ಕೊರೋನದ ನಡುವೆ ಸೇವಾ ಕಾರ್ಯಕ್ಕೆ ಕೋಮುಬಣ್ಣ ಹಚ್ಚುತ್ತಿರುವ ‘ಪೋಸ್ಟ್ ಕಾರ್ಡ್’: ವ್ಯಾಪಕ ಆಕ್ರೋಶ

Update: 2021-05-07 15:06 GMT

ಬೆಂಗಳೂರು, ಮೇ 7: ಕೋವಿಡ್ ಮಹಾಮಾರಿಯಿಂದ ತತ್ತರಿಸಿರುವ ಜನರ ನೆರವಿಗೆ ಧಾವಿಸುತ್ತಿರುವ ಸಂಘಟನೆಗಳ ಸೇವಾಕಾರ್ಯಕ್ಕೂ ಕೋಮುವಾದದ ಬಣ್ಣ ಹಚ್ಚಲು ‘ಪೋಸ್ಟ್ ಕಾರ್ಡ್’ ಫೇಸ್ಬುಕ್ ಪೇಜ್ ನಡೆಸುತ್ತಿರುವ ಪ್ರಯತ್ನ, ಅತ್ಯಂತ ಕೀಳುಮಟ್ಟದ, ನಾಚಿಕೆಗೇಡಿನ ಸಂಗತಿ ಎಂದು ಮರ್ಸಿ ಮಿಷನ್, ದಿ ಆಲ್‍ಮೈಟಿ ಫೌಂಡೇಶನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಬಿ.ಝೆಡ್.ಕೊರೋನ ವಾರಿಯರ್ಸ್ ಸೇರಿದಂತೆ ಇನ್ನಿತರ ಸಂಘ, ಸಂಸ್ಥೆಗಳು ಆಕ್ರೋಶ ಹೊರ ಹಾಕಿವೆ.

ಖಾಸಗಿ ಆಸ್ಪತ್ರೆಗಳೇ ಆ್ಯಂಬುಲೆನ್ಸ್ ಗಳಿಗೆ 25, 30, 35, 40 ಸಾವಿರ ರೂ.ಹೀಗೆ ಮನಸೋಇಚ್ಛೆ ದರಗಳನ್ನು ನಿಗದಿ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ಕೇವಲ ಬೆಂಗಳೂರು ಅಷ್ಟೇ ಅಲ್ಲ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಆನೇಕಲ್, ದಾವಣಗೆರೆ, ಕುಪ್ಪಂ ಸೇರಿದಂತೆ ಇನ್ನಿತರೆಡೆ ತೆರಳಿ ಉಚಿತವಾಗಿ ಕೋವಿಡ್ ಸೋಂಕಿತರ ಮೃತದೇಹಗಳ ಅಂತ್ಯಕ್ರಿಯೆಯನ್ನು ಅವರವರ ಧರ್ಮಗಳ ವಿಧಿವಿಧಾನದ ಮೂಲಕ ನೆರವೇರಿಸುತ್ತಿದ್ದೇವೆ ಎಂದು ಮರ್ಸಿ ಮಿಷನ್‍ನ ಸದಸ್ಯ ತನ್ವೀರ್ ಅಹ್ಮದ್ ತಿಳಿಸಿದ್ದಾರೆ.

ನಮ್ಮ ಸೇವೆಯನ್ನು ನೋಡಿ ಸ್ವಯಂಪ್ರೇರಿತವಾಗಿ ಹಲವಾರು ಜನ ಹಣಸಹಾಯ ಮಾಡಲು ಮುಂದೆ ಬಂದಿದ್ದಾರೆ. ಆದರೆ, ನಾವು ಯಾರ ಬಳಿಯೂ ಒಂದು ರೂ.ಗಳನ್ನು ಪಡೆದಿಲ್ಲ. ನಾವು ಏನು ಮಾಡುತ್ತಿದ್ದೇವೆ ಅನ್ನೋದನ್ನು ನಾವೇ ಹೇಳಿಕೊಳ್ಳುವ ಬದಲಾಗಿ, ನಾವು ಯಾವ ಯಾವ ಕುಟುಂಬಗಳಿಗೆ ನೆರವಾಗಿದ್ದೇವೋ ಅವರ ಬಳಿ ಹೋಗಿ ಮೊದಲು ಪೋಸ್ಟ್ ಕಾರ್ಡ್ ನವರು ಮಾಹಿತಿ ಪಡೆದುಕೊಳ್ಳಲಿ. ನಮ್ಮ ವಿರುದ್ಧ ಆರೋಪಗಳನ್ನು ಮಾಡುವವರ ಕುಟುಂಬ ಸದಸ್ಯರು ಯಾರಾದರೂ ನಿಧನರಾದರೆ ಅವರಿಗೂ ಉಚಿತವಾಗಿ ಅಂತ್ಯಕ್ರಿಯೆ ಮಾಡುತ್ತೇವೆ. ಈ ಬಗ್ಗೆ ಅವರಿಗೆ ಯಾವ ಅನುಮಾನವು ಬೇಡ ಎಂದು ಅವರು ಹೇಳಿದರು.

