ʼಮುಂಬೈ ಮಾದರಿʼಗೆ ಸುಪ್ರೀಂ ಪ್ರಶಂಸೆ: ಕೋವಿಡ್‌ ಎರಡನೇ ಅಲೆಯನ್ನು ಮುಂಬೈ ನಿಗ್ರಹಿಸಿದ್ದು ಹೇಗೆ?

Update: 2021-05-08 14:30 GMT

ಮುಂಬೈ: ಕೊರೋನ ವೈರಸ್ ಸಮಸ್ಯೆಯ ತೀವ್ರತೆ ವಿಚಾರದಲ್ಲಿ  ಪ್ರಾಮಾಣಿಕತೆಯಿದ್ದಲ್ಲಿ ಇತರ ನಗರಗಳು ಮತ್ತು ರಾಜ್ಯಗಳಲ್ಲಿಯೂ ʼಮುಂಬೈ ಮಾದರಿ' ಸಫಲವಾಗಬಹುದು ಎಂದು ಒಂದು ಕಾಲದಲ್ಲಿ ಮುಂಬೈಯಲ್ಲಿ ಏರುಗತಿಯಲ್ಲಿದ್ದ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಸಿ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಹೇಳಿದ್ದಾರೆ.

"ಕೇವಲ ಮಹಾರಾಷ್ಟ್ರದಲ್ಲಿ ಮಾತ್ರ ಏಕೆ ಕೋವಿಡ್ ಇದೆಯೆಂದು ಭಾರತ ಸರಕಾರದ ನನ್ನ ಸಹೋದ್ಯೋಗಿಗಳಿಂದ ಎರಡು ತಿಂಗಳ ಹಿಂದೆ ನನಗೆ ಕರೆಗಳು ಬರುತ್ತಿದ್ದವು. ಅವರು ನಮ್ಮನ್ನು  ಹಾಸ್ಯ ಮಾಡುತ್ತಿದ್ದರು. ಯಾರಾದರೂ ನಮ್ಮನ್ನು ಅಪಹಾಸ್ಯ ಮಾಡುತ್ತಿದ್ದರೆ ನಮ್ಮ ಮಾದರಿಯನ್ನು ಅವರೊಂದಿಗೆ ಹೇಗೆ ಹಂಚಿಕೊಳ್ಳಲಿ? ಇಂತಹ ವಿಪತ್ತು ಬಂದೆರಗಿದಾಗ, ಕಲಿಯಲು ಅಲ್ಲಿ ಸಮಯವಿಲ್ಲ" ಎಂದು ಅವರು ಹೇಳಿದರು.

ಮುಂಬೈ ಮಾದರಿಯಿಂದ ಕಲಿತುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ಕೆಲವೇ ಗಂಟೆಗಳಲ್ಲಿ ತಾವು ದಿಲ್ಲಿ ಸರಕಾರ ಮತ್ತು ಕೇಂದ್ರದ  ಅಧಿಕಾರಿಗಳ ಜತೆ ಸಭೆಯಲ್ಲಿ ಬುಧವಾರ ರಾತ್ರಿ ಭಾಗವಹಿಸಿದ್ದಾಗಿ ಅವರು ಹೇಳಿದರು.

"ಯಾವುದೇ ಆಸ್ಪತ್ರೆಗೆ ಹೆಚ್ಚು ಬೆಡ್ ಸೇರಿಸುವಂತೆ ಒತ್ತಡ ಹೇರಬಾರದು. ಆಸ್ಪತ್ರೆಗಳು ಬಲವಂತದ ಕ್ರಮದಿಂದ ಆಕ್ಸಿಜನ್ ಬೆಡ್‍ಗಳ ಸಂಖ್ಯೆಯನ್ನು ದಿಢೀರ್ ಆಗಿ ಏರಿಕೆ ಮಾಡಿರುವುದರಿಂದ ಹಾಗೂ ಅದಕ್ಕೆ ತಕ್ಕಂತೆ ಆಕ್ಸಿಜನ್ ಶೇಖರಣೆ ಇಲ್ಲದೇ ಇರುವುದರಿಂದ ಎಸ್‍ಒಎಸ್ ಕರೆಗಳು ಬರುತ್ತಿವೆ ಎಂದು ಹೇಳಿದೆ" ಎಂದು ಅವರು ವಿವರಿಸಿದರು.

