ಕೋಮು ಗಲಭೆಗೆ ಪ್ರಚೋದನೆ ನೀಡುವ ತೇಜಸ್ವಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಿ: ಡಿ.ಕೆ.ಶಿವಕುಮಾರ್

Update: 2021-05-06 13:32 GMT

ಬೆಂಗಳೂರು, ಮೇ 6: ಅಂದು ಮುಸ್ಲಿಮರು ಪಂಚರ್ ಹಾಕುವವರು, ಬೆಂಗಳೂರನ್ನು ಭಯೋತ್ಪಾದಕರ ತಾಣ ಎಂದರು. ಇದೀಗ ಕೋವಿಡ್ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ 200ಕ್ಕೂ ಹೆಚ್ಚು ವಾರ್ ರೂಂ ಸಿಬ್ಬಂದಿಯ ಪೈಕಿ 17 ಮಂದಿ ಮುಸ್ಲಿಮ್ ಸಮುದಾಯದವರ ಹೆಸರನ್ನು ಓದಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಹೀಗಾಗಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಗುರುವಾರ ಸದಾಶಿವನಗರದಲ್ಲಿ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ನಿನ್ನೆ ನಮ್ಮ ಸಂಸದರು ವೀರಾವೇಶದ ಮಾತುಗಳನ್ನಾಡಿದ್ದಾರೆ ಸಂತೋಷ. ಆದರೆ, ವಾರ್ ರೂಂನಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಹಿಂದೂ-ಮುಸ್ಲಿಮ್ ಎಂದು ವರ್ಗಿಕರಣ ಮಾಡುವುದು ಸರಿಯಲ್ಲ. ತೇಜಸ್ವಿ ಸೂರ್ಯನಿಗೆ ಸಂವಿಧಾನದ ಪರಿಜ್ಞಾನವೇ ಇಲ್ಲ ಎಂದರು.

ಮುಸ್ಲಿಮ್ ಬಂಧುಗಳೆಲ್ಲ ನಮ್ಮ ಸಹೋದರರು. ಅವರೆಲ್ಲರೂ ಈ ಸಂಕಷ್ಟದ ಸಂದರ್ಭದಲ್ಲಿ ಮೃತ ಹಿಂದೂಗಳ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬಿಎಸ್‍ವೈ ಅವರೇ ಇಂತಹ ಎಳಸು ಎಲ್ಲಿಂದ ಕರೆದುಕೊಂಡು ಬಂದಿದ್ದೀರಿ. ದಕ್ಷಿಣ ವಿಭಾಗದ ಡಿಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳಿದ್ದು, ಅವರ ಮೇಲೆ ವಿಶ್ವಾಸವಿದೆ. ರಾಜಕೀಯ ವ್ಯಕ್ತಿಗಳ ತಾಳಕ್ಕೆ ತಕ್ಕಂತೆ ಕೆಲಸ ಮಾಡದೆ ಕಾನೂನು ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಕೋರಿದರು.

ಕೋಮು ಬಣ್ಣ ಸರಿಯಲ್ಲ: ಹಾಸಿಗೆ ಬ್ಲಾಕ್ ದಂಧೆಯಲ್ಲಿ ಬಿಜೆಪಿ ಸರಕಾರದ ಪ್ರತಿನಿಧಿಗಳೇ ಶಾಮೀಲಾಗಿದ್ದಾರೆಂದು ಮಾಧ್ಯಮಗಳೇ ಬಹಿರಂಗಪಡಿಸಿವೆ. ಇಲ್ಲವಾದರೆ ಮಾಧ್ಯಮದವರನ್ನು ಬಂಧಿಸಬೇಕು. ಈ ಕೃತ್ಯಕ್ಕೆ ಕೋಮು ಬಣ್ಣ ಬಳಿಯಲಾಗುತ್ತಿದೆ. ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವವರನ್ನು ಮುಲಾಜಿಲ್ಲದೆ ಬಂಧಿಸಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.

