×
Ad

ಕೋಮು ಸೌಹಾರ್ದ ಕದಡುವ ಹೇಳಿಕೆ ಆರೋಪ: ತೇಜಸ್ವಿ ಸೂರ್ಯ, ಶಾಸಕರ ವಿರುದ್ಧ ದೂರು

Update: 2021-05-06 20:49 IST

ಬೆಂಗಳೂರು, ಮೇ 6: ಬೆಡ್ ಬ್ಲಾಕಿಂಗ್ ಆರೋಪ ಸಂಬಂಧ ಕೋಮು ಸೌಹಾರ್ದ ಕದಡುವ ಹೇಳಿಕೆ ನೀಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಹಾಗೂ ಉದಯ ಗರುಡಾಚಾರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಇಲ್ಲಿನ ಸಿದ್ದಪುರ ಪೊಲೀಸ್ ಠಾಣೆಗೆ ಕಾಂಗ್ರೆಸ್ ದೂರು ಸಲ್ಲಿಕೆ ಮಾಡಿದೆ.

ಗುರುವಾರ ದೂರು ಸಲ್ಲಿಕೆ ಮಾಡಿರುವ ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದ್‍ರಾಜ್, ಕೋಮು ದ್ವೇಷವನ್ನೇ ವೃತ್ತಿ ಮಾಡಿಕೊಂಡಿರುವ ವ್ಯಕ್ತಿಗಳಿಗೆ ಕಾನೂನು ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.

ಇತ್ತೀಚಿಗೆ ಕೋವಿಡ್ ವಾರ್ ರೂಂನಲ್ಲಿ ನಡೆದಿದೆ ಎನ್ನಲಾದ ಬೆಡ್ ಬ್ಲಾಕಿಂಗ್ ಹಗರಣ ಸಂಬಂಧ ಪಾಲಿಕೆ ಕಚೇರಿಯಲ್ಲಿ ಗದ್ದಲ ಮಾಡಿದ ತೇಜಸ್ವಿ ಸೂರ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಹಾಗೂ ಉದಯ ಗರುಡಾಚಾರ್ ಅವರು, ಕೋವಿಡ್ ವಾರ್ ರೂಂನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 205 ಜನರಲ್ಲಿ 17 ಜನ ಒಂದು ಕೋಮಿಗೆ ಸೇರಿದ್ದು, ಹೇಗೆ ಕೆಲಸಕ್ಕೆ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ, ರವಿ ಸುಬ್ರಹ್ಮಣ್ಯ, ಇದೇನು ಮದ್ರಸಾ ನಡೆಸುತ್ತೀರಾ, ಹಜ್ ಯಾತ್ರೆಗೆ ಕಳುಹಿಸುವ ಯೋಜನೆ ಹಾಕಿಕೊಂಡಿದ್ದೀರಾ ಎಂದು ಕೋಮು ದ್ವೇಷ ಮಾತುಗಳನ್ನಾಡಿದ್ದಾರೆ. ಜತೆಗೆ ತೇಜಸ್ವಿ ಸೂರ್ಯ, ಒಂದೇ ಸಮುದಾಯದ 17 ಜನರ ಹೆಸರನ್ನು ಉದ್ದೇಶಪೂರ್ವಕವಾಗಿ ಹೇಳಿ ಸಮಾಜದ ಸಾಮರಸ್ಯ ಕದಡಲು ಪ್ರಚೋದಿಸುವ ಹೇಳಿಕೆ ನೀಡಿದ್ದಾರೆ ಎಂದು ಸೂರ್ಯ ಮುಕುಂದರಾಜ್ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಆಯುಕ್ತರಿಗೆ ದೂರು: ಇದೇ ರೀತಿ ಜೆಡಿಎಸ್ ಪಕ್ಷದ ನಾಯಕಿ ನಜ್ಮಾ ನಝೀರ್ ಚಿಕ್ಕನೆರಳೆ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ನೀಡಿದ್ದು, ಕೋಮುದ್ವೇಷದ ಮಾತುಗಳನ್ನಾಡಿರುವ ಜನಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News