×
Ad

ಬೆಡ್ ಬಗ್ಗೆ ಸುಳ್ಳು ಮಾಹಿತಿ ಟ್ವೀಟ್ ಮಾಡಿ ಪ್ರಚಾರಕ್ಕೆ ಬಳಸಿಕೊಂಡರೇ ತೇಜಸ್ವಿ ಸೂರ್ಯ ?

Update: 2021-05-06 22:41 IST

ಬೆಂಗಳೂರು, ಮೇ 6: ಸಂಸದ ತೇಜಸ್ವಿ ಸೂರ್ಯ ಮೇ 4ರಂದು ಕೋವಿಡ್ ವಾರ್ ರೂಂವೊಂದಕ್ಕೆ ದಾಳಿ ನಡೆಸಿ ಕೋವಿಡ್ ಹಾಸಿಗೆಗಳ ಬ್ಲಾಕಿಂಗ್ ದಂಧೆಯ ಕುರಿತು ಆರೋಪಿಸಿದ್ದರು. ಆ ಬಳಿಕ ತನ್ನ ಕಾರ್ಯದಿಂದಾಗಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ ಹಾಸಿಗೆ ಎಷ್ಟೆಷ್ಟು ಖಾಲಿ ಇವೆ ಎಂಬುದನ್ನು ಟ್ವೀಟ್ ಮೂಲಕ ಪ್ರಚಾರ ಮಾಡಿದ್ದರು. ಆದರೆ, ವಾಸ್ತವದಲ್ಲಿ ಅವರ ದಾಳಿಯ ಬಳಿಕ ಕೋವಿಡ್ ಹಾಸಿಗೆಗಳ ಲಭ್ಯತೆಯು ಇನ್ನಷ್ಟು ಕಡಿಮೆ ಆಗಿರುವುದು ಬೆಳಕಿಗೆ ಬಂದಿದೆ.

'ಸರ್ಕಾರಿ ಕೋಟಾ ಮೂಲಕ ಹಂಚಿಕೆ ಮಾಡುವ ಹಾಸಿಗೆಗಳ ಲಭ್ಯತೆ ಸಂಖ್ಯೆ ಶೂನ್ಯ ಎಂದು ಬಿಬಿಎಂಪಿ ವೆಬ್‌ಸೈಟ್‌ ಇಂದು ಮಧ್ಯಾಹ್ನ ತೋರಿಸಿತ್ತು. ಈಗ ಅದು 1504 ಹಾಸಿಗೆಗಳು ಲಭ್ಯ ಎಂದು ತೋರಿಸುತ್ತಿದೆ. ವ್ಯವಸ್ಥೆ ಸುಧಾರಣೆ ಆಗುತ್ತಿದೆ...’ ಎಂದು ಸಂಸದ ತೇಜಸ್ವಿ ಸೂರ್ಯ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಟ್ವೀಟ್‌ ಮಾಡಿದ್ದರು.

ಕೋವಿಡ್‌ ರೋಗಿಗಳಿಗೆ ಸರ್ಕಾರಿ ಕೋಟಾದಲ್ಲಿ ಹಂಚಿಕೆ ಮಾಡಲು ಸರ್ಕಾರಿ ವೈದ್ಯಕೀಯ ಕಾಲೇಜು, ಸರ್ಕಾರಿ ಆಸ್ಪತ್ರೆ, ಖಾಸಗಿ ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು, ಸರ್ಕಾರದ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಹಂಚಿಕೆಗೆ ಲಭ್ಯ ಇರುವ ಹಾಸಿಗೆಗಳ ವಿವರವನ್ನೂ ಟ್ವೀಟ್‌ನಲ್ಲಿ ಹಂಚಿಕೊಂಡು, ಕೋವಿಡ್‌ ರೋಗಿಗಳಿಗೆ ಬಿಬಿಎಂಪಿ ಮೂಲಕ ಹಂಚಿಕೆ ಮಾಡುವ ದಂಧೆ ಬಯಲಿಗೆ ಎಳೆದ ಬಳಿಕ ವ್ಯವಸ್ಥೆ ಸುಧಾರಣೆ ಆಗಿದೆ ಎಂದು ತಿಳಿಸಿದ್ದರು. 