ಬಿಬಿಎಂಪಿ ವಾರ್ ರೂಮ್‍ಗೆ 200ಕ್ಕೂ ಹೆಚ್ಚು ಸಿಬ್ಬಂದಿ ನೇಮಕ ಮಾಡಿದವರು ಯಾರು? ನಾವು ಮಾಡಿದ್ದೇವಾ? ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು, ಏನೆಲ್ಲಾ ಕುತಂತ್ರ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಶಿವಕುಮಾರ್, ಈ ಬಗ್ಗೆ ಉತ್ತರ ನೀಡಲಾಗದೆ ಸಚಿವ ಆರ್.ಅಶೋಕ್ ಓಡಿ ಹೋಗುತ್ತಿದ್ದಾರೆ. ಮತ್ತೊಬ್ಬ ಮಂತ್ರಿ ಉಸಿರು ಬಿಡುತ್ತಿಲ್ಲ. ಡಿಸಿಎಂ ಅಶ್ವಥ್ ನಾರಾಯಣ ಅವರೇ ಯಾಕೆ ಮಾತನಾಡುತ್ತಿಲ್ಲ? ನಿಮ್ಮ ಸಂಸದರು ಹೇಳಿದ್ದು ಸರಿಯೋ? ತಪ್ಪೋ? ಹೇಳಬೇಕು. ನಮ್ಮ ಪಕ್ಷದವರು ಈ ರೀತಿ ಮಾಡಿದ್ದರೆ ಎಷ್ಟು ಬೇಗ ಬಂಧಿಸುತ್ತಿದ್ದಿರಿ? ಎಂದು ವಾಗ್ದಾಳಿ ನಡೆಸಿದರು.

ವ್ಯವಹಾರಗಳ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡುತ್ತೇವೆ. ಎಸ್‍ಐಟಿ ಅವರು ರಜೆ ಹಾಕಿಕೊಂಡು ಹೋಗಿದ್ದಾರಂತೆ. ಹಾಗಾದರೆ, ಕ್ರಿಮಿನಲ್‍ಗಳು ಏನು ಬೇಕಾದರೂ ಮಾಡಬಹುದಾ? ಎಲ್ಲ 200 ಸಿಬ್ಬಂದಿಯನ್ನು ಬಂಧಿಸಿ. ನಾನು ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ಪಡೆದು ವರದಿ ನೀಡಿ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಅವರಿಗೆ ಅನುಮತಿ ನೀಡುತ್ತೀರೋ ನಿರಾಕರಿಸುತ್ತೀರೋ ಗೊತ್ತಿಲ್ಲ ಎಂದು ಶಿವಕುಮಾರ್ ಹೇಳಿದರು.

ಡೆತ್ ಆಡಿಟ್ ಮಾಡಿ: ಸಿಎಂ ಬಿಎಸ್‍ವೈ ಅವರೇ ನಿಮ್ಮ ಶ್ರಮದ ಮೇಲೆ ನಮಗೆ ಅನುಮಾನ ಇಲ್ಲ. ನಿಮ್ಮಿಂದ ಇದು ಸಾಧ್ಯವಾಗುತ್ತಿಲ್ಲ. ನಾನು ವೈದ್ಯಕೀಯ ಶಿಕ್ಷಣ ಮಂತ್ರಿಯಾಗಿದ್ದೆ. ರಾಜ್ಯದಲ್ಲಿ 56 ಕಾಲೇಜುಗಳಿವೆ. ಆ ಕಾಲೇಜು ಆಡಳಿತ ಮಂಡಳಿ ಜತೆ ಮಾತಾಡಿ. ನೀವು ಎಲ್ಲೂ ಹೊಸದಾಗಿ ನಿರ್ಮಿಸುವುದು ಬೇಡ. ಇವರ ಬಳಿಯೇ, ವೈದ್ಯರು, ಸಿಬ್ಬಂದಿ, ಸೌಕರ್ಯಗಳಿವೆ. ಒಂದೊಂದು ಕಾಲೇಜಿನಲ್ಲೂ 700 ಹಾಸಿಗೆಗಳಿವೆ. ನಾವೇನು ಹೊಸದಾಗಿ ಸೃಷ್ಟಿಸುವ ಅಗತ್ಯವಿಲ್ಲ. ಅವರಿಗೆ ಹಣ ಕೊಟ್ಟು ಕೆಲಸ ಮಾಡಲು ಹೇಳಿ. ನಾನು ಬೇಕಾದರೆ ನಿಮ್ಮ ಸಭೆಗೆ ಬರುತ್ತೇನೆ. ಖಾಸಗಿ ಆಸ್ಪತ್ರೆಗೆ ಹೋದವರು ಬದುಕಿ ಬರುತ್ತಿದ್ದಾರೆ, ಸರಕಾರಿ ಆಸ್ಪತ್ರೆಗೆ ಹೋದವರು ಏಕೆ ಸಾಯುತ್ತಿದ್ದಾರೆ. ಅವರಿಗೆ ಔಷಧಿ ಸಿಗುತ್ತಿಲ್ಲ. ಹೀಗಾಗಿ ಸರಕಾರ ಡೆತ್ ಆಡಿಟ್ ಮಾಡಬೇಕು ಎಂದು ಆಗ್ರಹಿಸಿದರು.

