ಬಡವರಿಗೆ ಉಚಿತ ಆಕ್ಸಿಜನ್ ಸಿಲಿಂಡರ್ ನೀಡುವ ಮೂಲಕ ಎಂ.ಆರ್.ಇಂಡಸ್ಟ್ರೀಸ್‌ನಿಂದ ಅನುಪಮ ಸೇವೆ

Update: 2021-05-04 17:28 GMT

ವಿಜಯಪುರ, ಮೇ 4: ತೈಲೋದ್ಯಮ, ಆಕ್ಸೀಜನ್ ಉತ್ಪಾದನೆಯಲ್ಲಿ ಪ್ರಸಿದ್ಧಿ ಪಡೆದಿರುವ ವಿಜಯಪುರದ ಎಂ.ಆರ್.ಇಂಡಸ್ಟ್ರೀಸ್ ಬಡಜನತೆಗೆ ಉಚಿತವಾಗಿ ಸಿಂಗಲ್ ಸಿಲಿಂಡರ್ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುವ ಹಾಗೂ ವೈದ್ಯರು ಶಿಫಾರಸು ಮಾಡಿರುವ ಬಡ ರೋಗಿಗಳಿಗೆ ಉಚಿತವಾಗಿ ಸಿಂಗಲ್ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದೆ.

ವಿಜಯಪುರ ತಾಲೂಕಿನ ಅಹೇರಿ ಬಳಿ ಇರುವ ಬೃಹತ್ ಆಕ್ಸಿಜನ್ ಉತ್ಪಾದನಾ ಕೇಂದ್ರದಲ್ಲಿ ಈಗ ಹಗಲಿರುಳು ಕೆಲಸ. ಕೊರೋನ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಇಲ್ಲಿನ ಕಾರ್ಮಿಕರು ಸಹ ಸೇವಾ ಮನೋಭಾವದಿಂದ ಅಹರ್ನಶಿ ಆಕ್ಸಿಜನ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕರು ಈಗಾಗಲೇ ಈ ಉಚಿತ ಆಕ್ಸಿಜನ್ ಸಿಲಿಂಡರ್ ಸೌಲಭ್ಯ ಪಡೆದುಕೊಂಡು ಚೇತರಿಕೆ ಕಂಡಿದ್ದಾರೆ ಎಂದು ಎಂ.ಆರ್.ಇಂಡಸ್ಟ್ರೀಸ್‌ನ ಮಾಲಕ, ಉದ್ಯಮಿ ರಫೀಕ್ ಕಾಣೆ ಮಾಹಿತಿ ನೀಡಿದರು.

ಕೊರೋನ ಸೋಂಕಿತ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಬೇಕು. ಇಲ್ಲವೇ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು. ಕೊರೋನ ಇಡೀ ಮನುಕುಲವನ್ನೇ ಸಂಕಷ್ಟಕ್ಕೆ ತಳ್ಳಿದೆ. ಒಂದೆಡೆ ಬಡವರು ಕೆಲಸ ಕಳೆದುಕೊಂಡಿದ್ದಾರೆ, ಇನ್ನೊಂದೆಡೆ ರೋಗ ಆವರಿಸಿದರೆ ಏನು ಮಾಡಬೇಕು ಎಂಬ ಯೋಚನೆ. ಇವೆಲ್ಲ ನೆನಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವುದು ಸರಕಾರದ ಆದ್ಯ ಕರ್ತವ್ಯ. ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಿದರೆ ಬಡಜನತೆಯ ಜೀವ ಉಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಮೀನಾಮೇಷ ಎಣಿಸಬಾರದು ಎಂದು ಸಂಸ್ಥೆಯ ಅಧ್ಯಕ್ಷ ರಫೀಕ್ ಕಾಣೆ ಸರಕಾರಕ್ಕೆ ಇದೇ ವೇಳೆ ಒತ್ತಾಯಿಸಿದರು.

ಬಡವರ ಕಣ್ಣೀರಿಗೆ ಜೀವ ಮರಗುತ್ತಿದೆ
ಭೀಕರ ಕೊರೋನ ವೈರಸ್ ಭೀತಿಯಲ್ಲಿ ಆಕ್ಸಿಜನ್ ತೊಂದರೆ ಎದುರಿಸುತ್ತಿರುವ ಜಿಲ್ಲಾದ್ಯಂತ ಜನತೆಗೆ ಸಿಂಗಲ್ ಆಕ್ಸಿಜನ್‌ನ್ನು ಉಚಿತವಾಗಿ ನೀಡುವ ಸಂಕಲ್ಪ ಮಾಡಿದ್ದೇನೆ. ಇದು ನನ್ನ ಅಳಿಲು ಸೇವೆ ಅಷ್ಟೇ, ಬಡವರ ಕಣ್ಣೀರು ನೋಡಿ ನನ್ನ ಜೀವ ಮರಗುತ್ತಿದೆ. ಎಂಆರ್ ಆಕ್ಸಿಜನ್ ಘಟಕದಲ್ಲಿ ಸುರಕ್ಷಿತ ಘಟಕಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಅದಕ್ಕಾಗಿ ಹಲವು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನತೆಯ ಆರೋಗ್ಯ ಹಾಗೂ ಅವರ ಹಿತದೃಷ್ಟಿಯಿಂದ ಯಾವುದೇ ಅಪಾಯಕಾರಿ ಕೊರತೆಗಳು ಆಗದಂತೆ ನಮ್ಮ ಸಂಸ್ಥೆ ಶ್ರಮಿಸುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ರಫೀಕ್ ಕಾಣೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News