ಉದ್ಯಮಿಗಳು, ಶ್ರೀಮಂತರಿಂದ ಕೋವಿಡ್ ಸೆಸ್ ಸಂಗ್ರಹಿಸಬೇಕು: ಸಸಿಕಾಂತ್ ಸೆಂಥಿಲ್

Update: 2021-05-06 15:25 GMT

ಬೆಂಗಳೂರು, ಮೇ 6: ಕೋವಿಡ್‍ನಿಂದಾಗಿ ರಾಜ್ಯದಲ್ಲಿ ಹಲವು ರೀತಿಯ ಸಮಸ್ಯೆಗಳು ತಲೆದೋರಿದ್ದು, ಈ ಸಂದರ್ಭದಲ್ಲಿ ಉದ್ಯಮಿಗಳಿಂದ ಕೋವಿಡ್ ಸೆಸ್‍ನ್ನು ಸಂಗ್ರಹಿಸಿ ಸಾಮಾನ್ಯ ಜನತೆಯ ಆರೋಗ್ಯ ಹಾಗೂ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಒತ್ತಾಯಿಸಿದ್ದಾರೆ.

ಗುರುವಾರ ಕರ್ನಾಟಕ ಜನಶಕ್ತಿ ವತಿಯಿಂದ ಆನ್‍ಲೈನ್‍ನಲ್ಲಿ ಆಯೋಜಿಸಿದ್ದ ಜನಾಗ್ರಹ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರದಿಂದ ಹಲವು ರೀತಿಯಲ್ಲಿ ಸೌಲಭ್ಯಗಳನ್ನು ಪಡೆದುಕೊಂಡಿರುವ ಉದ್ಯಮಿಗಳು ಹಾಗೂ ಶ್ರೀಮಂತರ ಮೇಲೆ ಕೋವಿಡ್ ಸೆಸ್‍ನಡಿ ಶೇ.5ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿ ಸಂಪನ್ಮೂಲಗಳನ್ನು ಕ್ರೋಡೀಕರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

5 ಸಾವಿರ ರೂ.ನೆರವು ನೀಡಿ: ಆರ್ಥಿಕವಾಗಿ ಹಿಂದುಳಿದಿರುವ ಪ್ರತಿ ಕುಟುಂಬಕ್ಕೂ ಕೋವಿಡ್ ಆತಂಕ ದೂರವಾಗುವವರೆಗೆ ಪ್ರತಿ ತಿಂಗಳು ಐದು ಸಾವಿರ ರೂ.ಆರ್ಥಿಕ ನೆರವು ನೀಡಬೇಕು. ಇದರಿಂದ ಬಡಜನರು ಕೋವಿಡ್ ಆತಂಕದ ನಡುವೆ ಮನೋಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆಗಳನ್ನು ದೊರಕಿಸಿಕೊಡುವುದೇ ಪೋಷಕರಿಗೆ ದೊಡ್ಡ ಸವಾಲಿನ ಸಂಗತಿಯಾಗಿದೆ. ಹಾಸಿಗೆ ಸಿಗುವುದಿಲ್ಲ ಎಂಬ ಕಾರಣಕ್ಕಾಗಿಯೇ ಕೋವಿಡ್ ರೋಗಿಗಳು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರಿಗೂ ಹಾಸಿಗೆಗಳು ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ರಾಜ್ಯ ಸರಕಾರ ಪೊಲೀಸ್, ಪೌರಕಾರ್ಮಿಕರ, ಆರೋಗ್ಯ ಸಿಬ್ಬಂದಿ, ಪತ್ರಕರ್ತರನ್ನು ಕೊರೋನ ವಾರಿಯರ್ಸ್ ಗಳೆಂದು ಘೋಷಿಸಿದೆ. ಅದೇ ರೀತಿಯಲ್ಲಿ ಕಟ್ಟಡ ಕಾರ್ಮಿಕರನ್ನು ಒಳಗೊಂಡಂತೆ ಶ್ರಮಿಕ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕ ಸಮುದಾಯವನ್ನು ಕೊರೋನ ವಾರಿಯರ್ಸ್ ಗಳೆಂದು ಘೋಷಿಸಿ, ಅಗತ್ಯ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

ವೈದ್ಯಕೀಯ ದಂಧೆ ನಿಯಂತ್ರಿಸಿ: ಇಡೀ ರಾಜ್ಯದ ಜನತೆ ಕೋವಿಡ್‍ನಿಂದ ಎಲ್ಲವನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರೆ ನಡುವೆ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಸಂಸ್ಥೆಗಳು ತಮ್ಮ ವೈದ್ಯಕೀಯ ಹೆಚ್ಚಿನ ಶುಲ್ಕವನ್ನು ವಿಧಿಸಿ ದಂಧೆ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಪರಿಕರಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಜನತೆಗೆ ಕೈಗೆಟುಕು ದರದಲ್ಲಿ ಇಲ್ಲವೆ ಉಚಿತವಾಗಿ ನೀಡುವಂತಹ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಈ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ, ನಟ ಚೇತನ್, ಮಾಜಿ ಸಚಿವೆ ಲಲಿತಾನಾಯಕ್, ಕರ್ನಾಟಕ ಜನಶಕ್ತಿಯ ಕೆ.ಎಲ್.ಅಶೋಕ್ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News