ನಿಮಗೆ ಯಾವ ನೆರವು ಬೇಕು ಹೇಳಿ. ನಾವು ಮಾಡುತ್ತೇವೆ. ಮೊದಲು ಜೀವ ಉಳಿಸಿ. ಬಡವರು, ದೇಶ ಕಟ್ಟುತ್ತಿರುವವರನ್ನು ರಕ್ಷಿಸಿ. ನನ್ನ ಕ್ಷೇತ್ರದಲ್ಲಿ 10 ಜನ ಸತ್ತರೂ ಅದರ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಈ ಸಾವು ನೋವಿಗೆ ಕಾರಣ ಯಾರು? ನ್ಯಾಯಾಲಯದಿಂದ ಮಂಗಳಾರತಿ ಎತ್ತಿಸಿಕೊಳ್ಳಬೇಕೆ? ಮಾಧ್ಯಮಗಳು ಕೊಲೆಗಡುಕ ಸರಕಾರ ಎಂದು ಹೇಳುತ್ತಿವೆ. ಅಶೋಕ್ ಅವರು ತಾತ್ಕಾಲಿಕ ಸ್ಮಶಾನ ನಿರ್ಮಿಸಿ ಸೋಂಕಿತ ಶವಗಳಿಗೆ ಅಂತ್ಯ ಸಂಸ್ಕಾರ ನೀಡುತ್ತಿದ್ದು, ಇದುವರೆಗೂ ಅವರು ಮಾಡಿರುವ ಕೆಲಸ ಇದೊಂದೆ. ಅಪರಾಧವನ್ನು ಮುಚ್ಚಿಡುವುದೇ ಒಂದು ಅಪರಾಧ ಎಂದರು.

ನ್ಯಾಯಾಂಗದ ಮೇಲೆ ವಿಶ್ವಾಸ: ಪ್ರಸ್ತುತ ಪರಿಸ್ಥಿತಿಯಲ್ಲಿ ನಮಗೆ ನ್ಯಾಯಾಲಯಗಳ ಮೇಲೆ ವಿಶ್ವಾಸ ಹೆಚ್ಚುತ್ತಿದೆ. ಹೈಕೋರ್ಟ್ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸಿದೆ. ಇದು ನ್ಯಾಯಾಲಯ-ಸರಕಾರದ ಮೇಲೆ ವಿಶ್ವಾಸ ಕಳೆದುಕೊಂಡಿರುವುದು ತಿಳಿಯುತ್ತದೆ. ಈ ಸಮಿತಿ ರಚಿಸುವ ನ್ಯಾಯಾಲಯ ಪೀಠಕ್ಕೆ ರಾಜ್ಯದ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಾಜ್ಯ ಬಿಜೆಪಿ ಸರಕಾರದ ಅಜೆಂಡಾ ಒಂದೇ ಎಲ್ಲೆಲ್ಲಿ ಏನೇನು ಸಿಗುತ್ತದೋ ಅದನ್ನು ಗುಳುಂ ಮಾಡುವುದು. ಇದು ಕೊನೆ ಅವಕಾಶ ಎಂದು ಸಿಕ್ಕ ಸಿಕ್ಕ ಕಡೆ ಗುಳುಂ ಮಾಡುತ್ತಿದ್ದಾರೆ. ಸರಕಾರದ ನಿರ್ಧಾರಗಳೇ ವೈಫಲ್ಯಕ್ಕೆ ಕಾರಣ. ಸರಕಾರ ಎಂದರೆ ಆರೋಗ್ಯ ಸಚಿವರು ಮಾತ್ರವೇ ಅಲ್ಲ. ಸಚಿವರು ಉಸ್ತುವಾರಿ ವಹಿಸುವ ಕೆಲಸವನ್ನು ಮೊದಲೇ ಮಾಡಬೇಕಿತ್ತು. ಸಚಿವರ ರಾಜೀನಾಮೆ ನಾವು ಕೇಳಿದರೆ ಕೊಡುವುದಿಲ್ಲ. ಇನ್ನು ಅವರ ಪಕ್ಷದ ನಾಯಕರು ನೀಡುವರೇ?'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News