ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಶಾಸಕ ಸತೀಶ್ ರೆಡ್ಡಿ, ಬೆಂಬಲಿಗರ ಹೆಸರು: ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ

Update: 2021-05-06 13:05 GMT

ಬೆಂಗಳೂರು, ಮೇ 6: ಬಿಬಿಎಂಪಿ ದಕ್ಷಿಣ ವಲಯ ವಾರ್ ರೂಂನಲ್ಲಿ ನಡೆದಿದೆ ಎನ್ನಲಾದ `ಹಾಸಿಗೆ ಬ್ಲಾಕ್ ಅವ್ಯವಹಾರ ಪ್ರಕರಣ' ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಸುದ್ದಿಗೋಷ್ಠಿ ನಡೆಸಿದ ಸಂಸದ ತೇಜಸ್ವಿ ಸೂರ್ಯ ಅವರೊಂದಿಗಿದ್ದ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮತ್ತವರ ಬೆಂಬಲಿಗರ ಹೆಸರು ಕೇಳಿಬಂದಿದ್ದು, ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

'ವಾರ್ ರೂಂನಲ್ಲಿ ಕಾರ್ಯನಿರ್ವಹಿಸುವ 200ಕ್ಕೂ ಹೆಚ್ಚು ಸಿಬ್ಬಂದಿ ಪೈಕಿ 17 ಮಂದಿ ಮುಸ್ಲಿಮರ ಹೆಸರನ್ನಷ್ಟೇ ಉಲ್ಲೇಖಿಸಿ ಕೋಮು ಪ್ರಚೋದನೆಗೆ ಯತ್ನಿಸಿದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಜೊತೆಗೆ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ವಾರ್ ರೂಂನಲ್ಲಿ ಬೆಂಬಲಿಗರ ಮೂಲಕ ಕ್ಷೇತ್ರದ ಸೋಂಕಿತರಿಗೆ ಹಾಸಿಗೆ ಕೊಡಿಸುವ ದಂಧೆಯಲ್ಲಿ ತೊಡಗಿರುವವರು ಯಾರೇ ಆಗಿದ್ದರೂ ಅವರನ್ನು ಕೂಡಲೇ ಬಂಧಿಸಬೇಕೆಂಬ' ಆಗ್ರಹವೂ ಕೇಳಿಬಂದಿದೆ.

ತುರ್ತು ಚಿಕಿತ್ಸೆ ಅಗತ್ಯವಿರುವ ಕೋವಿಡ್ ಸೋಂಕಿತರಿಗೆ ಆದ್ಯತೆ ಮೇಲೆ ಹಾಸಿಗೆ ವ್ಯವಸ್ಥೆ ಆಗಬೇಕು. ಆದರೆ, ವಾರ್ ರೂಂನಲ್ಲಿ ತಮ್ಮ ಬೆಂಬಲಿಗರನ್ನಿಟ್ಟು ಶಾಸಕ ಸತೀಶ್ ರೆಡ್ಡಿ, ತಾವು ಶಿಫಾರಸ್ಸು ಮಾಡಿದವರಿಗೆ ಬೆಡ್ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು ಎಂಬ ಆರೋಪವಿದೆ. ಜೊತೆಗೆ ತುರ್ತು ಅಗತ್ಯವಿರುವವರಿಗೆ ಹಾಸಿಗೆಗಳನ್ನು ಹಣಕ್ಕೆ ಮಾರಾಟ ಮಾಡಲಾಗುತ್ತಿತ್ತು. ಅಲ್ಲದೆ, ವಾರ್ ರೂಂ ಸಿಬ್ಬಂದಿ ಪಾರದರ್ಶಕ ಹಾಸಿಗೆ ಹಂಚಿಕೆಗೂ ರೆಡ್ಡಿ ಮತ್ತವರ ಬೆಂಬಲಿಗರು ಅಡ್ಡಿಪಡಿಸುತ್ತಿದ್ದರು ಎಂದು ದೂರಲಾಗಿದೆ.