ಮಂಗಳವಾರ ಮಧ್ಯಾಹ್ನ 2,015 ಹಾಸಿಗೆಗಳು ಲಭ್ಯವಿದ್ದರೆ, ರಾತ್ರಿ ವೇಳೆಗೆ 1,504 ಹಾಸಿಗೆಗಳು ಮಾತ್ರ ಲಭ್ಯವಿತ್ತು. ಆದರೆ, ಸಂಸದರು, ತನ್ನ ದಾಳಿಯ ಬಳಿಕ ಎಲ್ಲ ಆಸ್ಪತ್ರೆಗಳಲ್ಲೂ ಹಾಸಿಗೆಗಳು ಲಭ್ಯವಿದೆ ಎಂದು ಪ್ರಚಾರ ಗಿಟ್ಟಿಸಿಕೊಂಡಿದ್ದರು. ಆದರೆ, ಅವರ ದಾಳಿಯಿಂದಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳು, ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದರು ಎಂಬ ದೂರುಗಳು ಕೇಳಿಬಂದಿದೆ.

ವಾರ್ ರೂಂಗಳಲ್ಲಿ ಆತಂಕ: ಸಂಸದ ತೇಜಸ್ವಿ ಸೂರ್ಯ ಕೋವಿಡ್ ಹಾಸಿಗೆ ಬ್ಲಾಕಿಂಗ್ ದಂಧೆಯ ಆರೋಪವನ್ನು ಯಾವುದೇ ಜನಪ್ರತಿನಿಧಿಗಳ, ಅಧಿಕಾರಿಗಳ ಮೇಲೆ ಹೊರಿಸದೆ ಕೋವಿಡ್ ವಾರ್ ರೂಂಗಳಲ್ಲಿ ಆಪರೇಟರ್ ಗಳು ಸೇರಿದಂತೆ ಮತ್ತಿತರೆ ಸೇವಾ ಕಾರ್ಯದಲ್ಲಿ ತೊಡಗಿದ್ದವರ ಮೇಲೆ ಹೊರಿಸಿದ್ದಾರೆಂದು ಬಿಬಿಎಂಪಿಯ ಎಲ್ಲ ವಾರ್ ರೂಂ ಸಿಬ್ಬಂದಿಗಳು, ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಬಹುತೇಕ ಮಂದಿ ಕೋವಿಡ್ ವಾರ್ ರೂಂನಲ್ಲಿ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಇಂತಹ ಸಂದರ್ಭದಲ್ಲೂ ನಾವು ಕಾರ್ಯನಿರ್ವಹಿಸುತ್ತಿದ್ದೇವೆಂದರೆ ಜನತೆಗೆ ನಮ್ಮಿಂದಾದ ಸೇವೆ ಮಾಡಬೇಕೆಂಬ ಏಕೈಕ ಉದ್ದೇಶವಷ್ಟೆ. ಇಲ್ಲಿ ನಮಗೆ ಯಾವ ವಿಶೇಷ ಅಧಿಕಾರವು ಇರುವುದಿಲ್ಲ. ನಮ್ಮ ಮೇಲ್ವಿಚಾರಕರು ಹೇಳಿದ್ದನ್ನು ಮಾಡಬೇಕಷ್ಟೆ. ಆದರೂ ಸಂಸದರು ಕೋವಿಡ್ ವಾರ್ ಸಿಬ್ಬಂದಿಗಳ ವಿರುದ್ಧ ಆರೋಪ ಮಾಡಿರುವುದು ತುಂಬಾ ಬೇಸರ ತರಿಸಿದೆ, ಇದೆಲ್ಲ ಪ್ರಚಾರಕ್ಕಾಗಿ ಮಾಡಿದ್ದಾಗಿದೆ ಎಂದು ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News