ಕರ್ನಾಟಕಕ್ಕೆ 2.62 ಲಕ್ಷ ವಯಲ್ಸ್ ಹಂಚಿಕೆ: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

Update: 2021-05-07 17:24 GMT

ಹೊಸದಿಲ್ಲಿ, ಮೇ 7: ಕೇಂದ್ರ ಸರಕಾರವು ಬೇರೆ ಬೇರೆ ರಾಜ್ಯಗಳಿಗೆ ಮುಂದಿನ ವಾರದ ಬಳಕೆಗಾಗಿ 19.2 ಲಕ್ಷ ರೆಮ್‍ಡೆಸಿವಿರ್ 'ವಯಲ್ಸ್'ಗಳನ್ನು ಹಂಚಿಕೆ ಮಾಡಿದ್ದು ಕರ್ನಾಟಕ ರಾಜ್ಯಕ್ಕೆ 2,62,346 ವಯಲ್ಸ್ ಒದಗಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಎ.21 ರಿಂದ ಮೇ 9ರವರೆಗಿನ ಅವಧಿಯ ಬಳಕೆಗಾಗಿ ಬೇರೆ ಬೇರೆ ರಾಜ್ಯಗಳಿಗೆ ಒಟ್ಟು 33.8 ಲಕ್ಷ ವಯಲ್ಸ್ ರೆಮ್‍ಡೆಸಿವಿರ್ ಚುಚ್ಚುಮದ್ದು ಹಂಚಲಾಗಿತ್ತು, ಈಗ ಮೇ 10 ರಿಂದ 16ರವರೆಗಿನ ಬಳಕೆಗಾಗಿ 19.2 ಲಕ್ಷ ವಯಲ್ಸ್ ಹಂಚಲಾಗಿದೆ, ಹಾಗಾಗಿ ಇದುವರೆಗೆ ವಿವಿಧ ರಾಜ್ಯಗಳಿಗೆ ಒಟ್ಟು 53 ಲಕ್ಷ ವಯಲ್ಸ್ ರೆಮ್‍ಡೆಸಿವಿರ್ ಹಂಚಿಕೆ ಮಾಡಿದಂತಾಗಿದೆ, ರಾಜ್ಯಕ್ಕೆ ಇದುವರೆಗೆ 5.75 ಲಕ್ಷ ವಯಲ್ಸ್ ಹಂಚಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇವೆಲ್ಲ ಕೇಂದ್ರ ಸರಕಾರದ ಕೋಟಾದಡಿ(ಸರಕಾರಿ ಹಂಚಿಕೆ ಶೇ.70 ಮತ್ತು ಕಂಪನಿಗಳ ವಿವೇಚನೆಗೆ ಬಿಟ್ಟದ್ದು ಶೇ.30) ರಾಜ್ಯಗಳಿಗೆ ಹಂಚಿಕೆಯಾದ ರೆಮ್‍ಡೆಸಿವಿರ್. ಇನ್ನು ಕಂಪನಿಗಳು ಕೂಡಾ ತಮ್ಮ ಕೋಟಾದಡಿ ಲಭ್ಯವಾದ ಸುಮಾರು 10 ಲಕ್ಷ ವಯಲ್ಸ್ ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡಿವೆ. ಅಮೆರಿಕದ ನೆರವಿನಡಿ 1.25 ಲಕ್ಷ ರೆಮ್‍ಡೆಸಿವಿರ್ ವಯಲ್ಸ್ ಭಾರತಕ್ಕೆ ಬಂದಿದೆ. ಸದ್ಯ ಲಭ್ಯವಿರುವ ರೆಮ್‍ಡೆಸಿವಿರ್ ಚುಚ್ಚುಮದ್ದನ್ನು ಪಾರದರ್ಶಕವಾಗಿ ವಿವಿಧ ರಾಜ್ಯಗಳಿಗೆ ಹಂಚಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದು ಹೇಗೆಂದರೆ ಹಾಗೆ ಬಳಸುವ ಮದ್ದಲ್ಲ. ಯಾವ ಪ್ರಕರಣಗಳಲ್ಲಿ ಇದನ್ನು ಬಳಸಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. “ಯಾವುದಕ್ಕೂ ಇರಲಿ” ಎಂದು ಜನರು ಮನೆಯಲ್ಲಿ ಇದನ್ನು ಸಂಗ್ರಹಿಸಿಡಬಾರದು. ಇದರಿಂದ ನಿಜಕ್ಕೂ ಇದರ ಅಗತ್ಯ ಇರುವವರಿಗೆ ತೊಂದರೆಯಾಗುತ್ತದೆ. ಇದರ ನ್ಯಾಯಯುತ ಬಳಕೆಯಾಗಬೇಕು. ಇದರ ಕಾಳಸಂತೆಯಾಗದಂತೆ ಕಠಿಣ ಕ್ರಮ ಜರುಗಿಸುವಂತೆ ರಾಜ್ಯ ಸರಕಾರಗಳಿಗೆ ಮೇಲಿಂದ ಮೇಲೆ ತಿಳಿಸಲಾಗಿದೆ ಎಂದು ಸದಾನಂದಗೌಡ ಹೇಳಿದ್ದಾರೆ.

