ಕೋವಿಡ್ ಲಸಿಕೆಗೆ 100 ರೂ. ಮಾತ್ರ ಸೇವಾ ಶುಲ್ಕ: ರಾಜ್ಯ ಸರಕಾರ ಸುತ್ತೋಲೆ
Update: 2021-05-06 22:37 IST
ಬೆಂಗಳೂರು, ಮೇ 6: ಕೋವಿಡ್ ಲಸಿಕಾ ತಯಾರಕರು ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ನಿಗದಿಪಡಿಸಲಾದ ದರದ ಜೊತೆಗೆ ಪ್ರತಿ ಲಸಿಕಾ ಡೋಸ್‍ಗೆ ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಮಾರ್ಗಸೂಚಿಯಂತೆ 100 ರೂ.ಗಳಂತೆ ಮಾತ್ರ ಸೇವಾ ಶುಲ್ಕವಾಗಿ ಪಡೆಯಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆ ಹೊರಡಿಸಿದ್ದಾರೆ.
ಹೆಚ್ಚಿನ ಸೇವಾಶುಲ್ಕವನ್ನು ಪಡೆದರೆ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ. ರಾಜ್ಯದಲ್ಲಿ ಕೊರೋನ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎ.30ರಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ಕಾರ್ಯಪಡೆಯ ಸಭೆಯಲ್ಲಿ ಕೋವಿಡ್-19 ಲಸಿಕಾಕರಣಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿತ್ತು.