಶಹರದ ಸುತ್ತ ನಾಟಕ, ಲಂಕೇಶರೊಂದಿಗೆ ಸೇರಿ ರೂಪಕ ಲೇಖಕರು, ನೀಲು ಮಾತು ಮೀರಿದ ಮಿಂಚು ಕೃತಿಗಳ ಮೂಲಕ ಯೋಗಪ್ಪನವರ್ ಕನ್ನಡ ಸಾಹಿತ್ಯಲೋಕಕ್ಕೆ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ.

ಸಂತಾಪ: ಕೊರೋನ ಸೋಂಕಿಗೆ ಸಾಂಸ್ಕೃತಿಕ ಲೋಕದ ಮತ್ತೊಂದು ಸಹೃದಯ ಜೀವ ನಮ್ಮನ್ನು ಅಗಲಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ, ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News