ಸ್ವದೇಶಿಯವಾಗಿಯೂ ರೆಮ್‍ಡೆಸಿವಿರ್ ಉತ್ಪಾದನೆ ಹೆಚ್ಚಿಸಲಾಗುತ್ತಿದೆ. ಅಮೆರಿಕದ ಗಿಲೀಡ್ ಸೈಯನ್ಸಸ್ ಕಂಪನಿಯು ರೆಮ್‍ಡೆಸಿವಿರ್ ಚುಚ್ಚುಮದ್ದಿನ ಪೆಟೆಂಟ್ ಹೊಂದಿದ್ದು ಭಾರತದ 7 ಔಷಧ ಕಂಪನಿಗಳು (ಸಿಪ್ಲಾ, ಡಾ.ರೆಡ್ಡಿಸ್ ಲ್ಯಾಬ್, ಹೆಟೆರೊ, ಜುಬಿಲೆಂಟ್ ಫಾರ್ಮಾ, ಮೈಲಾನ್, ಸಿಂಜಿನ್ ಮತ್ತು ಜಿಡಸ್ ಕ್ಯಾಡಿಲಾ) ಈ ಔಷಧದ ಉತ್ಪಾದನಾ ಲೈಸನ್ಸ್ ಪಡೆದಿವೆ. ಬೇಡಿಕೆ ತೀವ್ರ ಹೆಚ್ಚಾದ ಹಿನ್ನಲೆಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಈ ಕಂಪನಿಗಳ ಜೊತೆ ನಿರಂತರ ಮಾತುಕತೆ ನಡೆಸಿದ್ದೇವೆ. ಇದರ ಫಲವಾಗಿ ಮಾಸಿಕ ಉತ್ಪಾದನಾ ಸಾಮರ್ಥ್ಯ 38 ಲಕ್ಷ ‘ವಯಲ್ಸ್’ನಿಂದ 1.05 ಕೋಟಿಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿದಿನದ ಉತ್ಪಾದನೆ 3.5 ಲಕ್ಷ ವಯಲ್ಸ್ ತಲುಪಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ರೆಮ್‍ಡೆಸಿವಿರ್ ಬೇಡಿಕೆ ಮತ್ತು ಪೂರೈಕೆ ಮಧ್ಯೆ ಸಮತೋಲನ ಉಂಟಾಗಲಿದೆ. ಉಳಿದಂತೆ, ಕೋವಿಡ್ ಚಿಕಿತ್ಸೆಯಲ್ಲಿ ಬಳಸಲಾಗುವ ಪ್ರೊಟೊಕಾಲ್ ಮತ್ತು ನಾನ್-ಪ್ರೊಟೊಕಾಲ್ ಔಷಧಗಳೆರಡೂ ದೇಶದಲ್ಲಿ ವಿಫುಲವಾಗಿ ಲಭ್ಯವಿವೆ. ಆದಾಗ್ಯೂ ಅವುಗಳ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಕಂಪನಿಗಳಿಗೆ ಸೂಚಿಸಲಾಗಿದೆ ಎಂದು ಸದಾನಂದಗೌಡ ತಿಳಿಸಿದರು.

ಕರ್ನಾಟಕದ ರೆಮ್‍ಡೆಸಿವಿರ್ ಹಂಚಿಕೆಯನ್ನು ಮೇ 1ರಿಂದ 16ರವರೆಗೆ 2,62,346ಕ್ಕೆ ಹೆಚ್ಚಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಮನವಿಗೆ ಸ್ಪಂದಿಸಿ ಅಗತ್ಯ ಔಷಧ ಪೂರೈಸುತ್ತಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಧನ್ಯವಾದಗಳು.

-ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News