ಹೊಂದಾಣಿಕೆ: `ತಮ್ಮ ಬೆಂಬಲಿಗರು ಹಾಸಿಗೆ ಬ್ಲಾಕ್ ಮಾಡುತ್ತಿದ್ದರೆಂಬ ಆರೋಪದಲ್ಲಿ ಹುರಳಿಲ್ಲ' ಎಂದು ಖುದ್ದು ಸತೀಶ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಹಾಗೂ ವೆಂಟಿಲೇಟರ್ ಹಾಸಿಗೆಗಳು ಖಾಲಿಯಾದ ಕೂಡಲೇ ತಮ್ಮ ಕಡೆಯವರ ಮೂಲಕ ಮಾಹಿತಿ ಪಡೆದುಕೊಂಡು ಆ ಹಾಸಿಗೆಗಳನ್ನು ಬೇರೆಯವರ ಹೆಸರಿನಲ್ಲಿ ಕಾಯ್ದಿರಿಸುತ್ತಿದ್ದರು. ನಂತರ ತಮಗೆ ಬೇಕಾದವರಿಗೆ, ಕ್ಷೇತ್ರದವರಿಗೆ ಹಂಚಿಕೆ ಮಾಡಿಸುತ್ತಿದ್ದರು ಎಂಬ ಆಪಾದನೆಯೂ ಮಾಧ್ಯಮಗಳಲ್ಲಿ ವರದಿಯಾಗಿದೆ.

ತಮ್ಮ ಕ್ಷೇತ್ರದಲ್ಲಿ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸೂಕ್ತ ಚಿಕಿತ್ಸೆ ದೊರೆಯದೆ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ತನ್ನ ಕ್ಷೇತ್ರದ ಕೆಲವರಿಗೆ ಹಾಸಿಗೆ ಕೊಡಿಸಲು ಕೋರಿದ್ದೇವೆ. ಅಲ್ಲದೆ, ಇದೇ ವಿಚಾರಕ್ಕೆ ಪ್ರತಿಭಟನೆಯನ್ನು ಮಾಡಿದ್ದೇವೆ. ಈ ವಿಚಾರದಲ್ಲಿ ನಮ್ಮ ಪಾತ್ರ ಇಲ್ಲ ಎಂದು ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಆದರೆ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿಯನ್ನು ತಮ್ಮ ಬಳಿಯೇ ಇರಿಸಿಕೊಂಡಿರುವ ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್ ಮೌನಕ್ಕೆ ಶರಣಾಗಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಶಾಸಕರು, ಸಂಸದರ ಬಂಧನ ಆಗಬೇಕು: `ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ, ಜಗತ್ತು ನೋಡದು ಎನ್ನುವ ಭ್ರಮೆಯಲ್ಲಿರುತ್ತದೆ! ಅಂತೆಯೇ ಮೊನ್ನೆ ಸತೀಶ್ ರೆಡ್ಡಿ ಕೋವಿಡ್ ಸೋಂಕಿತರ ಹೆಸರು ಬಹಿರಂಗಪಡಿಸಬೇಡಿ ಎಂದು ಮಾಧ್ಯಮಗಳ ಎದುರು ಅವಲತ್ತುಕೊಂಡಿದ್ದು ತನ್ನ ಗೋಲ್ಮಾಲ್ ಬಹಿರಂಗವಾಗಬಹುದು ಎನ್ನುವ ಕಾರಣಕ್ಕೆ. ಆದರೆ, ಹಗರಣದ ಸತ್ಯ ಹೊರಬರಲೇಬೇಕು, ಈಗ ಬಂದಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಶಿವಕುಮಾರ್ ಅವರು, `ಬಿಜೆಪಿಗೂ ಹಾಸಿಗೆಗೂ ಭಾರೀ ನಂಟು! ಅವರ ಹಾಸಿಗೆ ಹಗರಣ ಒಂದೆರಡಲ್ಲ. ಕಳೆದ ಭಾರಿ ಹಾಸಿಗೆ ಖರೀದಿ ಹಗರಣ, ನಂತರ ಹಾಸಿಗೆ ಮೇಲಿನ ಹಗರಣ, ಈಗ ಹಾಸಿಗೆ ಹಂಚಿಕೆಯ ಹಗರಣ, ಈ ಲಂಚ-ಮಂಚದ ಸರಕಾರಕ್ಕೂ ಹಾಸಿಗೆಗೂ ಭಾರಿ ನಂಟು! ಸಂಕಟದ ನಡುವೆಯೂ ಹಾಸಿಗೆ ಹೆಸರಲ್ಲಿ ಹೇಸಿಗೆ ನಡೆಸಿದ ಬಿಜೆಪಿ ಶಾಸಕ, ಸಂಸದರ ಬಂಧನವಾಗಬೇಕು' ಎಂದು ಆಗ್ರಹಿಸಿದ್ದಾರೆ.