ಮುಸ್ಲಿಮರ ಪೈಕಿ ಒಬ್ಬರನ್ನು ದಫನ್ ಮಾಡಲು 6000 ರೂ., ಕ್ರೈಸ್ತರ ಅಂತ್ಯಕ್ರಿಯೆಗೆ 15 ಸಾವಿರ ರೂ., ಹಿಂದೂಗಳಲ್ಲಿ ಅವರವರ ಜಾತಿಯ ಪ್ರಕಾರವಾಗಿ ಅಂತ್ಯಕ್ರಿಯೆ ನಡೆಸಲು 10 ರಿಂದ 15 ಸಾವಿರ ರೂ.ಗಳವರೆಗೆ ಖರ್ಚಾಗುತ್ತದೆ. ಎರಡೆರಡು ದಿನ ಮೃತದೇಹಗಳನ್ನು ಶವಾಗಾರಗಳಲ್ಲಿ ಇರಿಸಲಾಗಿರುತ್ತದೆ. ಸ್ವತಃ ಕುಟುಂಬ ಸದಸ್ಯರು ಬಂದು ಮೃತದೇಹಗಳನ್ನು ಸ್ವೀಕರಿಸಲು ಸಿದ್ಧರಿಲ್ಲದ ಪರಿಸ್ಥಿತಿಯನ್ನು ನಾವು ನೋಡಿದ್ದೇವೆ. ಮೃತದೇಹಗಳನ್ನು ಸಾಗಿಸಲು ಖಾಸಗಿ ಆ್ಯಂಬುಲೆನ್ಸ‍ ಗಳು ಲೂಟಿಗೆ ಇಳಿದಿವೆ. ಅದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲದ ಈ ಸರಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಏನಾದರೂ ಇದೆಯೇ? ಆದರೆ, ನಮ್ಮ ಸಂಘಟನೆ ವತಿಯಿಂದ ಉಚಿತವಾಗಿ ಆ್ಯಂಬುಲೆನ್ಸ್ ಸೇವೆಯ ಜೊತೆಗೆ ಅಂತ್ಯಕ್ರಿಯೆಗೆ ಅಗತ್ಯವಿರುವ ಎಲ್ಲವನ್ನು ನಾವೇ ಒದಗಿಸಿಕೊಳ್ಳುತ್ತಿದ್ದೇವೆ ಎಂದು ತನ್ವೀರ್ ಅಹ್ಮದ್ ತಿಳಿಸಿದರು.

ದಿ ಆಲ್ ಮೈಟಿ ಫೌಂಡೇಶನ್ ಅಧ್ಯಕ್ಷ ಸೈಯದ್ ರಿಸಾಲತ್ ಝಾ ಟಫ್ಫು ಮಾತನಾಡಿ, 'ಪೋಸ್ಟ್ ಕಾರ್ಡ್' ಮಾಡುವ ಆರೋಪಗಳಿಗೆಲ್ಲ ನಾವು ಉತ್ತರ ಕೊಡುವ ಅಗತ್ಯವಿಲ್ಲ. ಆನೆ ನಡೆಯುತ್ತಿದ್ದರೆ ನಾಯಿಗಳು ಬೊಗಳುವುದು ಸಾಮಾನ್ಯ. ನಾವು ನಮ್ಮ ಖರ್ಚು ವೆಚ್ಚಗಳನ್ನು ತೋರಿಸಿ ಹೆಸರುಗಳಿಸುವ ಅಗತ್ಯವಿಲ್ಲ. ಆ್ಯಂಬುಲೆನ್ಸ್ ನಮ್ಮದು, ಮೃತದೇಹಗಳನ್ನು ತೆಗೆದುಕೊಂಡು ಹೋಗಿ ಗೌರವಯುತವಾಗಿ, ಅವರ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಸುವುದಷ್ಟೇ ನಮ್ಮ ಆದ್ಯತೆ ಎಂದರು.