ಮುಂಬೈಯ ಆಕ್ಸಿಜನ್ ಸಮಸ್ಯೆ ಈಗ ʼಇತಿಹಾಸ' ಎಂದು ಹೇಳಿದ ಅವರು ಲಭ್ಯ  ಆಕ್ಸಿಜನ್ ಅನ್ನು ಸಮರ್ಥವಾಗಿ ಬಳಸಿರುವುದು, ವಿತರಣೆ ಹಾಗೂ ಹೆಚ್ಚುವರಿ ಸ್ಟಾಕ್ ಇಟ್ಟುಕೊಂಡಿರುವುದು ಹಾಗೂ ತನ್ನ ಎಲ್ಲಾ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಬಿಎಂಸಿಗಿದ್ದ ಸಾಮರ್ಥ್ಯದಿಂದ ಇದೆಲ್ಲಾ ಸಾಧ್ಯವಾಯಿತು ಎಂದು ಅವರು ಹೇಳಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ  ಅವರನ್ನೂ ಶ್ಲಾಘಿಸಿದ ಚಾಹಲ್, ಅವರು  ಯಾವುದೇ ಕ್ರಮ ಕೈಗೊಳ್ಳಲು ನಮಗೆ ಸ್ವಾತಂತ್ರ್ಯ ನೀಡಿದರು, ಈ ನಿಟ್ಟಿನಲ್ಲಿ ನಾನು ಅದೃಷ್ಟವಂತ, ನಾನು  ಯಾವುದೇ ನಿರ್ಧಾರ ಕೈಗೊಳ್ಳಬಹುದಾಗಿತ್ತು ಆದರೆ ಇಂತಹ ಒಂದು ಸ್ವಾತಂತ್ರ್ಯ ದೇಶದಲ್ಲಿರುವ ನನ್ನ ಇತರ ಸಹೋದ್ಯೋಗಿಗಳಿಗಿಲ್ಲ" ಎಂದು ಅವರು ಹೇಳಿದರು.

ವಾರ್ಡ್ ವಾರ್ ರೂಮ್, ಡ್ಯಾಶ್ ಬೋರ್ಡ್ ಫಾರ್ ಬೆಡ್ಸ್ ,  ಲ್ಯಾಬ್‍ಗಳು, ಕೋವಿಡ್ ರೋಗಿಗಳಿಗೆ ಕೋವಿಡ್ ವರದಿಗಳನ್ನು ನೀಡುವುದನ್ನು ನಿಷೇಧಿಸಿದ್ದು ಹಾಗೂ ಮೊದಲ ಅಲೆ ಕಡಿಮೆಯಾದ ನಂತರ ಆಗ ಇದ್ದ ಜಂಬೋ ಕೋವಿಡ್ ಕೇಂದ್ರಗಳನ್ನು ಹಾಗೆಯೇ ಇರಿಸಿದ್ದು ಸಹಾಯಕವಾಯಿತು ಎಂದು ಕಳೆದ ವರ್ಷದ ಮೇ ತಿಂಗಳಲ್ಲಿ ಬಿಎಂಸಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದ ಚಾಹಲ್ ತಿಳಿಸಿದರು.

ಮುಂಬೈ ಈಗಾಗಲೇ ಮೂರನೇ ಅಲೆಗೆ ಸಿದ್ಧತೆ ಮಾಡಿಕೊಂಡಿದೆ ಎಂದೂ ಅವರು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಇಳಿಕೆಯಾಗುತ್ತಿರುವ ಕೋವಿಡ್‌ ಪ್ರಕರಣಗಳ ಕುರಿತು ಮಾತನಾಡಿದ ಶಿವಸೇನೆ ನಾಯಕಿ ಹಾಗೂ ನಟಿ ಊರ್ಮಿಳಾ ಮಾತೋಂಡ್ಕರ್, "ಇದೊಂದು ಸಮಧಾನಕರ ಸುದ್ದಿಯಾಗಿದೆ. ಮಹಾರಾಷ್ಟ್ರ ಸರಕಾರ ಮತ್ತು ಮಹಾರಾಷ್ಟ್ರದ ಜನತೆಗೆ ಈ ಕ್ರೆಡಿಟ್‌ ಸಲ್ಲುತ್ತದೆ. ಈ ಯುದ್ಧವು ಕಷ್ಟಕರ ಮತ್ತು ದೀರ್ಘಾವದಿಯದ್ದಾಗಿದೆ. ಎಲ್ಲರೂ ಮಾಸ್ಕ್ ಧರಿಸಿ, ಸರಕಾರದ ನಿಯಮಗಳನ್ನು ಪಾಲಿಸಿ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಉಲ್ಬಣವಾಗುತ್ತಿರುವ ಸಂದರ್ಭದಲ್ಲಿ ಮುಂಬೈ ಮಾದಿಯು ಸುಪ್ರೀಂ ಕೋರ್ಟ್‌ ನ ಪ್ರಶಂಸೆಯ್ನು ಗಳಿಸಿದೆ. ಮೇ 1ರಿಂದ ಮುಂಬೈಯಲ್ಲಿ ದಿನವೊಂದಕ್ಕೆ 4000ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕಿಂತ ಮುಂಚೆ 8000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿತ್ತು. ಮುಂಬೈಯಲ್ಲಿ ಸಾಕಷ್ಟು ವೈದ್ಯಕೀಯ ಆಮ್ಲಜನಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಮಾಡಿದ ಪ್ರಯತ್ನವನ್ನು ಸುಪ್ರೀಂ ಕೋರ್ಟ್ ಶ್ಲಾಘಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News