ಚಿತೆಯಲ್ಲಿ ಚಳಿ ಕಾಯಿಸುವ ನೀಚತನ ಇರುವುದು ಬಿಜೆಪಿಗೆ ಮಾತ್ರ. ಕಳೆದ ಭಾರಿ ಬೆಡ್ ಖರೀದಿ ಹಗರಣ, ಈ ಭಾರಿ ಬೆಡ್ ಬ್ಲಾಕಿಂಗ್ ಹಗರಣ. ಹಗರಣ ಮಾಡಿದ ತೋಳಗಳೇ ಮೊಲಗಳಂತೆ ಮುಖವಾಡ ಧರಿಸಿ ಹಗರಣ ಬಯಲಿಗೆಳೆಯುವ ಮಹಾನಾಟಕ ಮಾಡಿದ್ದವು! ತಮ್ಮ ಭ್ರಷ್ಟಾಚಾರ ಮರೆಮಾಚಲು ಕೋಮು ಬಣ್ಣ ಲೇಪಿಸಲು ಯತ್ನಿಸಿದ ಕುತಂತ್ರ ಬೆತ್ತಲಾಗಿದೆ' ಎಂದು ಶಿವಕುಮಾರ್ ಟೀಕಿಸಿದ್ದಾರೆ.

ತೇಜಸ್ವಿ ವಿರುದ್ಧ ಕಾಂಗ್ರೆಸ್ ದೂರು: ಕೇವಲ ಪ್ರಚಾರಕ್ಕಾಗಿ ದಾರಿ ತಪ್ಪಿಸುವ ಹೇಳಿಕೆ ನೀಡಿ, ಆಧಾರ ರಹಿತವಾಗಿ ವಾರ್ ರೂಂ ಸಿಬ್ಬಂದಿ ವಿರುದ್ಧ ಸಂಸದ ತೇಜಸ್ವಿ ಸೂರ್ಯ, ಬಿಜೆಪಿಯ ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಹಾಗೂ ಉದಯ್ ಗಡುರಾಚಾರ್ ಹೇಳಿಕೆ ನೀಡಿ ಕೋಮು ದ್ವೇಷ ಸೃಷ್ಟಿಸಿಗೆ ಯತ್ನಿಸಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಕೋರಿ ಬಿಬಿಎಂಪಿ ಆಯುಕ್ತರಿಗೆ ಹನುಮಂತನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ದೂರು ನೀಡಿದೆ.

ತಮ್ಮ ರಕ್ಷಣೆಗೆ ಮಹಾನಾಟಕ: `ಶೇ.80ರಷ್ಟು ಬಿಬಿಎಂಪಿ ಬೆಡ್‍ಗಳನ್ನು ಶಾಸಕ ಸತೀಶ್ ರೆಡ್ಡಿ ಬ್ಲಾಕ್ ಮಾಡಿದ್ದರು. ತೇಜಸ್ವಿ ಸೂರ್ಯನ ಪಟಾಲಂ ಅದಕ್ಕೆ ಸಾಥ್ ಕೊಟ್ಟಿದ್ದರು. ವಾರ್ ರೂಮ್ ಸತೀಶ್ ರೆಡ್ಡಿಯ ಕಚೇರಿಯಿಂದಲೇ ಆಪರೇಟ್ ಆಗ್ತಿತ್ತು. ಕಮಿಷನರ್ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ತಮ್ಮ ಹೆಸರು ಬರಬಾರದೆಂದು ಆಡಿದ್ದು ಮಹಾನಾಟಕ'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ನೀವೇ ಹೊಣೆಯೇ?: `ಮುಖ್ಯಮಂತ್ರಿ ಯಡಿಯೂರಪ್ಪನವರೇ ನೀವೇ ಬೆಂಗಳೂರು ನಗರದ ಉಸ್ತುವಾರಿ ಸಚಿವರು. ಬೆಂಗಳೂರಿನಲ್ಲಿ ಕೋವಿಡ್ ಹಾಸಿಗೆ ಅಕ್ರಮ ಬುಕ್ಕಿಂಗ್ ದಂಧೆ ನಡೆಯುತ್ತಿದೆ ಎಂದು ನಿಮ್ಮದೆ ಪಕ್ಷದ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಆಪಾದನೆ ಮಾಡಿದ್ದಾರೆ. ಅವರ ಪ್ರಕಾರ ನಿಮ್ಮ ಕಣ್ಣೆದುರಲ್ಲೇ ಅಕ್ರಮ ನಡೆದಿದ್ದು, ಇದಕ್ಕೆಲ್ಲ ನೇರವಾಗಿ ನೀವೇ ಹೊಣೆಯೇ?'

-ರಾಮಲಿಂಗಾರೆಡ್ಡಿ, ಮಾಜಿ ಸಚಿವ ಹಾಗೂ ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News