ನಾವು ಯಾರ ಬಳಿಯೂ ಐದು ರೂಪಾಯಿ ಚಂದಾ ಪಡೆದಿಲ್ಲ. ಈವರೆಗೆ ನಾವು ಜಾತಿ, ಧರ್ಮ ಬೇಧವಿಲ್ಲದೆ ಸುಮಾರು 2 ಸಾವಿರ ಮೃತದೇಹಗಳ ಅಂತ್ಯಕ್ರಿಯೆ ನಡೆಸಿದ್ದೇವೆ. ನಮ್ಮ ಸೇವಾ ಕಾರ್ಯದ ಬಗ್ಗೆ ಪ್ರಶ್ನೆ ಮಾಡುವವರಿಗೆ ಈಗ ಅವರ ಸಮಾಜದವರೇ ಉತ್ತರ ಕೊಡುತ್ತಾರೆ. ಬಿಜೆಪಿ, ಸಂಘಪರಿವಾರ ಹಾಗೂ ಅದರ ಅಂಗ ಸಂಸ್ಥೆಗಳಿಗೆ ಮಾತನಾಡಲು ಯಾವ ವಿಷಯವು ಉಳಿದಿಲ್ಲ. ಹಿಂದೂ, ಮುಸ್ಲಿಮ್, ಪಾಕಿಸ್ತಾನ, ಚೀನಾ ಎಲ್ಲ ಮುಗಿದಿದೆ. ಆದುದರಿಂದ, ಈಗ ಅಂತ್ಯಕ್ರಿಯೆಯಲ್ಲಿ ಹಗರಣ ಎಂಬ ಷಡ್ಯಂತ್ರ ರೂಪಿಸಲು ಹೊರಟಿದ್ದಾರೆ ಎಂದು ಅವರು ಕಿಡಿಗಾರಿದರು.

ಕೊರೋನ ಭೀತಿಯಿಂದ ಆರೆಸೆಸ್ಸ್, ಬಜರಂಗದಳ, ವಿಶ್ವಹಿಂದೂಪರಿಷತ್, ಶ್ರೀರಾಮಸೇನೆಯವರು ತಮ್ಮ ತಮ್ಮ ಮನೆಗಳಲ್ಲಿ ಕೂತಿದ್ದಾರೆ. ಅವರು ಜನರ ಮಧ್ಯೆ ಬಂದು ಕೆಲಸ ಮಾಡಲಿ. ನಮಗೆ ಏನು ಶೋಕಿ ಇಲ್ಲ. ನೀವು ಬರುತ್ತಿಲ್ಲ ಎಂದು ನಾವು ಜನರ ಮಧ್ಯೆ ಬಂದು ಕೆಲಸ ಮಾಡುತ್ತಿದ್ದೇವೆ. ನಿಮ್ಮಲ್ಲಿ ಧೈರ್ಯ ಇಲ್ಲ. ನೀವು ಬೀದಿಗೆ ಬನ್ನಿ, ನಾವು ನಮ್ಮ ಕುಟುಂದ ಜೊತೆ ಇರುತ್ತೇವೆ ಎಂದರು.

ಮಾನವೀಯತೆಯ ದೃಷ್ಟಿಯಿಂದ ನಾವು ಸೇವೆ ಮಾಡುತ್ತಿದ್ದೇವೆ. ಇವರ ಅಪಪ್ರಚಾರಗಳಿಗೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲೋ ಕೂತು ಪೋಸ್ಟ್ ಗಳನ್ನು ಮಾಡೋದಲ್ಲ, ನೇರಾನೇರಾ ಮುಖಾಮುಖಿ ಚರ್ಚೆಗೆ ಬರಲಿ. ಇವರ ಎಲ್ಲ ಆಪಾದನೆಗಳಿಗೂ ತಕ್ಕ ಉತ್ತರ ಕೊಡುವ ಸಾಮರ್ಥ್ಯ ನಮಗಿದೆ. ಸುಮಾರು 2 ಸಾವಿರ ಕೋವಿಡ್ ರೋಗಿಗಳ ಅಂತ್ಯಕ್ರಿಯೆಯನ್ನು ನಾವು ನೆರವೇರಿಸಿದ್ದೇವೆ. ಈ ಸೇವಾ ಕಾರ್ಯಕ್ಕೆ ನಮ್ಮನ್ನು ನಿಯೋಜಿಸಿದ್ದು ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಎಂದು ಅವರು ಹೇಳಿದರು.

