ರಾಜ್ಯದಲ್ಲಿ ಲಾಕ್‍ಡೌನ್ ಜಾರಿ ಬಗ್ಗೆ ಸರಕಾರ ಆಲೋಚಿಸಬೇಕು: ಕೇಂದ್ರ ಸಚಿವ ಸದಾನಂದಗೌಡ

Update: 2021-05-06 11:58 GMT

ಬೆಂಗಳೂರು, ಮೇ 6: ರಾಜ್ಯದಲ್ಲಿ ಕೋವಿಡ್ ಸೋಂಕಿನ ಪರಿಸ್ಥಿತಿ ಗಂಭೀರವಾಗಿರುವುದರಿಂದ ಲಾಕ್‍ಡೌನ್ ಜಾರಿಗೊಳಿಸುವ ಬಗ್ಗೆ ಸರಕಾರ ಆಲೋಚಿಸಬೇಕಿದೆ. ಮೊದಲು ಜೀವ ಉಳಿಸಲು ಆದ್ಯತೆ ನೀಡಬೇಕಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಸಲಹೆ ಮಾಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂಬೈನಲ್ಲಿ ಈಗಾಗಲೇ ಲಾಕ್‍ಡೌನ್ ಘೋಷಣೆ ಮಾಡಿದ್ದರ ಪರಿಣಾಮ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಸುಪ್ರೀಂ ಕೋರ್ಟ್ ಕೂಡ ಸೂಚನೆ ನೀಡಿದೆ. ಪ್ರಕರಣಗಳು ಹೆಚ್ಚಿರುವ ಕಡೆಗಳಲ್ಲಿ ಲಾಕ್‍ಡೌನ್ ಘೋಷಣೆ ಮಾಡುವುದು ಅನಿವಾರ್ಯ. ಪ್ರಧಾನಿ ಸಲಹೆಯಂತೆ ರಾಜ್ಯಗಳೇ ಈ ಬಗ್ಗೆ ತೀರ್ಮಾನ ಮಾಡಬೇಕು ಎಂದರು.

ಸಂಕಷ್ಟದ ಸಂದರ್ಭದಲ್ಲಿ ಮೊದಲು ಜೀವ ಉಳಿಸಿಕೊಂಡು ಜೀವನ ಮಾಡಬೇಕು. ಜೀವ ಉಳಿಸುವುದಕ್ಕೆ ಏನು ಮಾಡಬೇಕು, ಅದನ್ನ ಮಾಡಲೇಬೇಕು. ಪ್ರಧಾನಿ ಮೋದಿಯವರ ನಿರ್ದೇಶನ ಪಾಲನೆ ಮಾಡಬೇಕು. ನಮ್ಮ ಕೆಲಸ ನಾವೇ ಮಾಡಬೇಕು ಎಂದ ಸದಾನಂದಗೌಡ, ಕೊರೋನ ಕರ್ಫ್ಯೂ ಹೇರಿದ್ದು, ಇದೀಗ ಸೋಂಕು ಗ್ರಾಮೀಣ ಭಾಗದಲ್ಲಿಯೂ ವ್ಯಾಪಿಸಿದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಪರಿಸ್ಥಿತಿಯ ಗಂಭೀರತೆ ಅರಿತು ಮುಂದುವರಿಯಬೇಕು ಎಂದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋವಿಡ್ ಸೋಂಕಿತರು ಆಗಿದ್ದಾರೋ ಅಥವಾ ಮಾನಸಿಕ ರೋಗಿಯಾಗಿದ್ದಾರೋ ಎಂದು ಗೊತ್ತಿಲ್ಲ. ಕೇಂದ್ರ ಸರಕಾರ ರೆಮ್‍ಡಿಸಿವಿರ್ ಕೊಡುತ್ತಿದೆ. ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಯಾರು ಏನೇ ಹೇಳಲಿ ಕೋವಿಡ್ ಕರ್ತವ್ಯ ದೇವರ ಕೆಲಸ ಎಂದುಕೊಂಡು ಬಿಜೆಪಿಯವರು ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಗಳಿಗೆ ಉಸ್ತುವಾರಿ ಮಂತ್ರಿಗಳಿಗೆ ನೇರ ಜವಾಬ್ದಾರಿ ಕೊಟ್ಟಿದ್ದಾರೆ. ಅವರೇ ಜಿಲ್ಲೆಯಲಿ ಇರುವಂತೆ ಸೂಚನೆ ನೀಡಿದ್ದಾರೆ. ಉಸ್ತುವಾರಿ ಮಂತ್ರಿಗಳು, ಜಿಲ್ಲೆಯ ಶಾಸಕರು, ಸಂದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದ ಸದಾನಂದಗೌಡ, ಇದು ಪ್ರಚಾರದ ಸಮಯವಲ್ಲ. ಮೊದಲು ನಾವು ನಮ್ಮ ಕರ್ತವ್ಯ ನಿಭಾಯಿಸಬೇಕು ಎಂದರು.

ಸತ್ಯ ಬೆಳಕಿಗೆ ಬರಲಿದೆ

ಬೊಮ್ಮನಹಳ್ಳಿ ವಾರ್ ರೂಂನಲ್ಲಿ ಶಾಸಕ ಸತೀಶ್ ರೆಡ್ಡಿ ಮತ್ತವರ ಬೆಂಬಲಿಗರಿಂದ ಬೆಡ್ ಬ್ಲಾಕ್ ಮಾಡಿದ ಆರೋಪದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಕ್ಷೇತ್ರದ ಜನರಿಗೆ ಹಾಸಿಗೆ ವ್ಯವಸ್ಥೆ ಇಲ್ಲ ಎಂದರೆ ಶಾಸಕರಾದವರು ವ್ಯವಸ್ಥೆ ಮಾಡಿಕೊಡಬೇಕು. ಆದರೆ, ಇದನ್ನೇ ದಂಧೆ ರೀತಿ ಮಾಡುವುದು ತಪ್ಪು. ಸತೀಶ್ ರೆಡ್ಡಿ ವಿಚಾರ ನನಗೆ ಗೊತ್ತಿಲ್ಲ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ, ಸತ್ಯ ಬೆಳಕಿಗೆ ಬರಲಿದೆ'

-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News