ಜೆಡಿಎಸ್ ಶಾಸಕರ ವಿರುದ್ಧ ಸಂಸದೆ ಸುಮಲತಾ ಅಂಬರೀಷ್ ಕೆಂಡಾಮಂಡಲ

Update: 2021-05-07 17:41 GMT

ಮಂಡ್ಯ, ಮೇ7:  ಬೇರೆ ಟೈಮ್‍ನಲ್ಲಿ ರಾಜಕಾರಣ ಮಾಡಲಿ, ಇಂತಹ ಟೈಮ್‍ನಲ್ಲೂ ಮಾಡ್ತಾ ಕೂತರೆ ನನಗೆ ಒಂಥರ ರಕ್ತ ಕುದಿತಾ ಇದೆ ಇದನ್ನು ನೋಡಿ’ ಎಂದು ಸಂಸದೆ ಸುಮಲತಾ ಅಂಬರೀಷ್ ಜೆಡಿಎಸ್ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಜೆಡಿಎಸ್ ಶಾಸಕರ ಟೀಕೆಗಳಿಂದ ಬೇಸತ್ತ ಸುಮಲತಾ ಸಭೆಯಿಂದ ಹೊರಬಂದು ತಮ್ಮ ಆಕ್ರೋಶ ಹೊರ ಹಾಕಿದರು.

ಇವರು ಎಷ್ಟು ಬಾರಿ ಗೆದ್ದು ಬಂದಿದ್ದಾರೆ, ಸಚಿವರಾಗಿದ್ದಾರೆ. ನನಗಿಂತ ರಾಜಕಾರಣದಲ್ಲಿ ಸೀನಿಯರ್ಸ್ ಆಗಿದ್ದಾರೆ. ಜನರ ವಿಶ್ವಾಸಗಳಿಸಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ, ಜನರಿಗಾಗಿ ಏನೆ ಮಾಡ್ತಿದ್ದಾರೆ. ಇಲ್ಲೇನು ಡ್ರಾಮಾ ನಡೀತಿದೆಯಾ ಎಂದು ಅವರು ಕಿಡಿಕಾರಿದರು.

ಇದು ಪಕ್ಕಾ ರಾಜಕಾರಣವಲ್ಲದೆ ಬೇರೇನು ಅಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ವರ್ತನೆ ರಾಜಕಾರಣವಲ್ಲದೆ ಇನ್ನೇನು. ನಾನು ಇಂಡಿಪೆಂಡೆಂಟ್ ಎಂಪಿ ಆಗಿ ಸ್ವಂತ ಹಣದಲ್ಲಿ ಆಕ್ಸಿಜನ್ ಕೊಡುತ್ತಿದ್ದೇನೆ. ನೀವೇನು ಮಾಡ್ತಾ ಇದ್ದೀರಿ ಎಂದು ಜನ ಕೇಳುತ್ತಿದ್ದಾರೆ, ಅದಕ್ಕೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದರು.

ನನಗೆ ಆಕ್ಸಿಜನ್ ಎಲ್ಲಿ ಸಿಗುತ್ತೆ ಎಂದು ಕೇಳುತ್ತಾರಲ್ಲ, ಅವರ ಎಂಪಿ, ಮಾಜಿ ಪ್ರಧಾನಿ ಇಲ್ವ(ದೇವೇಗೌಡ), ಮೋದಿ ಜತೆ ಮಾತನಾಡುತ್ತಾರೆ, ಅಷ್ಟೊಂದು ಪ್ರಭಾವ ಅವರಿಗಿದೆ. ಅವರನ್ನು ಪ್ರಶ್ನೆ ಕೇಳಬಹುದಲ್ಲ. ಸುಮ್ಮಸುಮ್ಮನೆ ಪ್ರಚಾರಕ್ಕೋಸ್ಕರ, ಜನರ ನಂಬಿಸಿಕ್ಕೋಸ್ಕರ ಈ ರೀತಿ ನನ್ನ ಮೇಲೆ ಕೂಗಾಡುತ್ತಿದ್ದಾರೆ ಎಂದು ಅವರು ತಿರುಗೇಟು ನೀಡಿದರು.

ಈ ರೀತಿಯ ರಾಜಕಾರಣ ನನಗೆ ಇಷ್ಟವಿಲ್ಲ. ಇಂತಹ ರಾಜಕಾರಣ ಬೇಕಾಗಿಯೂ ಇಲ್ಲ. ಜನಕ್ಕೆ ಏನು ವಾಗ್ದಾನ ಕೊಟಿದ್ದೇನೆ ಅದನ್ನು ಈಡೇರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ. ಬೇರೆಯವರ ಜತೆ ಫೋಟೋಗೆ ಪೋಜು ಕೊಡೋದು, ಚಪ್ಪಾಳೆ ಪಡೆದುಕೊಳ್ಳುವುದು ನನಗಿಷ್ಟವಿಲ್ಲ ಎಂದು ಅವರು ಹೇಳಿದರು.

ಇಂತಹ ಸಂದರ್ಭದಲ್ಲಿ ನಾನು ಎಂಪಿಯಾಗಿ ಮಾಡುವ ಕೆಲಸವಲ್ಲ, ಮಾನವೀಯತೆಯಿಂದ ಕೆಲಸ ಮಾಡಬೇಕು. ತೋರ್ಪಡಿಕೆ ರಾಜಕಾರಣ ನನಗಿಷ್ಟವಿಲ್ಲ. ಕೆಡಿಪಿ ಸಭೆಗೆ ಬರಲು ಬೇಜಾರುತ್ತಿದೆ. ಈ ಕೆಲಸವನ್ನು ದೂರವಾಣಿ ಕರೆ ಮೂಲಕವೇ ಮಾಡಬಹುದು. ಈ ಸಂದರ್ಭ ಲಾಕ್‍ಡೌನ್ ಅಗತ್ಯವಿದೆ. ಏಕೆಂದರೆ ಜೀವನಕ್ಕಿಂತ ಜನರ ಜೀವ ಮುಖ್ಯ ಎಂದು ಸುಮಲತಾ ಪ್ರತಿಕ್ರಿಯಿಸಿದರು.

ಇದಕ್ಕೂ ಮುನ್ನ ಸಭೆಯಲ್ಲಿ ಜೆಡಿಎಸ್ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಡಾ.ಅನ್ನದಾನಿ, ಕೆ.ಸುರೇಶ್‍ಗೌಡ ಅವರು ಸಂಸದೆ ಸುಮಲತಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕೋವಿಡ್ ನಿರ್ವಹಣೆ ಕುರಿತ ವಿಚಾರದಲ್ಲಿ ತೀವ್ರ ಟೀಕಾ ಪ್ರಹಾರ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News