ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸಹೋದರಿ ಕೊರೋನ ಸೋಂಕಿನಿಂದ ಮೃತ್ಯು
ಚಿಕ್ಕಮಗಳೂರು, ಮೇ 6: ಭಾರತ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆಯಾಗಿದ್ದ ಖ್ಯಾತ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರ ತಾಯಿ ಇತ್ತೀಚೆಗಷ್ಟೆ ಕೊರೋನ ಸೋಂಕಿನಿಂದ ಮೃತಪಟ್ಟಿದ್ದು, ಇದರ ಬನ್ನಲ್ಲೇ ವೇದಾ ಅವರ ಸಹೋದರಿ ಕೂಡ ಕೊರೋನ ಸೋಂಕಿನಿಂದಲೇ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ಜಿಲ್ಲೆಯಲ್ಲಿ ನಡೆದಿದೆ.
ವೇದಾ ಕೃಷ್ಣಮೂರ್ತಿ ಅವರ ಇಡೀ ಕುಟುಂಬದ ಸದಸ್ಯರು ಇತ್ತೀಚೆಗೆ ಬೆಂಗಳೂರಿನಲ್ಲಿದ್ದ ವೇಳೆ ಕೊರೋನ ಸೋಂಕಿಗೆ ತುತ್ತಾಗಿದ್ದರು. ಬೆಂಗಳೂರಿನಿಂದ ಕಡೂರಿಗೆ ಆಗಮಿಸಿದ್ದ ಕುಟುಂಬದ ಸದಸ್ಯರು ಕಡೂರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ವೇದಾ ಕೃಷ್ಣಮೂರ್ತಿ ತಾಯಿ ಚಲುವಾಂಬ(62) ಕಳೆದ 15 ದಿನಗಳ ಹಿಂದೆ ಕಡೂರು ಪಟ್ಟಣದ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದರು.
ತಾಯಿ ಮೃತಪಟ್ಟ ಬೆನ್ನಲ್ಲೇ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸಹೋದರಿ ವತ್ಸಲಾ ಶಿವಕುಮಾರ್ ಅವರಿಗೆ 2 ದಿನಗಳ ಹಿಂದೆ ಉಸಿರಾಟದ ತೊಂದರೆ ತೀವ್ರವಾಗಿದ್ದರಿಂದ ಕಟುಂಬಸ್ಥರು ವತ್ಸಲಾ ಅವರನ್ನು ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಅವರು ಬುಧವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲೇ ಹೋಮ್ ಐಸೋಲೇಶನ್‍ನಲ್ಲಿದ್ದರು. ಆದರೆ ಬುಧವಾರ ರಾತ್ರಿ ವತ್ಸಲಾ ಅವರಿಗೆ ಮತ್ತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೆಲ ಕ್ಷಣಗಳಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ವತ್ಸಲಾ ಅವರು ತಂದೆ ಕೃಷ್ಣಮೂರ್ತಿ, ಪತಿ ಶಿವಕುಮಾರ್, ಸಹೋದರಿ ವೇದಾ ಹಾಗೂ ಮಕ್ಕಳನ್ನು ಅಗಲಿದ್ದು, ವತ್ಸಲಾ ಶವಸಂಸ್ಕಾರವನ್ನು ಕಡೂರು ಪಟ್ಟಣದಲ್ಲಿ ಸರಕಾರಿ ಮಾರ್ಗಸೂಚಿಯಂತೆ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.