ಚಿಕ್ಕಮಗಳೂರು: ಉಸಿರಾಟದ ತೊಂದರೆ ಇದ್ದ ವ್ಯಕ್ತಿ ಸರಕಾರಿ ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತ್ಯು

Update: 2021-05-04 18:28 GMT

ಚಿಕ್ಕಮಗಳೂರು, ಮೇ 4: ಕಾಫಿನಾಡಿನಲ್ಲಿ ಕೋವಿಡ್ ಸೋಂಕು ಹೆಚ್ಚಳದ ಹಿನ್ನೆಲೆ ಸಾರ್ವಜನಿಕರಿಗೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಮರ್ಪಕ ಆರೋಗ್ಯ ಸೇವೆ ಸಿಗುತ್ತಿಲ್ಲ. ಸಣ್ಣ ಕಾಯಿಲೆಗಳಿಗೂ ಸಾರ್ವಜನಿಕರು ಸುಖಾಸುಮ್ಮನೆ ಅಲೆಯಬೇಕಾಗಿದೆ. ಈ ಸಂಬಂಧ ‘ವಾರ್ತಾಭಾರತಿ’ ಮಂಗಳವಾರ ಸುದ್ದಿಯೊಂದನ್ನು ಪ್ರಕಟಿಸಿತ್ತು. ಈ ಸುದ್ದಿ ಪ್ರಕರಣವಾಗುವುದಕ್ಕೂ ಮುನ್ನ ಉಸಿರಾಟದ ತೊಂದರೆ ಇದ್ದ ವ್ಯಕ್ತಿಯೊಬ್ಬರು ಸರಕಾರಿ ಆಸ್ಪತ್ರೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಉಳುವಾಗಿಲು ಗ್ರಾಮದ ಬಸವರಾಜ್ ಎಂಬವರು ಕಳೆದ ಎರಡು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ರವಿವಾರ ಚಿಕಿತ್ಸೆಗಾಗಿ ನಗರದ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದ ವೇಳೆ ವೈದ್ಯರು ಕೊರೋನ ಟೆಸ್ಟ್ ರಿಪೋರ್ಟ್ ತರುವಂತೆ ಸೂಚಿಸಿದ್ದಾರೆ. ಈ ಮೇರೆಗೆ ಬಸವರಾಜ್ ಉಸಿರಾಟದ ತೊಂದರೆಯ ನಡುವೆಯೂ ಕೊರೋನ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆ ಆವರಣದ ಕೊರೋನ ಪರೀಕ್ಷಾಲಯ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ ಕೊರೋನ ಪರೀಕ್ಷೆ ತಡವಾಗುವುದಾಗಿ ಸಿಬ್ಬಂದಿ ಹೇಳಿದ್ದರಿಂದ ಬಸವರಾಜ್ ತಿರುಗಾಡಿ ತಿರುಗಾಡಿ ಬಸವಳಿದಿದ್ದಾರೆ. ಕಡೆಗೆ ತಮ್ಮ ಗ್ರಾಮ ಸಮೀಪದ ಮಲ್ಲಂದೂರು ಆಸ್ಪತ್ರೆಗೆ ತೆರಳಿ ಕೊರೋ ಟೆಸ್ಟ್ ಮಾಡುವಂತೆ ಕೋರಿದ್ದಾರೆ. ಅಲ್ಲೂ ವಿಳಂಬದ ಉತ್ತರ ಬಂದಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಸೋಮವಾರ ಸಂಜೆ ಬಸವರಾಜ್ ಅವರ ಆರೋಗ್ಯ ಸಮಸ್ಯೆ ಹೆಚ್ಚಾದ ಪರಿಣಾಮ ಅವರು ಕುಟುಂಬಸ್ಥರು, ಸ್ನೇಹಿತರೊಂದಿಗೆ ಮತ್ತೆ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದಾರೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ, ಕೋವಿಡ್ ರಿಪೋರ್ಟ್ ಇಲ್ಲದೆ ದಾಖಲು ಮಾಡಲ್ಲ, ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಈ ಸಂದರ್ದಲ್ಲಿ ಬಸವರಾಜ್ ಅವರಿಗೆ ಉಸಿರಾಟದ ತೊಂದರೆ ತೀವ್ರವಾಗಿದ್ದು, ಆಸ್ಪತ್ರೆ ಆವರಣದಲ್ಲೇ ಕುಸಿದು ಬಿದ್ದಿದ್ದಾರೆ. ನಂತರ ವೈದ್ಯರು, ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದಾರಾದರೂ ವೆಂಟಿಲೇಟರ್, ಆಕ್ಸಿಜನ್ ನೀಡಲು ತಡ ಮಾಡಿದ್ದರಿಂದ ಬಸವರಾಜ್ ಆಸ್ಪತ್ರೆಯಲ್ಲೇ ಕೊನೆ ಉಸಿರೆಳಿದಿದ್ದಾರೆಂದು ತಿಳಿದು ಬಂದಿದೆ.

ಬಳಿಕ ಬಸವರಾಜ್ ಸ್ನೇಹಿತರು ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪ ಡಿಸಿದ್ದು, ಈ ವೇಳೆ ಆಸ್ಪತ್ರೆ ಆವರಣದಲ್ಲಿ ಕೆಲಹೊತ್ತು ಮಾತಿನ ಚಕಮಕಿ ನಡೆದಿದೆ. ಬಳಿಕ ವೈದ್ಯರು ಬಸವರಾಜ್ ಅವರ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಬಸವರಾಜ್ ಅವರು ಕೊರೋನ ಸೋಂಕಿನಿಂದಲೇ ಮೃತಪಟ್ಟಿದ್ದಾರಾ ಎಂಬುದು ಕೋವಿಡ್ ಟೆಸ್ಟ್ ವರದಿ ಬಳಿಕ ತಿಳಿದು ಬರಬೇಕಿದೆ.

ಒಟ್ಟಾರೆ ಈ ಘಟನೆ ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಅಲ್ಲದೇ ಇತರ ಕಾಯಿಲೆಗಳಿಂದ ಬಳಲುತ್ತಿರುವ ಸಾರ್ವಜನಿಕರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದು, ಸಕಾಲದಲ್ಲಿ ಬಸವರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರೆ ಅವರು ಸಾಯುತ್ತಿರಲಿಲ್ಲ. ಆಸ್ಪತ್ರೆಯವರ ನಿರ್ಲಕ್ಷದಿಂದಾಗಿ ಅವರು ಮೃತಪಡುವಂತಾಯಿತು ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News