×
Ad

ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ್ದು ಆಕ್ಸಿಜನ್ ಕೊರತೆಯಿಂದಲ್ಲ: ಸಚಿವ ಸುರೇಶ್ ಕುಮಾರ್

Update: 2021-05-06 22:55 IST

ಚಾಮರಾಜನಗರ, ಮೇ 6: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳ ಹಿಂದೆ 24 ಗಂಟೆಯ ಅವಧಿಯಲ್ಲಿ 24 ಮಂದಿ ಸಾವನ್ನಪ್ಪಿದ್ದು ಆಕ್ಸಿಜನ್ ಕೊರತೆಯಿಂದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸುರೇಶ್ ಕುಮಾರ್ ಹೇಳಿದ್ದಾರೆ.

ಚಾಮರಾಜನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ತಾನು ಕೋವಿಡ್ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆ ಮತ್ತು ಮೆಡಿಕಲ್ ಕಾಲೇಜಿನ ಮುಖ್ಯಸ್ಥರು ಮತ್ತು ವೈದ್ಯರ ತಜ್ಞರೊಂದಿಗೆ ಚರ್ಚೆ ನಡೆಸಿದ ಬಳಿಕ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದರು.

ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ 24 ಮಂದಿಯಲ್ಲಿ 15 ಜನ ಕೋವಿಡ್, 5 ಜನ ಸಿಎಲ್ಎಸ್ ರೋಗಿಗಳು ಮೃತಪಟ್ಟಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಸಾನ್ನಪ್ಪಿದ್ದಾರೆ. ಯಾರೂ ಸಹ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿಲ್ಲ. ಮೃತರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

ಮಾಧ್ಯಮಗಳಲ್ಲಿ ಅಕ್ಸಿಜನ್ ಕೊರತೆಯಿಂದ ಸಾವು ಎಂಬ ಸುದ್ದಿ ಭಿತ್ತರವಾಗುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ. ಮಾದ್ಯಮದವರು ಸುದ್ದಿ ಭಿತ್ತರಿಸುವ ಮುನ್ನ ಪರಿಶೀಲಿಸಿ ವರದಿ ಮಾಡುವಂತೆ ಮಾಧ್ಯಮ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು.

ಸದ್ಯಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. 1900 ಲೀಟರ್ ಲಿಕ್ವಿಡ್ ಆಕ್ಸಿಜನ್ ಇದೆ. ಜೊತೆಗೆ 122 ಜಂಬೋ ಸಿಲಿಂಡರ್ ಆಕ್ಸಿಜನ್ ಇದೆ. ಮದ್ಯಾಹ್ನದ ವೇಳೆಗೆ ಇನ್ನೂ 150 ಸಿಲಿಂಡರ್ ಬರಲಿವೆ. ಜಿಲ್ಲಾಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಸಾವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯ ಆಯುಕ್ತರ ಜೊತೆ ಮಾತನಾಡಿದ್ದೇನೆ. ಸಾವಿನ ವಿಶ್ಲೇಷಣೆಗಾಗಿ ಅವರು ಪರಿಣಿತರ ತಂಡವನ್ನು ಚಾಮರಾಜನಗರಕ್ಕೆ ಕಳುಹಿಸಿಕೊಡುತ್ತಿದ್ದಾರೆ. ಈ ತಂಡ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಚಾಮರಾಜನಗರಕ್ಕೆ ಆಗಮಿಸಲಿದೆ ಎಂದರು.

ಪರಿಣಿತರ ತಂಡ ಸಂಭವಿಸುತ್ತಿರುವ ಸಾವುಗಳ ವಿಶ್ಲೇಷಣೆ ಮಾಡಿ, ಜಿಲ್ಲಾಸ್ಪತ್ರೆಯ ವೈದ್ಯರಿಗೆ ಮಾರ್ದರ್ಶನ, ಸಲಹೆ ಸೂಚನೆ ನೀಡಲಿದ್ದಾರೆ ಎಂದು ತಿಳಿಸಿದ ಸಚಿವ ಸುರೇಶ್ ಕುಮಾರ್, ಆಸ್ಪತ್ರೆಗಳಲ್ಲಿ ಇರುವ ವೈದ್ಯರ ಹಾಗೂ ನರ್ಸ್ ಗಳ ಕೊರತೆ ನೀಗಿಸಲು ರಾಜ್ಯದಲ್ಲಿ ನೇಮಕಾತಿ ಕಾರ್ಯ ಇಂದಿನಿಂದ ಆರಂಭವಾಗಲಿದೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News