ಮೃತದೇಹಗಳನ್ನು ಸಾಗಿಸಲು ಖಾಸಗಿ ಆ್ಯಂಬುಲೆನ್ಸ್ ‍ಗಳು ಲೂಟಿಗೆ ಇಳಿದಿವೆ. ಅದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲದ ಈ ಸರಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಏನಾದರೂ ಇದೆಯೇ? ಆದರೆ, ನಮ್ಮ ಸಂಘಟನೆ ವತಿಯಿಂದ ಉಚಿತವಾಗಿ ಆ್ಯಂಬುಲೆನ್ಸ್ ಸೇವೆಯ ಜೊತೆಗೆ ಅಂತ್ಯಕ್ರಿಯೆಗೆ ಅಗತ್ಯವಿರುವ ಎಲ್ಲವನ್ನು ನಾವೇ ಒದಗಿಸಿಕೊಳ್ಳುತ್ತಿದ್ದೇವೆ.

ತನ್ವೀರ್ ಅಹ್ಮದ್, ಮರ್ಸಿ ಮಿಷನ್ ಸದಸ್ಯ

ಪೋಸ್ಟ್ ಕಾರ್ಡ್ ನವರೇ ಉತ್ತರ ಕೊಡಿ

ಸರಕಾರ ಆಕ್ಸಿಜನ್ ಸಿಲಿಂಡರ್ ಗಳನ್ನು ತುಂಬುವಂತಹ ಕೇಂದ್ರಗಳನ್ನು ಮುಚ್ಚುತ್ತಿರುವುದೇಕೆ? ಜನ ಸಾಯಲಿ ಅಂತಾನಾ? ಈ ಬಗ್ಗೆ ಪೋಸ್ಟ್ ಕಾರ್ಡ್ ನವರು ಉತ್ತರ ಕೊಡಲಿ. ಕೋವಿಡ್ ಎರಡನೆ ಅಲೆ ಬರೋದು ಗೊತ್ತಿದ್ದರೂ ಚುನಾವಣಾ ಪ್ರಚಾರ ರ್‍ಯಾಲಿಗಳನ್ನು ನಡೆಸಿದ್ದು ಯಾಕೇ? ಜನರನ್ನು ಸಂಕಷ್ಟದ ಸುಳಿಗೆ ತಳ್ಳಿದ್ದು ಯಾರು? ಕೊರೋನ ಮಹಾಮಾರಿ ಸಂದರ್ಭದಲ್ಲಿ ನಿಮ್ಮ ಸಂಘಟನೆಗಳು ಏನು ಸೇವೆಗಳನ್ನು ಮಾಡಿವೆ ಅನ್ನೋದನ್ನು ಜನರಿಗೆ ತಿಳಿಸಲಿ.

ಸೈಯದ್ ರಿಸಾಲತ್ ಝಾ, ದಿ ಆಲ್‍ಮೈಟಿ ಫೌಂಡೇಶನ್ ಅಧ್ಯಕ್ಷ

ನಮ್ಮ ಸಂಘಟನೆಯ ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ನಾವು ಕೋವಿಡ್‍ನಿಂದ ಮೃತಪಡುವಂತಹವರಿಗೆ ಅವರವರ ಜಾತಿ, ಧರ್ಮದ ಪ್ರಕಾರ ಉಚಿತವಾಗಿ ಅಂತ್ಯಕ್ರಿಯೆಯನ್ನು ನೆರವೇರಿಸಿಕೊಂಡು ಬರುತ್ತಿದ್ದೇವೆ. ಮೃತರ ಕುಟುಂಬದಿಂದ 35 ಸಾವಿರ ರೂ.ವರೆಗೆ ಡೀಲ್ ಕುದುರಿಸಿಕೊಳ್ಳುತ್ತಿದ್ದಾರೆ ಎಂದು ನಮ್ಮ ಸಂಘಟನೆಯ ಕಾರ್ಯಕರ್ತರ ಭಾವಚಿತ್ರಗಳನ್ನು ಬಳಸಿಕೊಂಡು ಅಪಪ್ರಚಾರ ಮಾಡುತ್ತಿರುವ ಈ ‘ಪೋಸ್ಟ್ ಕಾರ್ಡ್’ ಅವರ ವಿರುದ್ಧ ಕಾನೂನು ಹೋರಾಟವನ್ನು ಕೈಗೊಳ್ಳುತ್ತಿದ್ದೇವೆ.

ಕಫೀಲ್ ಅಹ್ಮದ್, ಪಿಎಫ್‍ಐ, ಚಾಮರಾಜನಗರ ಜಿಲ್ಲಾಧ್ಯಕ್ಷ

Writer - -ಅಮ್ಜದ್ ಖಾನ್ ಎಂ.

contributor

Editor - -ಅಮ್ಜದ್ ಖಾನ್ ಎಂ.

contributor

Similar News